ಕನ್ನಡದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಚರಣ್ ರಾಜ್, ತೆಲುಗಿನ 'ಪ್ರತಿಘಟನೆ' ಸಿನಿಮಾ ಮೂಲಕ ದಕ್ಷಿಣ ಭಾರತದಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು. ಈ ಚಿತ್ರದ ಯಶಸ್ಸಿನ ಬಳಿಕ ಬೆಂಗಳೂರಿನಲ್ಲಿ ಅವರಿಗೆ 108 ಅಡಿ ಎತ್ತರದ ಕಟೌಟ್ ನಿರ್ಮಿಸಲಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚುತ್ತಿದ್ದ ನಟ ಚರಣ್ ರಾಜ್, ಒಂದೇ ಒಂದು ತೆಲುಗು ಸಿನಿಮಾ ಮೂಲಕ ದಕ್ಷಿಣ ಭಾರತದಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು. ಆ ಚಿತ್ರದ ಯಶಸ್ಸು ಅವರಿಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳನ್ನು ತಂದುಕೊಟ್ಟಿತು. ಬೆಂಗಳೂರಿನಲ್ಲಿ ಬರೋಬ್ಬರಿ 108 ಅಡಿ ಎತ್ತರದ ಕಟೌಟ್ ಕೂಡ ನಿಂತಿತು. ಆದರೆ, ಇದೇ ಯಶಸ್ಸು ಕನ್ನಡದಲ್ಲಿ ಹೀರೋ ಆಗಿ ಮುಂದುವರಿಯುವ ಅವರ ಅವಕಾಶಗಳಿಗೆ ಅಡ್ಡಿಯಾಯಿತು. ಬಹುಭಾಷಾ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ಕಾರಣ ತಾಯ್ನಾಡಿನ ಚಿತ್ರರಂಗದಲ್ಲಿ ನಾಯಕನಾಗಿ ನಟಿಸಲು ಸಮಯವೇ ಸಿಗಲಿಲ್ಲ. ಈ ಕುರಿತು ಮಾತನಾಡಿರುವ ಚರಣ್ ರಾಜ್, 'ಒಂದೇ ಸಿನಿಮಾದಿಂದ ಹೀರೋನಿಂದ ಜೀರೋ ಆದೆ' ಎಂಬ ತಮ್ಮ ವೃತ್ತಿಜೀವನದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.
ಕನ್ನಡದಲ್ಲಿ ಹೀರೋ ಆಗಿದ್ದ ಚರಣ್ ರಾಜ್ಗೆ ತೆಲುಗಿನಿಂದ ಬಂತು ವಿಲನ್ ಆಫರ್!
ಚರಣ್ ರಾಜ್ ಅವರ ಸಿನಿ ಪಯಣ ಆರಂಭವಾಗಿದ್ದು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ. 'ಪರಾಜಿತ' ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ಮಧು ಆರ್ಟ್ಸ್ ಫಿಲ್ಮ್ಸ್ ಬ್ಯಾನರ್ನಲ್ಲಿ ಅಬ್ಬಾಯಿ ನಾಯ್ಡು ನಿರ್ದೇಶನದ 'ಪರಾಜಿತ' ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಅಷ್ಟೇ ಅಲ್ಲ, ಒಂದೇ ನಿರ್ಮಾಣ ಸಂಸ್ಥೆಯಡಿ ಸತತ ಏಳು ಸಿನಿಮಾಗಳಲ್ಲಿ ನಟಿಸಿ ಉತ್ತಮ ಹೆಸರು ಗಳಿಸಿದ್ದರು. ಹೀಗೆ ಕನ್ನಡದಲ್ಲಿ ಹೀರೋ ಆಗಿ ಗುರುತಿಸಿಕೊಳ್ಳುತ್ತಿದ್ದ ಸಮಯದಲ್ಲೇ ತೆಲುಗಿನಿಂದ ಅವರಿಗೆ ಅನಿರೀಕ್ಷಿತ ಆಫರ್ ಬಂತು.
ಕೆಸಿಎನ್ ಮೂವೀಸ್ ನಿರ್ಮಾಣದಲ್ಲಿ ಟಿ. ಕೃಷ್ಣ ನಿರ್ದೇಶನ ಮಾಡುತ್ತಿದ್ದ 'ಪ್ರತಿಘಟನೆ' ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುವಂತೆ ಆಹ್ವಾನ ನೀಡಲಾಯಿತು. ಆದರೆ, ಕನ್ನಡದಲ್ಲಿ ನಾಯಕನಾಗಿ ನಟಿಸುತ್ತಿದ್ದ ಚರಣ್ ರಾಜ್ಗೆ ತೆಲುಗಿನಲ್ಲಿ ವಿಲನ್ ಆಗುವುದು ಆರಂಭದಲ್ಲಿ ಇಷ್ಟವಿರಲಿಲ್ಲ. ಹೀಗಾಗಿ ಆ ಅವಕಾಶವನ್ನು ನಿರಾಕರಿಸಿದ್ದರು. ಆದರೆ, ಕೆಸಿಎನ್ ಮೂವೀಸ್ನ ಚಂದ್ರು ಸೇರಿದಂತೆ ಸ್ನೇಹಿತರು, ಉಷಾಕಿರಣ್ ಮೂವೀಸ್ನವರು ಟಿ. ಕೃಷ್ಣ ಅವರ ನಿರ್ದೇಶನದ ಸಾಮರ್ಥ್ಯವನ್ನು ವಿವರಿಸಿ ಈ ಅವಕಾಶವನ್ನು ಕೈಬಿಡಬಾರದು ಎಂದು ಮನವೊಲಿಸಿದರು. ಕೊನೆಗೆ ಭಾರಿ ಮುಂಗಡ ಹಣ ನೀಡಿದ ಬಳಿಕ ಚರಣ್ ರಾಜ್ 'ಪ್ರತಿಘಟನೆ' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು.
ಚರಣ್ ರಾಜ್ ವಿಲನ್ ಆಗ್ತಾರಾ ಎಂದು ಅನುಮಾನಪಟ್ಟಿದ್ದ ಚಿತ್ರತಂಡ!
'ಪ್ರತಿಘಟನೆ' ಚಿತ್ರೀಕರಣದ ವೇಳೆ ಚರಣ್ ರಾಜ್ಗೆ ಹಲವು ಸವಾಲುಗಳು ಎದುರಾದವು. ಆಗ ಅವರಿಗೆ ತೆಲುಗು ಭಾಷೆಯ ಮೇಲೆ ಹೆಚ್ಚಿನ ಹಿಡಿತವಿರಲಿಲ್ಲ. ಮತ್ತೊಂದೆಡೆ, ಮದ್ರಾಸ್ನಲ್ಲಿ ತಮಿಳು ಸಿನಿಮಾಗಳ ಚಿತ್ರೀಕರಣದಲ್ಲಿದ್ದ ಅವರನ್ನು ನೋಡಲು ನಿರ್ದೇಶಕ ಟಿ. ಕೃಷ್ಣ, ಸುತ್ತಿವೇಲು ಹಾಗೂ ಅರುಣಾಚಲಂ ರಾವ್ ಸೇರಿದಂತೆ ಕೆಲವರು ಬಂದಿದ್ದರು. ಆಗ ಮೀಸೆ ಇಲ್ಲದೆ, ಸ್ವಲ್ಪ ದಪ್ಪಗಿದ್ದ ಚರಣ್ ರಾಜ್ ಅವರನ್ನು ನೋಡಿ ಕೆಲವರು ಇವರಿಂದ ಖಳನಾಯಕನ ಪಾತ್ರ ಮಾಡಿಸಲು ಸಾಧ್ಯವೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಆದರೆ, ನಿರ್ದೇಶಕ ಟಿ. ಕೃಷ್ಣ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. 'ಪರಾಜಿತ' ಸಿನಿಮಾದಲ್ಲಿ ಚರಣ್ ರಾಜ್ ತೋರಿಸಿದ್ದ ಶಕ್ತಿಶಾಲಿ ಅಭಿನಯ ಹಾಗೂ ಅವರ ವಿಭಿನ್ನ ಗೆಟಪ್ಗಳನ್ನು ನೆನಪಿಸಿಕೊಂಡು ಅವರನ್ನೇ ಆಯ್ಕೆ ಮಾಡಿದ್ದರು. ವಿಶಾಖಪಟ್ಟಣದಲ್ಲಿ ಚಿತ್ರೀಕರಣ ಆರಂಭವಾದಾಗ ಭಾಷೆಯ ಸಮಸ್ಯೆ ಒಂದೆಡೆಯಾದರೆ, ಮೇಕಪ್ ಮತ್ತೊಂದೆಡೆ ಚರಣ್ ರಾಜ್ಗೆ ಕಿರಿಕಿರಿ ಉಂಟುಮಾಡಿತ್ತು. ಗಡ್ಡ, ಮೀಸೆ, ಕಂದು ಬಣ್ಣದ ಹುಬ್ಬುಗಳು ಹಾಗೂ ಲೆನ್ಸ್ಗಳನ್ನು ಹಾಕಿ ಅವರನ್ನು ಭಯಾನಕ ಖಳನಾಯಕನಂತೆ ಸಿದ್ಧಪಡಿಸಲಾಗಿತ್ತು.
ಈ ಗೆಟಪ್ ಕಂಡು ಅವರಿಗೆ ತೀವ್ರ ಅಸಮಾಧಾನವಾಗಿತ್ತು. ಒಂದು ಹಂತದಲ್ಲಿ ಈ ಸಿನಿಮಾ ಕೈತಪ್ಪಿದರೆ ಸಾಕು ಎಂದೂ ಅನಿಸಿತ್ತಂತೆ. ಆದರೆ, ಮೊದಲ ದೃಶ್ಯದಲ್ಲೇ ಚರಣ್ ರಾಜ್ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಜೀಪಿನಿಂದ ಇಳಿದು ಕೈಯಲ್ಲಿ ಕೋಲು ಹಿಡಿದು ಬರುವ ದೃಶ್ಯದಲ್ಲಿ ಅವರ ಅಭಿನಯ ಕಂಡು ಚಿತ್ರತಂಡವೇ ಬೆರಗಾಯಿತು. ಸುತ್ತಿವೇಲು ಸೇರಿದಂತೆ ಎಲ್ಲರೂ ಅವರ ನಟನೆಯನ್ನು ಮೆಚ್ಚಿಕೊಂಡರು. ನಿರ್ದೇಶಕ ಟಿ. ಕೃಷ್ಣ ಕೂಡ ಚರಣ್ ರಾಜ್ ಅವರ ಕಾಲಿಗೆ ಬಿದ್ದು, ನಿಮ್ಮ ಕಲ್ಪನೆ ಮತ್ತು ನಿರ್ಧಾರ ಅದ್ಭುತ ಎಂದು ಪ್ರಶಂಸಿಸಿದ್ದರಂತೆ.
ಬೆಂಗಳೂರಿನಲ್ಲಿ 108 ಅಡಿ ಕಟೌಟ್; ಡಾ. ರಾಜ್ಕುಮಾರ್ ಅವರಿಂದಲೂ ಮೆಚ್ಚುಗೆ!
'ಪ್ರತಿಘಟನೆ' ಸಿನಿಮಾ ಬಿಡುಗಡೆಯಾದ ಬಳಿಕ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ಚರಣ್ ರಾಜ್ ಅವರಿಗೆ ಸಿಕ್ಕ ಜನಪ್ರಿಯತೆ ಎಷ್ಟಿತ್ತು ಎಂದರೆ, ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಚಿತ್ರಮಂದಿರದಲ್ಲಿ ಬರೋಬ್ಬರಿ 108 ಅಡಿ ಎತ್ತರದ ಅವರ ಕಟೌಟ್ ನಿಲ್ಲಿಸಲಾಗಿತ್ತು. ನಿರ್ಮಾಪಕ ರಾಮೋಜಿ ರಾವ್ ಅವರಿಂದ ಈ ಕಟೌಟ್ ವ್ಯವಸ್ಥೆಯಾಗಿತ್ತು ಎನ್ನುವುದು ವಿಶೇಷ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ವರನಟ ಡಾ. ರಾಜ್ಕುಮಾರ್ ಅವರೇ ಚರಣ್ ರಾಜ್ ಅವರಿಗೆ ಶೀಲ್ಡ್ ನೀಡಿ ಅಭಿನಂದಿಸಿದ್ದರು. ತಾವು ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ, ಒಂದೇ ಸಿನಿಮಾದಿಂದ ಚರಣ್ ರಾಜ್ 108 ಅಡಿ ಕಟೌಟ್ ಹಾಕಿಸಿಕೊಂಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಆ ಕ್ಷಣ ಚರಣ್ ರಾಜ್ ಅವರ ವೃತ್ತಿಜೀವನದ ಮರೆಯಲಾಗದ ಅನುಭವಗಳಲ್ಲಿ ಒಂದಾಯಿತು.
ಹಿಂದಿಯಲ್ಲೂ ಅದೇ ವಿಲನ್ ಪಾತ್ರ; ಪಂಚಭಾಷೆಗಳಲ್ಲಿ ಅವಕಾಶಗಳ ಸುರಿಮಳೆ!
'ಪ್ರತಿಘಟನೆ' ಚಿತ್ರದ ಯಶಸ್ಸು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಲಿಲ್ಲ. ಈ ಸಿನಿಮಾ ಹಿಂದಿಯಲ್ಲಿ 'ಪ್ರತಿಘಾತ್' ಹೆಸರಿನಲ್ಲಿ ರಿಮೇಕ್ ಆಯಿತು. ರಿಮೇಕ್ ಹಕ್ಕು ನೀಡುವಾಗ ನಿರ್ದೇಶಕ ಟಿ. ಕೃಷ್ಣ ಒಂದು ಷರತ್ತು ವಿಧಿಸಿದ್ದರಂತೆ. ಚರಣ್ ರಾಜ್ ಮತ್ತು ವಿಜಯಶಾಂತಿ ಇಬ್ಬರೂ ಇದ್ದರೆ ಮಾತ್ರ ರಿಮೇಕ್ಗೆ ಒಪ್ಪಿಗೆ ನೀಡುವುದಾಗಿ ಹೇಳಿದ್ದರು. ಅದರಂತೆ ಹಿಂದಿ ಆವೃತ್ತಿಯಲ್ಲೂ ಚರಣ್ ರಾಜ್ ಅದೇ ಖಳನಾಯಕನ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು.
ಇದಾದ ಬಳಿಕ ಚರಣ್ ರಾಜ್ಗೆ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮಾತ್ರವಲ್ಲದೆ ಒಡಿಯಾ ಮತ್ತು ಬಂಗಾಳಿ ಚಿತ್ರರಂಗಗಳಿಂದಲೂ ಅವಕಾಶಗಳು ಬರಲಾರಂಭಿಸಿದವು. ಬಾಲಕೃಷ್ಣ, ಚಿರಂಜೀವಿ, ಅಮಿತಾಭ್ ಬಚ್ಚನ್, ವಿನೋದ್ ಖನ್ನಾ, ಧರ್ಮೇಂದ್ರ, ರಜನಿಕಾಂತ್ ಹಾಗೂ ಮಮ್ಮುಟ್ಟಿ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿಬಂತು.
'ಹೀರೋ ಆಗಿ ಮುಂದುವರಿಯಲು ಆಗಲಿಲ್ಲ; ಆದರೆ ಬದುಕು ಕಟ್ಟಿಕೊಂಡೆ'
ಒಂದೆಡೆ ಹಲವು ಭಾಷೆಗಳಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತಿದ್ದರೆ, ಮತ್ತೊಂದೆಡೆ ಕನ್ನಡದಲ್ಲಿ ನಾಯಕನಾಗಿ ನಟಿಸುವ ಅವಕಾಶಗಳು ನಿಧಾನವಾಗಿ ಕಡಿಮೆಯಾಗತೊಡಗಿದವು. ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದ ಕಾರಣ ಕನ್ನಡದ ನಾಯಕನ ಪಾತ್ರಗಳಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ 'ಪ್ರತಿಘಟನೆ' ಚಿತ್ರದ ಯಶಸ್ಸು ತಮ್ಮನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದರೂ, ಕನ್ನಡದಲ್ಲಿ ಹೀರೋ ಆಗಿ ಮುಂದುವರಿಯುವ ಅವಕಾಶವನ್ನು ಕಸಿದುಕೊಂಡಿತು ಎಂಬುದು ಚರಣ್ ರಾಜ್ ಅವರ ಅಭಿಪ್ರಾಯ.
ಆದರೆ, ಆ ಸಮಯದಲ್ಲಿ ಅವರ ಆದ್ಯತೆ ಬೇರೆ ಇತ್ತು. ಆರ್ಥಿಕವಾಗಿ ಸ್ಥಿರವಾಗಬೇಕು, ಸ್ವಂತ ಮನೆ ಮತ್ತು ಕಾರು ಹೊಂದಬೇಕು ಎಂಬುದು ಅವರ ಗುರಿಯಾಗಿತ್ತು. ಹೀಗಾಗಿ ಯಾವ ಭಾಷೆಯಿಂದ ಅವಕಾಶ ಬಂದರೂ, ಎಲ್ಲಿ ಚಿತ್ರೀಕರಣವಿದ್ದರೂ ಹೋಗಿ ಕೆಲಸ ಮಾಡಲು ಸಿದ್ಧರಾಗಿದ್ದರು. ಒಡಿಯಾ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಕಮಲ್ ಹಾಸನ್ ಅವರನ್ನೇ ಭುವನೇಶ್ವರದಲ್ಲಿ ಕಾಯಿಸಿದ ಪ್ರಸಂಗವೂ ತಮ್ಮ ಬಹುಭಾಷಾ ಚಿತ್ರಪಯಣದ ಒಂದು ನೆನಪಾಗಿ ಉಳಿದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಒಂದೇ ಸಿನಿಮಾ ಚರಣ್ ರಾಜ್ ಅವರನ್ನು ದಕ್ಷಿಣ ಭಾರತದಾದ್ಯಂತ ಗುರುತಿಸುವಂತೆ ಮಾಡಿತು. 108 ಅಡಿ ಕಟೌಟ್, ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ, ಹಲವು ಭಾಷೆಗಳಲ್ಲಿ ಬೇಡಿಕೆ, ಇವೆಲ್ಲವೂ ಅವರ ವೃತ್ತಿಜೀವನದ ದೊಡ್ಡ ಸಾಧನೆಗಳು. ಆದರೆ, ಇದೇ ಯಶಸ್ಸಿನ ಬೆನ್ನಲ್ಲೇ ಕನ್ನಡದಲ್ಲಿ ಹೀರೋ ಆಗಿ ಮುಂದುವರಿಯುವ ಕನಸಿಗೆ ಬ್ರೇಕ್ ಬಿದ್ದಿದ್ದು ಮಾತ್ರ ಅವರ ಸಿನಿ ಪಯಣದ ವಿಪರ್ಯಾಸ.
















