K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. HYBE ಆಯೋಜಿಸುತ್ತಿರುವ ಎರಡು ದಿನಗಳ ಈ ಅದ್ಧೂರಿ ಸಂಗೀತ ಉತ್ಸವವು ನವದೆಹಲಿಯಲ್ಲಿ ನಡೆಯಲಿದೆ.
ಮುಂಬೈ (ಅ.08): ವಿಶ್ವದ ಪ್ರಮುಖ K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. ಹೈಬ್ ಆಯೋಜಿಸುತ್ತಿರುವ ಈ ಎರಡು ದಿನಗಳ ಸಂಗೀತ ಉತ್ಸವವು 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಹೊರಗೆ ನಡೆಯಲಿರುವ ಮೊದಲ Weverse Con Festival ಇದಾಗಿದೆ.
ಭಾರತದಲ್ಲಿ ನಡೆಯಲಿರುವ ಪ್ರಮುಖ K-pop ಉತ್ಸವಗಳಲ್ಲಿ ಇದೂ ಒಂದಾಗಿದ್ದು, ದೇಶ-ವಿದೇಶಗಳ ಜನಪ್ರಿಯ ಕಲಾವಿದರ ಸಂಗೀತ ಪ್ರದರ್ಶನಗಳು, ಅದ್ಧೂರಿ ಕಾರ್ಯಕ್ರಮಗಳು ಹಾಗೂ ಅಭಿಮಾನಿಗಳಿಗಾಗಿ ವಿಶೇಷ ಚಟುವಟಿಕೆಗಳು ಒಂದೇ ವೇದಿಕೆಯಲ್ಲಿ ನಡೆಯಲಿವೆ.
Weverse ಮೂಲಕ ವಿಶ್ವದಾದ್ಯಂತದ ಅಭಿಮಾನಿಗಳ ಸಮುದಾಯವನ್ನು ನೇರ ಅನುಭವದೊಂದಿಗೆ ಸಂಪರ್ಕಿಸುವುದು ಈ ಉತ್ಸವದ ವಿಶೇಷತೆಯಾಗಿದೆ. ಇಲ್ಲಿ ಕೇವಲ ಸಂಗೀತ ಕಾರ್ಯಕ್ರಮಗಳಷ್ಟೇ ಅಲ್ಲದೆ, ಅಭಿಮಾನಿಗಳೊಂದಿಗೆ ಸಂವಾದ, ವಿವಿಧ ಮನರಂಜನಾ ಚಟುವಟಿಕೆಗಳು, ಬ್ರ್ಯಾಂಡ್‌ಗಳ ವಿಶೇಷ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಅನುಭವಗಳಿಗೂ ಅವಕಾಶ ಇರಲಿದೆ.
ಕಲಾವಿದರು ಮತ್ತು ಅಭಿಮಾನಿಗಳ ನಡುವಿನ ನೇರ ಸಂಪರ್ಕಕ್ಕೆ ಈ ಉತ್ಸವದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರು ಮತ್ತು ಇತರ ಅಭಿಮಾನಿಗಳೊಂದಿಗೆ ಸಮಯ ಕಳೆಯಲು ಹಲವು ಅವಕಾಶಗಳು ಇರಲಿವೆ. ಭಾರತೀಯ ಮತ್ತು K-pop ಕಲಾವಿದರ ಜೊತೆಗೆ, ವಿವಿಧ ದೇಶಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಈ ಕಾರ್ಯಕ್ರಮಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ.
ಭಾರತೀಯ ಪ್ರೇಕ್ಷಕರಿಗೆ ಹೊಸ ಅನುಭವ
ಹೈಬ್ ನ ಸಿಇಒ ಜಾಸನ್ ಜೈಸಾಂಗ್ ಲೀ ಮಾತನಾಡಿ, 'Weverse Con Festival India ಮೂಲಕ ನಮ್ಮ ‘multi-home, multi-genre’ ಕಾರ್ಯತಂತ್ರಕ್ಕೆ ಹೊಸ ಅಧ್ಯಾಯ ಆರಂಭವಾಗಲಿದೆ. ಜಾಗತಿಕ ಮಟ್ಟದಲ್ಲಿ ಹೈಬ್ ನ ಹೈಬಿನ ಬೆಳವಣಿಗೆಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಭಾರತದ ಸೃಜನಶೀಲತೆ ಮತ್ತು ನಮ್ಮ ಜಾಗತಿಕ ಅನುಭವವನ್ನು ಒಟ್ಟುಗೂಡಿಸಿ, ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾಗುವ ಹೊಸ ಅನುಭವವನ್ನು ನೀಡಲು ನಾವು ಬಯಸಿದ್ದೇವೆ. ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರೊಂದಿಗೆ ಸಂಪರ್ಕ ಸಾಧಿಸಿ, ಸಂಭ್ರಮಿಸಿ ಮತ್ತು ಹೊಸ ಅನುಭವಗಳನ್ನು ಪಡೆಯುವಂತಹ ಉತ್ಸವವನ್ನು ಭಾರತದಲ್ಲಿ ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ' ಎಂದರು.
Weverse ಕಂಪನಿಯ ಅಧ್ಯಕ್ಷ ಝೋಯಿಲ್ ಯಾಂಗ್ ಮಾತನಾಡಿ, 'ಭಾರತವು ವಿಶ್ವದ ಅತಿ ದೊಡ್ಡ K-pop ಅಭಿಮಾನಿ ಸಮುದಾಯಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಹೈಬ್ ಜೊತೆಗೆ Weverse Con Festival ಅನ್ನು ಭಾರತಕ್ಕೆ ತರಲು ನಾವು ಸಂತೋಷಪಡುತ್ತೇವೆ. Weverse ಮೂಲಕ ಆನ್‌ಲೈನ್‌ನಲ್ಲಿ ಕಲಾವಿದರು ಮತ್ತು ಅಭಿಮಾನಿಗಳನ್ನು ಸಂಪರ್ಕಿಸುತ್ತಿದ್ದೇವೆ. ಇದೀಗ ಈ ಉತ್ಸವದ ಮೂಲಕ ಆ ಅನುಭವವನ್ನು ಅಭಿಮಾನಿಗಳಿಗೆ ನೇರವಾಗಿ ನೀಡಲು ನಾವು ಬಯಸಿದ್ದೇವೆ' ಎಂದರು.
Weverse Con Festival India ಅನ್ನುಬುಕ್ ಮೈ ಶೋನ ಲೈವ್ ಮನರಂಜನಾ ವಿಭಾಗವಾದ ಬುಕ್ ಮೈ ಶೋ ಲೈವ್ ಸಹ-ನಿರ್ಮಿಸಿ, ಪ್ರಚಾರ ಮಾಡಲಿದೆ. ಭಾರತದಲ್ಲಿ K-pop ಕಾರ್ಯಕ್ರಮಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಉತ್ಸವವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಬುಕ್ ಮೈ ಶೋ ಲೈವ್ ತನ್ನ ಅನುಭವ ಮತ್ತು ವ್ಯಾಪಕ ಪ್ರೇಕ್ಷಕರ ಸಂಪರ್ಕವನ್ನು ಬಳಸಿಕೊಳ್ಳಲಿದೆ. ಉತ್ಸವದ ಟಿಕೆಟ್‌ಗಳು ಬುಕ್ ಮೈ ಶೋನಲ್ಲಿ ಮಾತ್ರ ಲಭ್ಯವಿರಲಿವೆ.
ಹೈಬ್ ಮತ್ತು Weverse ಜೊತೆಗೆ Kia India, Mastercard, Project B ಮತ್ತು Samsung ಉತ್ಸವದ ಪ್ರಮುಖ ಪಾಲುದಾರರಾಗಿದ್ದಾರೆ. NONGSHIM ಸಹ ಅಸೋಸಿಯೇಟ್ ಪಾಲುದಾರರಾಗಿ ಸೇರ್ಪಡೆಯಾಗಿದೆ. ಉತ್ಸವದ ಬ್ಯಾಂಕಿಂಗ್ ಪಾಲುದಾರವಾಗಿರುವ Mastercard, ತನ್ನ ಕಾರ್ಡ್‌ದಾರರಿಗೆ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್‌ಗೆ ವಿಶೇಷ ಅವಕಾಶ ನೀಡಲಿದೆ.
ಉತ್ಸವದ ಉದ್ದೇಶವೇನು?
ಉತ್ಸವದ ಮೊದಲ ಭಾರತ ಆವೃತ್ತಿಯಲ್ಲಿ ವಿಶ್ವದ ಪ್ರಮುಖ K-pop ಕಲಾವಿದರ ಜೊತೆಗೆ ಭಾರತದ ವಿವಿಧ ಸಂಗೀತ ಕ್ಷೇತ್ರಗಳ ಕಲಾವಿದರೂ ಭಾಗವಹಿಸಲಿದ್ದಾರೆ. ಭಾರತೀಯ ಮತ್ತು ಜಾಗತಿಕ ಸಂಗೀತವನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ, ಅಭಿಮಾನಿಗಳಿಗೆ ಹೊಸ ರೀತಿಯ ಸಂಗೀತ ಮತ್ತು ಮನರಂಜನೆಯ ಅನುಭವ ನೀಡುವುದು ಉತ್ಸವದ ಉದ್ದೇಶವಾಗಿದೆ.
ಭಾರತದಲ್ಲಿ K-pop ಮತ್ತು ಜಾಗತಿಕ ಸಂಗೀತದ ಬೆಳವಣಿಗೆಗೆ ಹೈಬ್ ತನ್ನ ಬದ್ಧತೆಯನ್ನು ಮುಂದುವರಿಸಿದೆ. ಹೈಬ್ ನ ಭಾರತದಲ್ಲಿನ ಕಚೇರಿಯಾದ ಹೈಬ್ ಇಂಡಿಯಾ, ದೇಶಾದ್ಯಂತ ಆಡಿಷನ್‌ಗಳನ್ನು ನಡೆಸಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆಳೆಸುತ್ತಿದೆ. ಇದರ ಜೊತೆಗೆ, ಭಾರತೀಯ ಪ್ರೇಕ್ಷಕರಿಗೆ ಇಷ್ಟವಾಗುವ ಮತ್ತು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ವಿಷಯಗಳು ಹಾಗೂ ಕಲಾವಿದರನ್ನು ಬೆಳೆಸುವತ್ತವೂ ಸಂಸ್ಥೆ ಗಮನಹರಿಸಿದೆ.


