ನಟ ಧನ್ವೀರ್‌ ವಿರುದ್ಧ ಆರ್‌ಆರ್‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಶೋಕ್ದಾರ್‍‌ಗೆ ಬುಡಕ್ಕೆ ಬೆಂಜಿ ಇಟ್ಟರಾ ವಿಜಯಲಕ್ಷ್ಮೀ ಎನ್ನುವ ಮಾತು ಇದೀಗ ಗಾಂಧಿನಗರದಲ್ಲಿ ಭುಗಿಲೆದ್ದಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಹಾಗೂ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಆದ ನಾಗರಾಜ್ ಎಂಬುವವರು ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ದೂರಿಗೆ ಕಾರಣ!

ನಟ ಧನ್ವೀರ್ ಅವರು ಮ್ಯಾನೇಜರ್ ನಾಗರಾಜ್ ಅವರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹಾಗೂ ಕೆಟ್ಟದಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ಧನ್ವೀರ್ ಅವರು ಬೈದಿರುವ ಆಡಿಯೋ ರೆಕಾರ್ಡಿಂಗ್ ಸಮೇತ ಮ್ಯಾನೇಜರ್ ನಾಗರಾಜ್ ಅವರು ಪೊಲೀಸರಿಗೆ ದೂರು ಒಪ್ಪಿಸಿದ್ದಾರೆ. ನಾಗರಾಜ್ ನೀಡಿದ ದೂರಿನ ಆಧಾರದ ಮೇಲೆ ಆರ್.ಆರ್. ನಗರ ಪೊಲೀಸರು ಧನ್ವೀರ್ ವಿರುದ್ಧ ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.

ಮುಂದಿನ ನಡೆ!

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮುಂದಿನ ವಿಚಾರಣೆಗಾಗಿ ನಟ ಧನ್ವೀರ್ ಅವರಿಗೆ ಬುಲಾವ್ (ನೋಟಿಸ್) ನೀಡಲು ಸಿದ್ಧತೆ ನಡೆಸಿದ್ದಾರೆ. ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲೂ ಧನ್ವೀರ್ ಅವರು ಅವರ ಕುಟುಂಬಕ್ಕೆ ನಿಕಟವಾಗಿದ್ದರು. ಈಗ ಸ್ವತಃ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಮೇಲೆಯೇ ಧನ್ವೀರ್ ಗಲಾಟೆ ಮಾಡಿಕೊಂಡಿರುವುದು ಗಾಂಧಿನಗರದಲ್ಲಿ ಸಂಚಲನವೊಂದು ಸೃಷ್ಟಿಯಾದಂತೆ ಇದೆ.

ಆಡಿಯೋ ಕ್ಲಿಪ್ ವೈರಲ್ ಆತಂಕ!

ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ನೀಡಿರುವ ಆಡಿಯೋ ಸಾಕ್ಷ್ಯದಲ್ಲಿ ಧನ್ವೀರ್ ಬಳಸಿದ್ದಾರೆ ಎನ್ನಲಾದ ಅವಾಚ್ಯ ಶಬ್ದಗಳ ವಿವರಗಳಿದ್ದು, ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಾಧ್ಯತೆ ಇರುವುದರಿಂದ ನಟನಿಗೆ ಕಾನೂನು ಸಂಕಷ್ಟ ಎದುರಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ!

ರೇಣುಕಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ದರ್ಶನ್ ಆಪ್ತ ವಲಯದ ಮತ್ತೊಬ್ಬ ನಟ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಇಡೀ ಕನ್ನಡ ಚಿತ್ರರಂಗ ಹಾಗೂ ದರ್ಶನ್ ಅಭಿಮಾನಿ ಬಳಗದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಇದೀಗ ದರ್ಶನ್‌ಗೆ ತಮ್ಮನಂತೆ ಬಿಂಬಿತವಾಗುತ್ತಿದ್ದ ಧನ್ವೀರ್ ವಿರುದ್ಧವೇ ದರ್ಶನ ಕುಟುಂಬ ತಿರುಗಿ ಬಿತ್ತಾ? ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿ ಸಾಮಾನ್ಯವಾಗಿ ಕಂಡು ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಕೇಸ್‌ ಯಾವ ಹಂತಕ್ಕೆ ತಲುಪಲಿದೆ ಎನ್ನುವುದು ಸಹ ಕಾದು ನೋಡುವ ಹಂತದಲ್ಲಿ ಇದೆ.