ಇನ್ನು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕರೀನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಡೇಟಿಂಗ್ ದಿನಗಳು, ಮದುವೆ, ಪ್ರವಾಸಗಳು ಹಾಗೂ ಮಕ್ಕಳೊಂದಿಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಹೃದಯ ಮತ್ತು ಕಾಮನಬಿಲ್ಲಿನ ಎಮೋಜಿಗಳೊಂದಿಗೆ ಪತಿ ಸೈಫ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಬೆಡ್ರೂಮ್ನಲ್ಲಿ ಡಾಬಾದ ವಾಸನೆ! ಕರೀನಾ ಕಪೂರ್ ರಹಸ್ಯ ಬಿಚ್ಚಿಟ್ಟ ಸೈಫ್ ಅಲಿ ಖಾನ್
ಬಾಲಿವುಡ್ನ ಮುದ್ದಾದ ಜೋಡಿಗಳಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಗೆ ವಿಶೇಷ ಸ್ಥಾನವಿದೆ. ವರ್ಷಗಳು ಕಳೆದರೂ ಈ ಜೋಡಿಯ ನಡುವಿನ ಪ್ರೀತಿ, ಆತ್ಮೀಯತೆ ಮಾತ್ರ ಕಡಿಮೆಯಾಗಿಲ್ಲ. ಪತಿ ಸೈಫ್ ಅಲಿ ಖಾನ್ ಹೆಸರು ಕೇಳಿದರೂ ಕರೀನಾ ಮುಖದಲ್ಲಿ ನಾಚಿಕೆಯ ನಗು ಮೂಡುತ್ತದೆ. ಇದೀಗ ಈ ತಾರಾ ಜೋಡಿ ತಮ್ಮ 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಅವರ ವೈಯಕ್ತಿಕ ಜೀವನದ ಸ್ವಾರಸ್ಯಕರ ಸಂಗತಿಯೊಂದು ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದೆ.
ದಾಂಪತ್ಯ ಜೀವನದ 14 ವರ್ಷಗಳನ್ನು ಪೂರೈಸಿದ ಸೈಫ್ ಮತ್ತು ಕರೀನಾ
ಅಕ್ಟೋಬರ್ 16ರಂದು ತಮ್ಮ ದಾಂಪತ್ಯ ಜೀವನದ 14 ವರ್ಷಗಳನ್ನು ಪೂರೈಸಿದ ಸೈಫ್ ಮತ್ತು ಕರೀನಾ, ಈ ವಿಶೇಷ ಸಂದರ್ಭದ ಸಂಭ್ರಮವನ್ನು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ನಿರೂಪಕ ಕಪಿಲ್ ಶರ್ಮಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಮನೆಯಲ್ಲಿನ ಒಂದು ತಮಾಷೆಯ ವಿಚಾರವನ್ನು ಸೈಫ್ ಬಹಿರಂಗಪಡಿಸಿದ್ದಾರೆ.
ಕರೀನಾ ಯಾವಾಗಲೂ ಇಷ್ಟು ಫ್ರೆಶ್ ಆಗಿ, ಉಲ್ಲಾಸದಿಂದ ಕಾಣಿಸಿಕೊಳ್ಳಲು ಏನು ತಿನ್ನುತ್ತಾರೆ ಎಂದು ಕಪಿಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸೈಫ್, ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಗೆ ಸಾಕಷ್ಟು ತುಪ್ಪ ಬರುತ್ತಿದೆ ಎಂದಿದ್ದಾರೆ. ತಕ್ಷಣವೇ ಕರೀನಾ, ‘ಗೋವರ್ಧನ್ ತುಪ್ಪ’ ಎಂದು ಸೇರಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಸೈಫ್ ಅಲಿ ಖಾನ್ ಅವರು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಎರಡು ವರ್ಷಗಳ ಕಾಲ ಉಚಿತ ತುಪ್ಪದ ಪೂರೈಕೆಯನ್ನು ಗೆದ್ದಿದ್ದರು.
ತಮ್ಮ ಮನೆಯಲ್ಲಿ ತುಪ್ಪದ ಬಳಕೆ ಹೆಚ್ಚಾಗಿದೆ ಎಂದು ಕರೀನಾ ಹೇಳಿದಾಗ ಕಪಿಲ್ ಆಶ್ಚರ್ಯಪಟ್ಟಿದ್ದಾರೆ. ಮನೆಯ ಮಕ್ಕಳು ಮಾತ್ರವಲ್ಲ, ತಾವೂ ತುಪ್ಪ ಸೇವಿಸುತ್ತೇವೆ ಎಂದು ನಟಿ ತಿಳಿಸಿದ್ದಾರೆ. ಆದರೆ ಸೈಫ್ ಹೇಳಿದ ಮುಂದಿನ ವಿಚಾರವೇ ಕಾರ್ಯಕ್ರಮದ ಹೈಲೈಟ್ ಆಗಿದೆ!
ಸೈಫ್ ತಮಾಷೆ
ಕರೀನಾ ತುಪ್ಪವನ್ನು ತಿನ್ನುವುದಕ್ಕಿಂತ ಹೆಚ್ಚಾಗಿ ಪ್ರತಿ ರಾತ್ರಿ ತಮ್ಮ ಪಾದಗಳಿಗೆ ಹಚ್ಚಿಕೊಳ್ಳುತ್ತಾರೆ ಎಂದು ಸೈಫ್ ತಮಾಷೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕರೀನಾ, ತುಪ್ಪ ಹಚ್ಚುವುದರಿಂದ ನೆಮ್ಮದಿಯ ನಿದ್ರೆ ಬರುತ್ತದೆ ಎಂದಿದ್ದಾರೆ. ಅಷ್ಟಕ್ಕೇ ನಿಲ್ಲದ ಸೈಫ್, “ನಮ್ಮ ಬೆಡ್ರೂಮ್ ಪ್ರತಿ ರಾತ್ರಿ ಧಾಬಾದಂತೆ ಪರಿಮಳ ಬೀರುತ್ತದೆ” ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸಿದ್ದಾರೆ.
ಇನ್ನು ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕರೀನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಡೇಟಿಂಗ್ ದಿನಗಳು, ಮದುವೆ, ಪ್ರವಾಸಗಳು ಹಾಗೂ ಮಕ್ಕಳೊಂದಿಗಿನ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಹೃದಯ ಮತ್ತು ಕಾಮನಬಿಲ್ಲಿನ ಎಮೋಜಿಗಳೊಂದಿಗೆ ಪತಿ ಸೈಫ್ ಅವರನ್ನು ಟ್ಯಾಗ್ ಮಾಡಿದ್ದಾರೆ.
2012ರಲ್ಲಿ ವಿವಾಹವಾದ ಈ ಜೋಡಿಗೆ ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಪುತ್ರರಿದ್ದಾರೆ. ಸೈಫ್ಗೆ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಂದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳೂ ಇದ್ದಾರೆ. ಪ್ರೀತಿ, ತುಂಟಾಟ ಮತ್ತು ಪರಸ್ಪರ ಆತ್ಮೀಯತೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸೈಫ್-ಕರೀನಾ ಜೋಡಿಯ ಈ ಹೊಸ ಸಂಗತಿ ಇದೀಗ ಗಮನ ಸೆಳೆಯುತ್ತಿದೆ.


