ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ವಿವಾದಗಳ ನಡುವೆ ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವದ ಮೌಲ್ಯಗಳು ಚರ್ಚೆಗೆ ಬರುತ್ತಿವೆ. ವಿನಯ, ಸಂಯಮ ಮತ್ತು ಸಾರ್ವಜನಿಕ ಹೊಣೆಗಾರಿಕೆ ಕುರಿತು ಅಪ್ಪು ಬದುಕು ನೀಡುವ ಸಂದೇಶ ಇಲ್ಲಿದೆ.
- ರಾಜ್
ಪ್ರಸಿದ್ಧಿ, ಅಧಿಕಾರ ಮತ್ತು ಸಾರ್ವಜನಿಕ ಮನ್ನಣೆ ಒಬ್ಬ ವ್ಯಕ್ತಿಗೆ ಹೆಚ್ಚಿನ ಶಕ್ತಿಯನ್ನು ತಂದುಕೊಡುತ್ತವೆ. ಆದರೆ ಆ ಶಕ್ತಿಯನ್ನು ವ್ಯಕ್ತಿ ಹೇಗೆ ಸಮಾಜದ ಮುಂದೆ ಪ್ರದರ್ಶಿಸುತ್ತಾನೆ ಎಂಬುದರ ಮೇಲೆ ಆತನ ನಿಜವಾದ ಯೋಗ್ಯತೆ ನಿರ್ಧಾರವಾಗುತ್ತದೆ. ಕಳೆದೊಂದು ವಾರದಿಂದ ಕನ್ನಡ ಚಿತ್ರರಂಗದಲ್ಲಿ ಬೇಡದ ಗಲಾಟೆಗಳೇ ಹೆಚ್ಚು. ಈ ಹೀರೋ ಆ ಹೀರೋನನ್ನು ಬೈದು, ಅವರ ಕಡೆಯವರು ಇವರಿಗೆ ತೆಗಳಿ ಒಟ್ಟಾರೆ ಸಂದರ್ಭ ನಕರಾತ್ಮಕವಾಗಿ ಬದಲಾಗಿದೆ. ಸಾಲದ್ದಕ್ಕೆ ರಶ್ಮಿಕಾ ಮಂದಣ್ಣ ವಿವಾದವೂ ಸೇರಿಕೊಂಡು ಗಲಾಟೆ ಮೋಡ್ ಜಾರಿಯಲ್ಲಿದೆ.
ಇವೆಲ್ಲಾ ಬೆಳವಣಿಗೆಗಳು ಸೆಲೆಬ್ರಿಟಿಗಳ ನೈತಿಕ ಹೊಣೆಗಾರಿಕೆಯನ್ನೇ ಪ್ರಶ್ನಿಸುವಂತೆ ಮಾಡಿವೆ. ವೈಯಕ್ತಿಕ ವಿಚಾರಗಳ ಕುರಿತ ಕೆಸರೆರಚಾಟಗಳು ಮಾಧ್ಯಮಗಳಲ್ಲಿ ವಿಪರೀತ ಪ್ರಚಾರ ಪಡೆಯುತ್ತಿವೆ. ಮೈಕ್ ಸಿಕ್ಕರೆ ಸಾಕು ಅಹಂಕಾರ ಪ್ರದರ್ಶಿಸುವುದು, ಸಾರ್ವಜನಿಕವಾಗಿ ರಂಪಾಟ ನಡೆಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದು ಕೆಲವರಿಗೆ ಸ್ಟಾರ್ಡಮ್ನ ಭಾಗವಾಗಿಬಿಟ್ಟಿದೆ.
ಇಂಥದ್ದನ್ನೆಲ್ಲಾ ನೋಡುವಾಗ ಆ ಮನುಷ್ಯ ಹೇಗೆ ದೇವರಂತಿದ್ದರು ಎಂದು ಅಚ್ಚರಿಯಾಗುತ್ತದೆ. ಪುನೀತ್ ರಾಜ್ಕುಮಾರ್ ನಿಜಕ್ಕೂ ಒಬ್ಬ ಸೆಲೆಬ್ರಿಟಿ ಸಮಾಜದಲ್ಲಿ ಹೇಗಿರಬೇಕು, ಮಾತನ್ನು ಹೇಗೆ ನಿಗ್ರಹಿಸಬೇಕು, ರಿಯಾಲಿಟಿ ಶೋಗಳಲ್ಲಿ ಹೇಗೆ ವರ್ತಿಸಬೇಕು ಮತ್ತು ಸಾರ್ವಜನಿಕ ಬದುಕಿನ ಘನತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಪರಿಪೂರ್ಣ ಮಾದರಿಯಾಗಿದ್ದರು.
1. ಅಪರೂಪದ ಸಂಸ್ಕಾರ
ಅಪ್ಪು ಅವರ ಇಡೀ ಬದುಕಿನಲ್ಲಿ ಅವರು ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಅಥವಾ ಕೀಳಾಗಿ ಮಾತನಾಡಿದ ಒಂದೇ ಒಂದು ನಿದರ್ಶನವಿಲ್ಲ. ಕ್ಯಾಮೆರಾಗಳ ಮುಂದೆ ಮಾತ್ರವಲ್ಲದೆ, ತೀರಾ ಆಪ್ತರ ನಡುವೆಯೂ ಅವರು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಿರುವುದು ಜಗತ್ತಿಗೆ ಗೊತ್ತಿಲ್ಲ. ಎಷ್ಟೋ ಬಾರಿ ಸಹೋದ್ಯೋಗಿಗಳೋ ಅಥವಾ ಜೊತೆಗಿದ್ದವರೋ ಯಾರನ್ನೋ ತೆಗಳಲು ಅಥವಾ ಪರರ ತಮಾಷೆ ಮಾಡಲು ಮುಂದಾದಾಗಲೂ ಅಪ್ಪು ತಕ್ಷಣ ಗಾಬರಿಯಿಂದ ತಮ್ಮ ಬಾಯಿಗೆ ಕೈ ಇಟ್ಟುಕೊಳ್ಳುತ್ತಿದ್ದರು. ‘ಅಯ್ಯೋ, ಬೇಡ ಬಿಡಿ... ಆ ತರಹ ಮಾತಾಡಬಾರದು, ಅವರವರ ಕಷ್ಟ ಅವರಿಗಿರುತ್ತೆ’ ಎಂದು ಅತ್ಯಂತ ಮೃದುವಾಗಿ ವಿಷಯವನ್ನು ಬೇರೆಡೆಗೆ ತಿರುಗಿಸುತ್ತಿದ್ದರು. ಇನ್ನೊಬ್ಬರ ತಪ್ಪುಗಳನ್ನು ಹೆಕ್ಕಿ ಸಾರ್ವಜನಿಕವಾಗಿ ಚರ್ಚಿಸುವುದಕ್ಕಿಂತ, ಅವರಿಗೆ ಮುಜುಗರವಾಗದಂತೆ ಗೌರವ ಕಾಯುವುದು ಅವರ ರಕ್ತಗತ ಗುಣವಾಗಿತ್ತು. ಅವರೇ ಹೇಳಿದ ಹಾಗೆ, ಅವರು ಅಪ್ಪಿತಪ್ಪಿಯೂ ಇನ್ನೊಬ್ಬರಿಗೆ ನೋವಾಗದಂತೆ ಬದುಕಿ ಹೊರಟುಹೋದರು.
2. ಬಲಗೈ ಕೊಟ್ಟದ್ದು ಎಡಗೈಗೆ ತಿಳಿಯಲಿಲ್ಲ
ಇಂದಿನ ತಾರಾ ಸಂಸ್ಕೃತಿಯಲ್ಲಿ ಸಣ್ಣದೊಂದು ಸಹಾಯ ಮಾಡಿದರೂ ಹತ್ತು ಕ್ಯಾಮೆರಾಗಳನ್ನು ನಿಲ್ಲಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವವರೇ ಹೆಚ್ಚು. ಆದರೆ ಅಪ್ಪು ನೂರಾರು ಸಂಸ್ಥೆಗಳನ್ನು ಸದ್ದಿಲ್ಲದೆ ಪೋಷಿಸಿದರು. ತಾವು ಬದುಕಿದ್ದಾಗ ಮಾಡಿದ ಈ ಅಗಾಧ ಸಮಾಜಸೇವೆಯನ್ನು ಅವರು ಎಂದೂ ತಮ್ಮ ಸಿನಿಮಾ ಪ್ರಚಾರಕ್ಕಾಗಲಿ, ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಲಿ ಬಳಸಿಕೊಳ್ಳಲೇ ಇಲ್ಲ. ಅದೆಲ್ಲವೂ ಪೂರ್ಣ ಪ್ರಮಾಣದಲ್ಲಿ ಗೊತ್ತಾಗಿದ್ದೇ ಅವರು ತೀರಿಕೊಂಡ ಬಳಿಕ. ಹಾಗಾಗಿಯೇ ಅವರು ಚಿರಕಾಲ ಮನಸ್ಸಲ್ಲಿ ಉಳಿಯಲಿದ್ದಾರೆ.
3. ಮೌನವೇ ಅಹಂಕಾರಕ್ಕೆ ಉತ್ತರ
ಸಿನಿಮಾ ರಂಗದ ಪೈಪೋಟಿ, ಈರ್ಷ್ಯೆ ಮತ್ತು ಅಪಸ್ವರಗಳು ಪುನೀತ್ ಅವರಿಗೂ ಹಲವು ಬಾರಿ ಎದುರಾಗಿದ್ದವು. ಆದರೆ ಅವರು ಯಾವತ್ತೂ ಟೀಕೆಗಳಿಗೆ ಅದೇ ಭಾಷೆಯಲ್ಲಿ ಉತ್ತರಿಸಲು ಹೋಗಲಿಲ್ಲ. ಸಾರ್ವಜನಿಕವಾಗಿ ಸವಾಲು ಹಾಕುವುದು, ಎತ್ತರದ ದನಿ ಪ್ರದರ್ಶಿಸುವ ಹುಂಬತನ ಅವರ ಬಳಿಯೂ ಸುಳಿಯಲಿಲ್ಲ. ಕಹಿ ವಾತಾವರಣವನ್ನೂ ತಮ್ಮ ನಿಷ್ಕಲ್ಮಶ ನಗೆ ಮತ್ತು ಸಂಯಮದಿಂದಲೇ ಕರಗಿಸುತ್ತಿದ್ದರು. ಇಡೀ ಕರ್ನಾಟಕವೇ ತಲೆಬಾಗಿ ಗೌರವಿಸುವ ಡಾ. ರಾಜ್ಕುಮಾರ್ ಅವರ ಪುತ್ರನಾಗಿದ್ದರೂ, ಜನರ ನಡುವೆ ನಿಂತಾಗ ಕೈಮುಗಿದು ನಿಲ್ಲುವ ಅವರ ವಿನಮ್ರತೆ ಪ್ರತಿಯೊಬ್ಬ ಸೆಲೆಬ್ರಿಟಿಯೂ ತಲೆತಗ್ಗಿಸಿ ಕಲಿಯಬೇಕಾದ ಪಾಠ.
4. ಇಂದಿನ ತಾರೆಯರಿಗೆ ಆತ್ಮಾವಲೋಕನದ ಕರೆ
ಬಾಕ್ಸ್ ಆಫೀಸ್ ಗಳಿಕೆ, ಪ್ಯಾಪರಾಜಿಗಳ ವೀಡಿಯೋಗಳು, ಹಿಂಬಾಲಕರ ಸಂಖ್ಯೆ ಅಥವಾ ಅಭಿಮಾನಿಗಳ ಗುಂಪು ಎಂದಿಗೂ ಒಬ್ಬ ವ್ಯಕ್ತಿಯನ್ನು ನಿಜವಾದ ನಾಯಕನನ್ನಾಗಿ ಮಾಡುವುದಿಲ್ಲ. ಸ್ಟಾರ್ ಪಟ್ಟ ಎನ್ನುವುದು ಕೇವಲ ವೈಭೋಗ ಮತ್ತು ದರ್ಪ ತೋರಲು ಸಿಕ್ಕ ಅವಕಾಶವಲ್ಲ. ಅದು ಯುವಪೀಳಿಗೆಗೆ ದಾರಿದೀಪವಾಗಬೇಕಾದ ಹೊಣೆಗಾರಿಕೆ. ಸಾರ್ವಜನಿಕ ಸ್ಥಳಗಳಲ್ಲಿ ತೋರುವ ಅಶಿಸ್ತು, ಪರಸ್ಪರ ಕೆಸರೆರಚಾಟಗಳು ಮತ್ತು ದುಂಡಾವರ್ತನೆಗಳು ಸಮಾಜಕ್ಕೆ ಅತ್ಯಂತ ತಪ್ಪು ಸಂದೇಶವನ್ನು ರವಾನಿಸುತ್ತವೆ. ಅದನ್ನು ಎಲ್ಲಾ ಸೆಲೆಬ್ರಿಟಿಗಳು ಮನಸ್ಸಲ್ಲಿ ಇರಿಸಿಕೊಂಡು ಸಾರ್ವಜನಿಕವಾಗಿ ವರ್ತಿಸುವುದು ಒಳಿತು.
ಅಪ್ಪು ನಮ್ಮನ್ನಗಲಿ ಐದು ವರ್ಷ ಕಳೆದರೂ, ಇಂದಿಗೂ ಮನೆಮನಗಳಲ್ಲಿ ಅವರು ಜೀವಂತವಾಗಿರುವುದು ಕೇವಲ ಬೆಳ್ಳಿತೆರೆಯ ಅಭಿನಯದಿಂದಲ್ಲ, ಬದಲಿಗೆ ಅವರಲ್ಲಿದ್ದ ಮೌನ, ಮಾತಿನ ನಿಗ್ರಹ, ನಿಸ್ವಾರ್ಥ ದಾನ ಮತ್ತು ಅಗಾಧ ಮಾನವೀಯತೆಯಿಂದ. ವಿವಾದ, ಆಕ್ರೋಶ ಮತ್ತು ರಸ್ತೆ ರಂಪಾಟಗಳಲ್ಲಿ ಮುಳುಗಿರುವ ಸೆಲೆಬ್ರಿಟಿಗಳು ಅಪ್ಪು ಅವರ ಈ ಸಂಸ್ಕಾರವನ್ನು ಕನ್ನಡಿಯಂತೆ ಎದುರಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.






