ರಮಾನಂದ ಸಾಗರರ 'ರಾಮಾಯಣ' ಧಾರಾವಾಹಿಯಲ್ಲಿ ಲವ-ಕುಶರಾಗಿ ನಟಿಸಿದ್ದ ಬಾಲ ಕಲಾವಿದರಾದ ಮಯೂರೇಶ್ ಕ್ಷೇತ್ರಮಡೆ ಮತ್ತು ಸ್ವಪ್ನಿಲ್ ಜೋಶಿ ಅವರ ಇಂದಿನ ಬದುಕಿನ ಕುರಿತಾದ ಮಾಹಿತಿ ಇದಾಗಿದೆ. ಲವ ಪಾತ್ರಧಾರಿ ನಟನೆಯಿಂದ ದೂರವಾಗಿ ಸಿಇಒ ಆಗಿದ್ದರೆ, ಕುಶ ಮರಾಠಿ ಚಿತ್ರರಂಗದ ಸ್ಟಾರ್ ಆಗಿದ್ದಾರೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ರಾಮಾ-ಸೀತಾ ಆಗಿ, ಯಶ್ ರಾವಣನಾಗಿ ಅಭಿನಯಿಸುತ್ತಿರುವ ರಾಮಾಯಣ ಪಾರ್ಟ್-1 (Ramayana Part-1 Movie) ಸಕತ್ ಸದ್ದು ಮಾಡುತ್ತಿದೆ. ಆದರೆ 'ರಾಮಾಯಣ' ಎಂದಾಕ್ಷಣ ಎಷ್ಟೋ ಮಂದಿಗೆ ನೆನಪಾಗುವುದು ಇನ್ನೂ ಟಿವಿ ಎನ್ನುವುದು ಗಗನಕುಸುಮವಾಗಿರುವ ಕಾಲಘಟ್ಟದಲ್ಲಿ ಅರ್ಥಾತ್ 1987-1988ರಲ್ಲಿ ದೂರದರ್ಶನ ವಾಹಿನಿಯಲ್ಲಿ ಬರುತ್ತಿದ್ದ ರಮಾನಂದ ಸಾಗರ ಅವರ ರಾಮಾಯಣ. ಊರಲ್ಲಿ ಯಾರದ್ದೋ ಒಬ್ಬರ ಮನೆಯಲ್ಲಿ ಟಿವಿ ನೋಡಲು ಇಡೀ ಊರಿಗೆ ಊರೇ ಹೋಗುತ್ತಿದ್ದ ಕಾಲವದು. ಕಲರ್ ಟಿವಿ ಬೆರಳೆಣಿಕೆ ಶ್ರೀಮಂತರ ಮನೆಗಳಲ್ಲಿ ಇತ್ತೇನೋ ಅಷ್ಟೇ. ಎಷ್ಟೋ ಮನೆಗಳಲ್ಲಿ ರಾಮಾಯಣ ಬರುವ ಹೊತ್ತಿಗೆ ಟಿವಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುತ್ತಿದ್ದರು. ಏಕೆಂದರೆ ರಾಮಾಯಣ ಅಂದು ಕೇವಲ ಒಂದು ಸೀರಿಯಲ್ ಆಗಿರಲಿಲ್ಲ. ಬದಲಿಗೆ ಸಾಕ್ಷಾತ್ ಸೀತಾ-ರಾಮರೇ ಟಿವಿಯಲ್ಲಿ ಬಂದು ಆಶೀರ್ವದಿಸುತ್ತಿದ್ದಾರೆ ಎನ್ನುವ ಕಲ್ಪನೆ ಇತ್ತು. 2020ರಲ್ಲಿ ಕೋವಿಡ್ ಸಮಯದಲ್ಲಿಯೂ ಈ ಸೀರಿಯಲ್ ಅನ್ನು ಮತ್ತೊಮ್ಮೆ ಪ್ರಸಾರ ಮಾಡಲಾಗಿತ್ತು.
ಅಂಥ ರಾಮಾಯಣದಲ್ಲಿ, ಅರುಣ್ ಗೋಯೆಲ್ ರಾಮನಾಗಿ ದೀಪಿಕಾ ಸೀತೆಯಾಗಿ ನಟಿಸಿದ್ದರೆ, ಬಾಲಕ ಲವ-ಕುಶರಾಗಿ ನಟಿಸಿದ್ದವರು ಮಯೂರೇಶ್ ಕ್ಷೇತ್ರಮಡೆ ಮತ್ತು ಸ್ವಪ್ನಿಲ್ ಜೋಶಿ. ಆ ದಿನಗಳಲ್ಲಿಯೇ ತಮ್ಮ ರೋಲ್ ಅನ್ನು ಅತ್ಯಂತ ಶ್ರದ್ಧೆಯಿಂದ, ಅಷ್ಟೇ ಭಕ್ತಿಪೂರ್ವಕವಾಗಿ ಅದ್ಭುತವಾಗಿ ನಟಿಸಿದ್ದರು ಈ ಬಾಲ ಕಲಾವಿದರು. ಆದರೆ ಇಂದು ಇವರನ್ನು ಹಲವು ಜನ ಮರೆತಿದ್ದಾರೆ. ನೆನಪಿದ್ದರೂ, ಇವರು ಇಂದು ಏನು ಮಾಡುತ್ತಿದ್ದಾರೆ, ಸೀರಿಯಲ್ಗಳಲ್ಲಿ ನಟಿಸುತ್ತಿದ್ದಾರೆಯೇ ಅಥವಾ ಸಿನಿಮಾದಲ್ಲಿ ಮಿಂಚುತ್ತಿದ್ದಾರೆಯೇ ಎನ್ನುವ ಬಗ್ಗೆ ಯೋಚಿಸಬಹುದು. ಈಗ ದೊಡ್ಡ ಸ್ಟಾರ್ ಆಗಿದ್ದರೂ ಅವರೇ ಇವರು ಎಂದು ತಿಳಿಯದಷ್ಟು ಬದಲಾಗಿದ್ದಾರೆ ಎಂದುಕೊಂಡಿರಬಹುದು.
ನಟನೆಗೆ ಗುಡ್ಬೈ ಹೇಳಿದ ಲವ
ಇದೀಗ ಲವ ಮತ್ತು ಕುಶ ಪಾತ್ರಧಾರಿಯ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಲವ ಆಗಿ ಮಿಂಚಿದ್ದವರು ಮಯೂರೇಶ್ ಕ್ಷೇತ್ರಮಡೆ. ಇವರಿಗೆ ಈಗ 50 ವರ್ಷ ವಯಸ್ಸು. 'ರಾಮಾಯಣ'ದ ನಂತರ ನಟನೆಗೆ ವಿದಾಯ ಹೇಳಿದ ಮಯೂರೇಶ್, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದರು. ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದು, ಪ್ರಮುಖ ಜಾಗತಿಕ ಮಾರ್ಕೆಟಿಂಗ್ ಕಂಪನಿಯಾದ 'ಕಮಿಷನ್ ಜಂಕ್ಷನ್ ಅಫಿಲಿಯೇಟ್' (Commission Junction Affiliate) ಸಂಸ್ಥೆಯ ಸಿಇಒ (CEO) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾರದ ಜೊತೆಗೆ ಇವರು 'ಸ್ಪೈಟ್ ಅಂಡ್ ಡೆವಲಪ್ಮೆಂಟ್' (Spite and Development) ಎಂಬ ಪುಸ್ತಕವನ್ನೂ ಸಹ-ಲೇಖಕರಾಗಿ ಬರೆದಿದ್ದಾರೆ.
ದೊಡ್ಡ ಸ್ಟಾರ್ ನಟನಾದ ಕುಶ
ಕುಶ ಆಗಿ ನಟಿಸಿದವರು ಸ್ವಪ್ನಿಲ್ ಜೋಶಿ. ಇವರಿಗೆ ಈಗ 49 ವರ್ಷ ವಯಸ್ಸು. ಬಾಲನಟನಾಗಿ ವೃತ್ತಿಜೀವನ ಆರಂಭಿಸಿದ ಸ್ವಪ್ನಿಲ್, ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದು ಮರಾಠಿ ಚಿತ್ರರಂಗದ ಸೂಪರ್ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ರಾಮಾಯಣದ ನಂತರ 'ಶ್ರೀ ಕೃಷ್ಣ' ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿ ಮನೆಮಾತಾದರು. ನಂತರ 'ಕಾಮಿಡಿ ಸರ್ಕಸ್' ಸೇರಿದಂತೆ ಹಲವು ಹಿಂದಿ ಧಾರಾವಾಹಿಗಳು, ಸಿನಿಮಾಗಳು ಮತ್ತು ಮರಾಠಿ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ.
















