ಕೃತಿ ಶೆಟ್ಟಿ ತಮ್ಮ ಡ್ರೀಮ್‌ ರೋಲ್‌ ಬಗ್ಗೆ ಮಾತನಾಡಿದ್ದು, ಪ್ರಿನ್ಸೆಸ್‌ ಹಾಗೂ ವಾರಿಯರ್‌ ರೀತಿಯ ಪವರ್‌ಫುಲ್ ಪಾತ್ರಗಳಲ್ಲಿ ನಟಿಸುವ ಆಸೆಯನ್ನು ಬಹಿರಂಗಪಡಿಸಿದ್ದಾರೆ. ‘ಉಪ್ಪೆನ’ ಮೂಲಕ ಭರ್ಜರಿ ಎಂಟ್ರಿ ಕೊಟ್ಟ ಕೃತಿ..

ಕೆರಿಯರ್‌ ಆರಂಭದಲ್ಲೇ ಸಾಲು ಸಾಲು ಸಿನಿಮಾಗಳ ಮೂಲಕ ಸಕ್ಸಸ್ ಕಂಡು ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ ಕೃತಿ ಶೆಟ್ಟಿ, ಆ ನಂತರ ಮಾತ್ರ ಬ್ಯಾಕ್ ಟು ಬ್ಯಾಕ್ ಸೋಲುಗಳಿಂದ ಕಂಗೆಟ್ಟಿದ್ದಾರೆ. ಟಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗುವುದರ ಜೊತೆಗೆ, ಇತರೆ ಭಾಷೆಗಳಲ್ಲಿ ಅವಕಾಶಗಳು ಸಿಕ್ಕರೂ ನಿರೀಕ್ಷಿತ ಮಟ್ಟದ ಸಕ್ಸಸ್ ಸಿಗದೇ ಇರುವುದರಿಂದ ಈ ಬ್ಯೂಟಿಯ ಕೆರಿಯರ್ ಸದ್ಯ ಕೊಂಚ ಕಷ್ಟದ ಹಾದಿಯಲ್ಲಿದೆ. ಸದ್ಯ ದೊಡ್ಡ ಬ್ರೇಕ್‌ಗಾಗಿ ಎದುರು ನೋಡುತ್ತಿರುವ ಕೃತಿ ಶೆಟ್ಟಿ, ಇದೀಗ ತಮ್ಮ ಡ್ರೀಮ್‌ ರೋಲ್‌ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

‘ಉಪ್ಪೆನ’ ಮೂಲಕ ಗ್ರ್ಯಾಂಡ್ ಎಂಟ್ರಿ!

ಕೃತಿ ಶೆಟ್ಟಿ ಸಿಲ್ವರ್‌ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದು ‘ಉಪ್ಪೆನ’ ಸಿನಿಮಾದ ಮೂಲಕ. ಮೊದಲ ಸಿನಿಮಾದಲ್ಲೇ ಬ್ಲಾಕ್‌ಬಸ್ಟರ್ ಸಕ್ಸಸ್‌ ಪಡೆದುಕೊಂಡ ಕೃತಿ, ಒಂದೇ ಸಿನಿಮಾದಿಂದ ಟಾಲಿವುಡ್‌ನಲ್ಲಿ ಭಾರೀ ಕ್ರೇಜ್ ಸಂಪಾದಿಸಿದರು. ಆ ಸಕ್ಸಸ್‌ ಬೆನ್ನಲ್ಲೇ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಾ, ಟಾಲಿವುಡ್‌ನ ಬ್ಯುಸಿ ಹೀರೋಯಿನ್‌ಗಳ ಲಿಸ್ಟ್‌ಗೆ ಸೇರಿಕೊಂಡರು. ಆದರೆ ಆ ಜೋಶ್ ಹೆಚ್ಚು ದಿನ ಮುಂದುವರಿಯಲಿಲ್ಲ. ಕೃತಿ ಶೆಟ್ಟಿ ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ನಿರೀಕ್ಷಿತ ಫಲಿತಾಂಶ ನೀಡದೆ ಹೋಗಿದ್ದರಿಂದ, ಅವರ ಕೆರಿಯರ್ ಕೂಡ ಸಂಕಷ್ಟಕ್ಕೆ ಸಿಲುಕಿತು.

ಇತರೆ ಭಾಷೆಗಳಲ್ಲೂ ಅದೃಷ್ಟ ಕೈಕೊಟ್ಟಿತಾ?

ಟಾಲಿವುಡ್‌ಗೆ ಕೊಂಚ ಬ್ರೇಕ್ ನೀಡಿದ ಕೃತಿ ಶೆಟ್ಟಿ, ಇತರೆ ಭಾಷೆಗಳ ಸಿನಿಮಾಗಳತ್ತ ಗಮನ ಹರಿಸಿದರು. ಆದರೆ ಅಲ್ಲಿಯೂ ಅದೃಷ್ಟ ಹೆಚ್ಚು ಕೈಹಿಡಿಯಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಲಯಾಳಂ ಸಿನಿಮಾ ‘ARM’ ಹೊರತುಪಡಿಸಿ ಕೃತಿಗೆ ಹೇಳಿಕೊಳ್ಳುವಂತಹ ಹಿಟ್ ಸಿಗಲಿಲ್ಲ. ಕಾರ್ತಿಗೆ ಜೋಡಿಯಾಗಿ ನಟಿಸಿದ ‘ವಾ ವಾತಿಯಾರ್’ ಸಿನಿಮಾದ ಮೇಲೆ ಕೃತಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿತು.

ಇನ್ನು ಪ್ರದೀಪ್ ರಂಗನಾಥನ್ ಜೊತೆ ನಟಿಸಿದ ‘Love Insurance Company’ ಸಿನಿಮಾ ಹಲವು ಬಾರಿ ಮುಂದೂಡಿಕೆಯ ಬಳಿಕ ಪ್ರೇಕ್ಷಕರ ಮುಂದೆ ಬಂದರೂ, ನಿರೀಕ್ಷಿಸಿದ ಮಟ್ಟದ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ರವಿ ಮೋಹನ್‌ಗೆ ಜೋಡಿಯಾಗಿ ಕೃತಿ ನಟಿಸಿರುವ ‘ಜೀನಿ’ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಈಗ ಕೃತಿ ಶೆಟ್ಟಿಯ ಡ್ರೀಮ್‌ ರೋಲ್ ಏನು?

ಕೆರಿಯರ್‌ನಲ್ಲಿ ಇಂತಹ ಸವಾಲಿನ ಹಂತ ಎದುರಾಗಿರುವ ನಡುವೆಯೇ ಕೃತಿ ಶೆಟ್ಟಿ ತಮ್ಮ ಡ್ರೀಮ್‌ ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮಗೆ ಪ್ರಿನ್ಸೆಸ್‌ ಹಾಗೂ ವಾರಿಯರ್‌ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಕೃತಿ ಶೆಟ್ಟಿ ಹೇಳಿದ್ದಾರೆ. ಅಂದರೆ, ಇದುವರೆಗೆ ಕಾಣಿಸಿಕೊಂಡಿರುವ ಗ್ಲಾಮರಸ್‌ ಮತ್ತು ಲವ್‌ ಸ್ಟೋರಿ ಪಾತ್ರಗಳಿಗಿಂತ ವಿಭಿನ್ನವಾಗಿ, ಪವರ್‌ಫುಲ್ ಹಾಗೂ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಕೃತಿ ಉತ್ಸುಕರಾಗಿದ್ದಾರೆ.

ಸದ್ಯ ಕೃತಿ ಶೆಟ್ಟಿಯ ಕೆರಿಯರ್‌ ಮತ್ತೆ ಟ್ರ್ಯಾಕ್‌ಗೆ ಬರಬೇಕಾದ ಸಮಯ. ಇಂತಹ ಸಂದರ್ಭದಲ್ಲಿ ಅವರು ಬಯಸುತ್ತಿರುವ ರೇಂಜ್‌ನ ಪ್ರಿನ್ಸೆಸ್‌ ಅಥವಾ ವಾರಿಯರ್‌ ಪಾತ್ರವನ್ನು ಅವರಿಗೆ ನೀಡುವ ಧೈರ್ಯವನ್ನು ಯಾವ ನಿರ್ದೇಶಕರು ಮಾಡುತ್ತಾರೆ? ಅನ್ನೋದು ಈಗ ಕುತೂಹಲ ಮೂಡಿಸಿದೆ. ಅಂತಹ ಒಂದು ಸ್ಟ್ರಾಂಗ್ ಕ್ಯಾರೆಕ್ಟರ್ ಸಿಕ್ಕರೆ ಕೃತಿ ಶೆಟ್ಟಿಯ ಕೆರಿಯರ್‌ಗೆ ಮತ್ತೆ ಬಿಗ್ ಟರ್ನ್ ಸಿಗುವ ಸಾಧ್ಯತೆಯೂ ಇದೆ.