ನಟಿ ಕೀರ್ತಿ ಸುರೇಶ್ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ, ತಮ್ಮ ಕೆಲಸವೇ ಉತ್ತರ ನೀಡಲಿ ಎಂದು ಹೇಳಿದ್ದಾರೆ. ಅಭಿಮಾನಿಗಳ ಜೊತೆಗಿನ ಒಡನಾಟ ಮತ್ತು ವೈಯಕ್ತಿಕ ಮಿತಿಗಳ ಬಗ್ಗೆ ನಟಿ ಹಂಚಿಕೊಂಡ ವಿಚಾರಗಳು ಇಲ್ಲಿವೆ.

‘ನಾನು ಯಾವತ್ತೂ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿಲ್ಲ, ಇನ್ನು ಮುಂದೆಯೂ ಪ್ರತಿಕ್ರಿಯಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕುಳಿತು ನನ್ನ ಬಗ್ಗೆ ಆಡುವ ಮಾತುಗಳಿಗೆ ಸಮರ್ಥನೆ ಕೊಡುವ ಜಾಯಮಾನ ನನ್ನದಲ್ಲ. ಜನರ ಅಭಿಪ್ರಾಯಗಳು ಒಬ್ಬರಿಂದ ಇನ್ನೊಬ್ಬರಿಗೆ ಬದಲಾಗುತ್ತವೆ. ಕೆಲವರಿಗೆ ನಾನು ಇಷ್ಟವಾಗಬಹುದು, ಕೆಲವರಿಗೆ ಆಗದಿರಬಹುದು, ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ. ನನ್ನ ಕೆಲಸದ ಮೇಲೆ ನಂಬಿಕೆ ಇಟ್ಟು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕೈಯಲ್ಲಿದೆ. ನನ್ನ ಕೆಲಸವೇ ಎಲ್ಲದಕ್ಕೂ ಉತ್ತರ ನೀಡಲಿ ಎಂಬುದು ನನ್ನ ನಿಲುವು.’

ಈ ಮಾತು ಹೇಳಿರುವುದು ನಟಿ ಕೀರ್ತಿ ಸುರೇಶ್. ಸಂದರ್ಶನವೊಂದರಲ್ಲಿ ಅವರು ಟೀಕೆಗಳಿಗೆ ಪ್ರತಿಕ್ರಿಯಿಸುವ ಪ್ರಶ್ನೆ ಎದುರಾದಾಗ ಈ ಮಾತು ಹೇಳಿದರು. ಇತ್ತೀಚೆಗೆ ತಮಗೆದುರಾದ ಟೀಕೆಗಳಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಈ ಮಾತು ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳ ಕುರಿತು ಹೇಳಿದ ಎರಡು ವಿಚಾರ ಇಲ್ಲಿವೆ:

ಅಪರೂಪದ ಅವಕಾಶ

1. ನಾವು ಚಿತ್ರರಂಗದಲ್ಲಿ ಈ ಮಟ್ಟಕ್ಕೆ ತಲುಪಿರುವುದೇ ಪ್ರೇಕ್ಷಕರಿಂದ, ಅವರೊಂದಿಗೆ ಒಡನಾಡುವುದು ನಮ್ಮ ಧರ್ಮ. ವಿಮಾನ ಪ್ರಯಾಣದ ವೇಳೆಯಲ್ಲಿ ನನಗೆ ಸಾಮಾನ್ಯ ಜನರೊಂದಿಗೆ ಮಾತನಾಡಲು ಇಷ್ಟ, ಏಕೆಂದರೆ ನಮ್ಮ ವೃತ್ತಿ ಬದುಕಿನಿಂದ ಹೊರಬಂದು ಜನರನ್ನು ಭೇಟಿಯಾಗಲು ಸಿಗುವ ಅಪರೂಪದ ಅವಕಾಶವದು.

ಕೆಲವರು ತೀರಾ ಮುಗ್ಧರು, ಗಂಟೆಗಟ್ಟಲೆ ಆತ್ಮೀಯವಾಗಿ ಮಾತನಾಡುತ್ತಾರೆ. ಕೊನೆಗೆ ಒಂದು ಫೋಟೋ ಕೂಡ ಕೇಳುವುದಿಲ್ಲ. ಆದರೆ ಕೆಲವರು ನಮ್ಮ ವೈಯಕ್ತಿಕ ಪರಿಧಿಯನ್ನು ಅತಿಕ್ರಮಿಸುತ್ತಾರೆ. ಇಂತಹ ಮುಜುಗರದ ಸನ್ನಿವೇಶಗಳನ್ನು ಎದುರಿಸುವುದು ನಮಗೆ ಅನಿವಾರ್ಯವಾಗುತ್ತದೆ.

ಸೆಲ್ಫಿ ಬೇಕೆಂದು ಹಠ!

2. ಇತ್ತೀಚೆಗೆ ನಾನು ಮಿಲನ್‌ನಿಂದ ಭಾರತಕ್ಕೆ ಹಿಂತಿರುಗುತ್ತಿದ್ದಾಗ ಒಂದು ಕೆಟ್ಟ ಅನುಭವವಾಯಿತು. ನಾನು ಒಂದು ಬದಿಯಲ್ಲಿ, ನನ್ನ ಪತಿ ಇನ್ನೊಂದು ಬದಿಯಲ್ಲಿ ಕುಳಿತಿದ್ದೆವು. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಸರಿಯಾಗಿ ನಿಲ್ಲಲೂ ಆಗದೆ ತೂರಾಡುತ್ತಾ ನನ್ನ ಬಳಿ ಬಂದು ಸೆಲ್ಫಿ ಬೇಕೆಂದು ಹಠ ಹಿಡಿದ. ನಾನು ‘ಇಲ್ಲ, ಈಗ ಬೇಡ, ಆಮೇಲೆ ನೋಡೋಣ’ ಎಂದು ಹೇಳಿದೆ.

ಆದರೆ ಆತ ಬಿಡದೆ ‘ಇಲ್ಲ, ಪರವಾಗಿಲ್ಲ’ ಎಂದು ಬಲವಂತ ಮಾಡತೊಡಗಿದ. ಕೊನೆಗೆ ನಾನು ಗಟ್ಟಿಯಾಗಿ ನೋ ಎಂದು ಹೇಳಬೇಕಾಯಿತು. ನನ್ನ ಪತಿ ಸಾರ್ವಜನಿಕರು ಮತ್ತು ಅಭಿಮಾನಿಗಳ ಜೊತೆ ಯಾವಾಗಲೂ ತುಂಬಾ ಮೃದುವಾಗಿ ನಡೆದುಕೊಳ್ಳುವವರು. ಆದರೆ ಅಂದು ಮೊದಲ ಬಾರಿಗೆ ಅವರು ಧ್ವನಿ ಎತ್ತರಿಸಿದರು. ಕೊನೆಗೆ ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು.