ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಶೀಘ್ರದಲ್ಲೇ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಮಗಳು ಸರಾಯಾಳ ಫೋಟೋ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಪ್ರಕಟಿಸಿದ್ದಾರೆ. 'ಟಾಕ್ಸಿಕ್' ಚಿತ್ರದ ನಾಯಕಿ ಕಿಯಾರಾ ಅವರ ಈ ಪೋಸ್ಟ್‌ಗೆ ಬಾಲಿವುಡ್ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.
ಮುಂಬೈ (ಅ.07): ಬಾಲಿವುಡ್‌ನ ಮೋಸ್ಟ್ ಅಡೋರಬಲ್ ಹಾಗೂ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಈ ತಾರಾ ದಂಪತಿ ಶೀಘ್ರದಲ್ಲೇ ಎರಡನೇ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಕಿಯಾರಾ ಈ ಸಂತಸದ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕಿಯಾರಾ ಹಂಚಿಕೊಂಡಿರುವ ಸುಂದರ ಫೋಟೋದಲ್ಲಿ, ಅವರ ಮೊದಲ ಮುದ್ದಾದ ಮಗಳು ಸರಾಯಾ (Saraayah) ಪುಟ್ಟ ಬಿಳಿ ಸಾಕ್ಸ್ ಒಂದನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದುಕೊಂಡಿದ್ದು, ಆಕೆಯ ಕೈಯನ್ನು ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಯಿಂದ ಬೆಂಬಲಿಸಿ ಹಿಡಿದಿರುವುದು ಕಂಡುಬಂದಿದೆ. ಈ ಫೋಟೋದೊಂದಿಗೆ, 'ಮತ್ತೊಮ್ಮೆ ಈ ಅದ್ಭುತ ಉಡುಗೊರೆಯ ಮೂಲಕ ನಮ್ಮ ಬದುಕು ಧನ್ಯವಾಯಿತು. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿ ತುಳುಕುತ್ತಿದೆ' ಎಂದು ಕಿಯಾರಾ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಆಲಿಯಾ ಭಟ್, ಕರೀನಾ ಕಪೂರ್ ಸೇರಿದಂತೆ ಬಾಲಿವುಡ್‌ನ ತಾರಾಗಣ ಹಾಗೂ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಟಾಕ್ಸಿಕ್ ಶೂಟಿಂಗ್ ವೇಳೆಯೇ ಪ್ರಗ್ನೆಂಟ್ ಎಂದಿದ್ದ ನೆಟ್ಟಿಗರು
ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್' (Toxic) ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕಿಯಾರಾ, ಇತ್ತೀಚೆಗಷ್ಟೇ ತಾಯ್ತನದ ಅನುಭವದ ಬಗ್ಗೆ ಮಾತನಾಡಿದ್ದರು. ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ಅವರು, 'ತಾಯಿಯಾದ ನಂತರ ನಾನು ಸಂಪೂರ್ಣವಾಗಿ ಹೊಸ ವ್ಯಕ್ತಿಯಾಗಿ ಬದಲಾಗಿದ್ದೇನೆ. ಮಗು ಜನಿಸಿದ ಬಳಿಕ ಕೆಲಸಕ್ಕೆ ಮರಳಿದಾಗ ನನ್ನಲ್ಲೊಂದು ಹೆಣ್ಣು ಹುಲಿಯ (Tigress) ಶಕ್ತಿ, ಧೈರ್ಯ ಬಂದಂತೆ ಭಾಸವಾಗುತ್ತಿದೆ' ಎಂದು ಹೇಳಿಕೊಂಡಿದ್ದರು. 2025ರ ಜುಲೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಈ ದಂಪತಿ, ಈಗ ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಸಂಭ್ರಮದಲ್ಲಿದ್ದಾರೆ.
ಮೊದಲೇ ಹೇಳಿದ್ದ ಯಶ್
ಇನ್ನು ಈ ಬಗ್ಗೆ ಟಾಕ್ಸಿಕ್ ಸಿನಿಮಾದ ನಾಯಕ ಯಶ್ ಅವರು ಮೊದಲೇ ಕಿಯಾರಾ ಅವರ ಪ್ರಗ್ನೆನ್ಸಿ ಬಗ್ಗೆ ಅನೌನ್ಸ್ ಮಾಡಿದ್ದರು. ಈ ವೇಳೆ ಕಷ್ಟಕರ ದೃಶ್ಯದಲ್ಲಿ ಅಥವಾ ಸಾಹಸ ದೃಶ್ಯಗಳನ್ನು ಮಾಡದಂತೆ ಸಲಹೆಯನ್ನೂ ನೀಡಿದ್ದರು.
ಸಿದ್ಧಾರ್ಥ್-ಕಿಯಾರಾ ಲವ್ ಸ್ಟೋರಿ
2021ರ ಸೂಪರ್ ಹಿಟ್ ಸಿನಿಮಾ 'ಶೇರ್‌ಶಾ' ಚಿತ್ರೀಕರಣದ ವೇಳೆ ಪರಸ್ಪರ ಪ್ರೀತಿಗೆ ಬಿದ್ದಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ, 2023ರ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರೀಲ್ ಲೈಫ್‌ನಲ್ಲಷ್ಟೇ ಅಲ್ಲದೆ ರಿಯಲ್ ಲೈಫ್‌ನಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಈ ಜೋಡಿಯ ಸಂಸಾರಕ್ಕೆ ಮತ್ತೊಂದು ಪುಟ್ಟ ಕಂದಮ್ಮನ ಆಗಮನವಾಗುತ್ತಿರುವುದು ಅವರ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ತಂದಿದೆ.


