ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾದ ಟ್ರೈಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಈ ವೇಳೆ ನಟ ರಣಬೀರ್ ಕಪೂರ್ ಕನ್ನಡದಲ್ಲಿ ಮಾತನಾಡಿ, ಯಶ್ ಅವರನ್ನು 'ಬಾಸ್' ಎಂದು ಹೊಗಳುವ ಮೂಲಕ ಕನ್ನಡಿಗರ ಮನಗೆದ್ದರು. ಟ್ರೈಲರ್‌ನಲ್ಲಿ ರಾವಣನಾಗಿ ಯಶ್ ಅವರ ಆಕ್ಷನ್ ದೃಶ್ಯಗಳು ಭಾರಿ ಕುತೂಹಲ ಮೂಡಿಸಿವೆ.

ರಾಮಾಯಣ ಸ್ಟೋರಿ ಇಟ್ಟುಕೊಂಡು ಇದಾಗಲೇ ಹಲವಾರು ಸಿನಿಮಾ ಇದೇ ಹೆಸರಿನಲ್ಲಿ ಬಂದಿದೆ. ಬಹುತೇಕ ಎಲ್ಲವೂ ಯಶಸ್ವಿಯಾಗಿವೆ. ಇದೀಗ ಇದೇ ರಾಮಾಯಣವನ್ನೇ ಇಟ್ಟುಕೊಂಡು ಇನ್ನೊಂದು ಸಾಹಸಕ್ಕೆ ಕೈಹಾಕಲಾಗಿದ್ದು, ಇದರಲ್ಲಿ ನಟ ಯಶ್​ ರಾವಣನಾಗಿ ಮಿಂಚುತ್ತಿರುವುದು ವಿಶೇಷವಾಗಿದೆ. ಅಷ್ಟಕ್ಕೂ 80ರ ದಶಕದಲ್ಲಿ ರಾಮಾಯಣ ಸೀರಿಯಲ್​ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅಲ್ಲಿಂದ ಕಿರುತೆರೆಯಿಂದ ಬೆಳ್ಳಿತೆರೆಯವರೆಗೆ ರಾಮಾಯಣ ವಿವಿಧ ಸ್ವರೂಪ ಪಡೆದುಕೊಂಡು ಬಂದಿದ್ದು, ನಟ ಯಶ್​ ಅವರು ಇನ್ನೊಂದು ಸಕ್ಸಸ್​​ ಕಾಣಲು ಪ್ರಯತ್ನಿಸುತ್ತಿದ್ದಾರೆ. ನಿರ್ದೇಶಕ ನಿತೀಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ (Namit Malhotra) ಸಹಯೋಗದಲ್ಲಿ ಮೂಡಿಬರುತ್ತಿರುವ ರಾಮಾಯಣ ಸಿನಿಮಾ ಮತ್ತೊಮ್ಮೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಬೆಂಗಳೂರು ನೆಲದಲ್ಲಿ ಕನ್ನಡದಲ್ಲಿ ಮಾತನಾಡಿದ ರಣಬೀರ್​ ಕಪೂರ್​

ಇದರ ಟ್ರೈಲರ್​ ನಿನ್ನೆ ಬೆಂಗಳೂರಿನಲ್ಲಿ ಲಾಂಚ್​ ಆಯಿತು. ಇದಕ್ಕಾಗಿ ರಾಮಾಯಣ ಸಿನಿಮಾದ ತಂಡ ಬೆಂಗಳೂರಿಗೆ ಆಗಮಿಸಿತ್ತು. ರಾಮನಾಗಿ ಮಿಂಚುತ್ತಿರುವ ನಟ ರಣಬೀರ್ ಕಪೂರ್, ಸೀತೆಯಾದ ನಟಿ ಸಾಯಿ ಪಲ್ಲವಿ ಸೇರಿದಂತೆ ಎಲ್ಲಾ ತಾರೆಯರೂ ಇಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಾಯಿ ಪಲ್ಲವಿ ಕೂಡ ಆರಂಭದಲ್ಲಿ ಒಂದು ವಾಕ್ಯವನ್ನು ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿದ್ದರೆ, ಅತ್ತ ನಟ ರಣಬೀರ್​ ಕಪೂರ್​ ಕೂಡ ಜೈಶ್ರೀ ರಾಮ್​ ಎನ್ನುತ್ತಾ ಕನ್ನಡದಲ್ಲಿ ಮಾತು ಆರಂಭಿಸಿದರು. ನಮಸ್ಕಾರ ಬೆಂಗಳೂರು. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು ಎಂದರು. ಬಳಿಕ ಇಂಗ್ಲಿಷ್​ ಮತ್ತು ಹಿಂದಿಯಲ್ಲಿ ಮಾತು ಮುಂದುವರೆಸಿ, ಸದ್ಯ ನನಗೆ ಕನ್ನಡ ಇಷ್ಟೇ ಬರೋದು, ಮುಂದಿನ ಸಲ ಯಶ್​ ಜೊತೆ ಸೇರಿ ಇನ್ನೂ ಹೆಚ್ಚಿನ ಕನ್ನಡ ಮಾತನಾಡುತ್ತೇನೆ ಎಂದರು. ಇದೇ ವೇಳೆ ಅವರು ಯಶ್​ ಬಾಸ್​​ ಎಂದು ಹೇಳಿದ್ದು, ಯಶ್​ ಅಭಿಮಾನಿಗಳಿಂದ ಚಪ್ಪಾಳೆಗಳ ಸುರಿಮಳೆಯೇ ಆಯಿತು.

ಬಳಿಕ ರಣಬೀರ್​ ಕಪೂರ್​ ಅವರು, ರಾಮಾಯಣ ಎಂದರೆ ಕೇವಲ ಒಂದು ಕಥೆ ಅಲ್ಲ, ಅದೊಂದು ಸಂಸ್ಕೃತಿ, ಅದು ಹಿಂದೂ ಧರ್ಮದಲ್ಲಿ ನೆಲೆಯೂರಿರುವ ಭಾವನೆಗಳ ಬೀಡು ಎನ್ನುತ್ತಲೇ ಶ್ರೀರಾಮನ ಪಾತ್ರಕ್ಕೆ ನನಗೆ ಆಫರ್​ ಬಂದಾಗ ಅದನ್ನು ನಂಬಲು ಆಗಲಿಲ್ಲ. ಈ ಪಾತ್ರವನ್ನು ನಾನು ಮಾಡಬಲ್ಲೆನೇ ಎನ್ನುವ ಅಳುಕು ಇತ್ತು. ಶ್ರೀರಾಮನಂಥ ಕ್ಯಾರೆಕ್ಟರ್​ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಮಾಡುತ್ತೇನೋ ಇಲ್ಲವೋ ಎನ್ನುವ ಸಂದೇಹದಲ್ಲಿಯೇ ಇದ್ದೆ. ಇಂಥ ಪಾತ್ರ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದರು.

ಟ್ರೈಲರ್​ ಕುರಿತು

ಇನ್ನು ಬಿಡುಗಡೆಯಾಗಿರುವ ರಾಮಾಯಣ ಟ್ರೈಲರ್​ (Ramayana Movie Trailer) ನೋಡಿದರೆ, ಆಕ್ಷನ್ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಮಾಯಣದ ಕಥೆಯಲ್ಲಿ ಪ್ರಮುಖವಾಗಿರುವ ಯುದ್ಧದ ಸನ್ನಿವೇಶಗಳು ಹಾಗೂ ಸಾಹಸ ದೃಶ್ಯಗಳ ಝಲಕ್‌ಗಳನ್ನು ಇಲ್ಲಿ ಕಾಣಬಹುದು. ವಿಶೇಷವಾಗಿ ಯಶ್ ಪಾತ್ರದ ಪ್ರಸ್ತುತಿ ಗಮನ ಸೆಳೆಯುತ್ತದೆ. ರಾವಣನ ಪಾತ್ರದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೊದಲಿನಿಂದಲೂ ಇತ್ತು. ಇದೀಗ ಬಿಡುಗಡೆಯಾಗಿರುವ ದೃಶ್ಯಗಳು ಆ ನಿರೀಕ್ಷೆಯನ್ನು ಹೆಚ್ಚಿಸಿವೆ. ಚಿತ್ರದ ಆಕ್ಷನ್ ಭಾಗಗಳು ಅಂತರರಾಷ್ಟ್ರೀಯ ಪ್ರೇಕ್ಷಕರನ್ನೂ ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ ಸೂಚನೆ ಟ್ರೈಲರ್‌ನಲ್ಲಿ ಕಾಣಿಸುತ್ತದೆ. ರಣ್‌ಬೀರ್ ಕಪೂರ್ ರಾಮನ ಪಾತ್ರ ಹಾಗೂ ಸಾಯಿ ಪಲ್ಲವಿ ಸೀತೆಯ ಪಾತ್ರದ ಕೆಲವು ದೃಶ್ಯಗಳು ಟ್ರೈಲರ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಎರಡೂ ಟ್ರೈಲರ್‌ಗಳಲ್ಲಿ ಯಶ್ ಮತ್ತು ರಣ್‌ಬೀರ್ ಕಪೂರ್ ಪಾತ್ರಗಳೇ ಹೆಚ್ಚು ಗಮನ ಸೆಳೆಯುತ್ತವೆ.