ಯಾವುದೇ ಪ್ರಚಾರವಿಲ್ಲದೆ ಬಿಡುಗಡೆಯಾಗಿ ಯಶಸ್ಸು ಕಂಡ 'ಪ್ರೇಮದ ಊರಲಿ' ಸಿನಿಮಾದ ಬಗ್ಗೆ ನಟ ಯಶ್ ಕೊನೆಗೂ ಮೌನ ಮುರಿದಿದ್ದಾರೆ. ರಾಮಾಯಣ ಟ್ರೈಲರ್ ಲಾಂಚ್ ವೇಳೆ ಮಾತನಾಡಿದ ಅವರು, ಚಿತ್ರತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಚಿತ್ರರಂಗದ ಬೆಳವಣಿಗೆಗೆ ಇಂತಹ ಸಣ್ಣ ಬಜೆಟ್‌ನ ಗಟ್ಟಿ ಕಥೆಯ ಸಿನಿಮಾಗಳು ಅಡಿಪಾಯವಾಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪ್ರೇಮದ ಊರಲಿ ಸಿನಿಮಾ ಧೂಳೆಬ್ಬಿಸುತ್ತಿದೆ. ಸೆಪ್ಟೆಂಬರ್​ 25ರಂದು ಬಿಡುಗಡೆಯಾಗಿರುವ ಈ ಸಿನಿಮಾ ಹವಾ ಈಗಲೂ ನಿಂತಿಲ್ಲ. ಎಲ್ಲಿಯೂ ಹೆಚ್ಚಿನ ಪ್ರಚಾರವಿಲ್ಲದೇ ತಣ್ಣಗೆ ಸದ್ದಿಲ್ಲದೇ ಬಿಡುಗಡೆಯಾಗಿದ್ದ ಪ್ರೇಮದ ಊರಲಿ ಸಿನಿಮಾ, ಜನರ ಬಾಯಿಯಿಂದ ಬಾಯಿಗೆ ಹೋಗಿಯೇ ಈ ಪರಿಯಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದೆ. ಯಾವ ಸಿನಿಮಾ ಹೇಗೆ ಓಡತ್ತೆ ಎಂದು ಹೇಳುವುದು ಕಷ್ಟವಾದರೂ ಇಂಥ ಸಿನಿಮಾಗಳಿಗೂ ಜನರು ಒಲವು ತೋರುತ್ತಾರೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ. ದೊಡ್ಡ ದೊಡ್ಡ ಸ್ಟಾರ್​ ನಟರು ಇಲ್ಲದೆಯೂ ಸಿನಿಮಾ ಗೆಲ್ಲಬಹುದು ಎನ್ನುವುದನ್ನು ಕನ್ನಡಿಗರು ತೋರಿಸಿಕೊಟ್ಟಿದ್ದಾರೆ. ಇದಾಗಲೇ ಈ ಚಿತ್ರವನ್ನು ಕೆಲವೇ ಕೆಲವು ಖ್ಯಾತ ಸೆಲೆಬ್ರಿಟಿಗಳೂ ಕೊಂಡಾಡಿದ್ದಾರೆ. ಆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಚಿತ್ರದ ಬಗ್ಗೆ ಯಾಕಿನ್ನೂ ಮೌನವಾಗಿದ್ದಾರೆ ಎಂದು ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಸದ್ದು ಮಾಡುತ್ತಲೇ ಇತ್ತು. ಅದರಲ್ಲಿಯೂ ಬಿಡುಗಡೆಗೂ ಮುನ್ನವೇ ವರ್ಷಗಟ್ಟಲೆ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ಟಾಕ್ಸಿಕ್ (Toxic Movie) ನಟ ಯಶ್​ ಏನು ಹೇಳ್ತಾರೆ ಎನ್ನುವ ಬಗ್ಗೆ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಪ್ರೇಮದ ಊರಲಿ ಸಿನಿಮಾ ಇಷ್ಟೆಲ್ಲಾ ಸಕ್ಸಸ್​ ಕಂಡರೂ ಅವರು ಏಕಿನ್ನೂ ಮಾತನಾಡುತ್ತಿಲ್ಲ ಎನ್ನುವ ಬಗ್ಗೆ ಹಲವರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ಸ್​ಗಳನ್ನೂ ಹಾಕುತ್ತಿದ್ದರು.

ಇದೀಗ, ನಟ ಯಶ್​ ಈ ಸಿನಿಮಾ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ರಾಮಾಯಣ ಟ್ರೈಲರ್​ ಲಾಂಚಿಂಗ್​ ಸಮಯದಲ್ಲಿ ನಟ ಯಶ್​ ಪ್ರೇಮದ ಊರಲಿ ಸಿನಿಮಾ ಕುರಿತು ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಲೇ ಪ್ರೇಮದ ಊರಲಿ ತುಂಬಾ ಸಕ್ಸಸ್​ ಕಂಡಿದೆ ಎಂದಾಗ ಅಲ್ಲಿದ್ದ ಜನರು ಒಂದೇ ಸಮನೆ ಕೇಕೆ ಹಾಕಿ ಚಪ್ಪಾಳೆ ತಟ್ಟಿದ್ದಾರೆ. ಅಲ್ಲಿಗೆ ಪ್ರೇಮದ ಊರಲಿ ಸಿನಿಮಾ ಯಾವ ಪರಿಯಲ್ಲಿ ಜನರ ಮನಸ್ಸು ನಾಟಿದೆ ಹಾಗೂ ಯಶ್​ ಈ ಬಗ್ಗೆ ಯಾವಾಗ ಮಾತನಾಡ್ತಾರೆ ಎಂದು ಎಷ್ಟು ಮಂದಿ ಕಾಯುತ್ತಿದ್ದರು ಎನ್ನುವುದಕ್ಕೆ ಈ ಚಪ್ಪಾಳೆಯೇ ಸಾಕ್ಷಿಯಾಗಿದೆ.

ತಂಡದ ಜೊತೆ ಮಾತನಾಡಿದೆ

ಯಶ್​ ಅವರು, ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ಪ್ರೇಮದ ಊರಲಿ ತಂಡದ ಜೊತೆಮಾತನಾಡಿದೆ. ಅವರ ಕಣ್ಣುಗಳಲ್ಲಿ ಖುಷಿ ನೋಡಿದೆ ಎಂದಿದ್ದಾರೆ. ಚಿತ್ರರಂಗಕ್ಕೆ ಎರಡೂ ಬೇಕು. ಒಂದು, ಹೊರಗಡೆ ಹೋಗಿ ಎಲ್ಲೆಲ್ಲಿ ನಮಗೆ ಬೇಲಿಗಳು ಇವೆಯೋ, ಗೋಡೆಗಳು ಇವೆಯೋ ಅವುಗಳನ್ನು ಒಡೆಯುವಂಥ ಕೆಲಸವನ್ನೂ ಮಾಡಬೇಕು, ಹಾಗಂತ ನಮ್ಮಲ್ಲಿ ಇರುವಂಥ ಅಡಿಪಾಯವನ್ನೂ ಗಟ್ಟಿ ಮಾಡಿಕೊಳ್ಳುತ್ತಾ ಇರಬೇಕು. ಹೊಸ ಹೊಸ ಪ್ರತಿಭೆಗಳು ಬರಬೇಕು, ಹೊಸ ಹೊಸ ನಾಯಕರು, ನಿರ್ದೇಶಕರು ಬರಬೇಕು. ಉತ್ತಮ ಚಿತ್ರ ಮಾಡುತ್ತಾ ಇರಬೇಕು ಎಂದು ಯಶ್​ ಪ್ರೇಮದ ಊರಲಿ ಅನ್ನು ಕೊಂಡಾಡಿದ್ದಾರೆ.

ಭವ್ಯ ಬೆಂಬಲ

ಒಂದು ಸಣ್ಣ ಪ್ರಯತ್ನಕ್ಕೆ ಕನ್ನಡಿಗರು ನೀಡುತ್ತಿರುವ ಈ ಭವ್ಯ ಬೆಂಬಲ ನಿಜಕ್ಕೂ ಪ್ರತಿಯೊಬ್ಬ ಕಲಾವಿದನಿಗೂ ಧೈರ್ಯ ಮತ್ತು ಉತ್ಸಾಹ ತುಂಬುತ್ತೆ. ಈ ಪ್ರೋತ್ಸಾಹವೇ ನಮಗೆ ಮುಂದಿನ ದಿನಗಳಲ್ಲಿ ಹೊಸ ಸಾಧನೆಗಳನ್ನ ಮಾಡಲು ದೊಡ್ಡ ಛಲವನ್ನ ನೀಡುತ್ತದೆ. ನಮ್ಮ ಚಿತ್ರರಂಗ ಬೆಳೆಯಬೇಕಾದರೆ ದೊಡ್ಡ ಬಜೆಟ್‌ನ ಸಿನಿಮಾಗಳ ಜೊತೆಗೆ, ಗಡಿಗಳನ್ನ ದಾಟಿ ಸಾಧನೆ ಮಾಡುವ ಪ್ರಯತ್ನಗಳಷ್ಟೇ ಅಲ್ಲದೇ, ಗಟ್ಟಿ ಕಥಾವಸ್ತುವುಳ್ಳ ಸಣ್ಣ ಬಜೆಟ್‌ನ ಸಿನಿಮಾಗಳು ಅಷ್ಟೇ ಅಗತ್ಯ. ಇಂತಹ ಸಣ್ಣ ಸಿನಿಮಾಗಳು ಇಂಡಸ್ಟ್ರಿಯ ಅಡಿಪಾಯವನ್ನ ಬಲಪಡಿಸುತ್ತವೆ. ಹೊಸ ಹೊಸ ನಟರು, ನವ ನಿರ್ದೇಶಕರು ಹಾಗೂ ವಿಭಿನ್ನ ತಂತ್ರಜ್ಞರು ಚಿತ್ರರಂಗಕ್ಕೆ ಬಂದಾಗ ಮಾತ್ರ ರಂಗು ಮತ್ತಷ್ಟು ಹೆಚ್ಚುತ್ತದೆ ಎಂದೂ ಯಶ್​ ಹೇಳಿದರು.