‘ಆನಂದ ನಿಲಯ’ ಧಾರಾವಾಹಿಯ ಭುವನ್ ಪಾತ್ರದ ನಟ ಕೌಶಿಕ್ ಅವರಿಗೆ ನವರಸ ನಾಯಕ ಜಗ್ಗೇಶ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆ, ಜಗ್ಗೇಶ್ ಅವರ..

ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿರುವ ನಟ ಕೌಶಿಕ್‌ ಅವರಿಗೆ ಇತ್ತೀಚೆಗೆ ಮರೆಯಲಾಗದ ಅನುಭವವೊಂದು ಸಿಕ್ಕಿದೆ. ನವರಸ ನಾಯಕ ಜಗ್ಗೇಶ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗುವ ಅವಕಾಶ ಪಡೆದ ಅವರು, ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಹಿರಿಯ ನಟನ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಶೇಷ ವಿಡಿಯೋವನ್ನು ಕೌಶಿಕ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆನಂದ ನಿಲಯ’ ಧಾರಾವಾಹಿಯಲ್ಲಿ ಭುವನ್‌ ಪಾತ್ರದ ಮೂಲಕ ಕೌಶಿಕ್‌ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕಮಲಿ’ಯಲ್ಲಿ ತೇಜಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌-2’ ರಿಯಾಲಿಟಿ ಶೋಗೆ ಆಯ್ಕೆಯಾಗಿ ರನ್ನರ್‌ಅಪ್‌ ಆಗುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ನಂತರ ಪರಶುರಾಮನ ಪಾತ್ರದಲ್ಲಿಯೂ ಗಮನ ಸೆಳೆದು, ಕಿರುತೆರೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಜಗ್ಗೇಶ್ ಅವರ ಸರಳ ಮಾತು, ಪ್ರೀತಿಯ ಆಹ್ವಾನ!

ಇತ್ತೀಚೆಗೆ ‘ಆನಂದ ನಿಲಯ’ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲೇ ಜಗ್ಗೇಶ್ ಅವರ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತಂತೆ. ಈ ವೇಳೆ ಅಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ಕೌಶಿಕ್‌ಗೆ ಜಗ್ಗೇಶ್ ಅವರನ್ನು ನೋಡುವ ಅವಕಾಶ ಸಿಕ್ಕಿದೆ. ನೆಚ್ಚಿನ ಹಿರಿಯ ನಟನನ್ನು ಕಂಡ ತಕ್ಷಣ ಅರಿವಿಲ್ಲದೆಯೇ ಕೈಮುಗಿದಿದ್ದಾರೆ. ಆಗ ಜಗ್ಗೇಶ್ ಪ್ರೀತಿಯಿಂದ, 'ಬಾ ಪಾ, ಕುತ್ಕೋ' ಎಂದು ಆತ್ಮೀಯವಾಗಿ ಕರೆದಿದ್ದಾರಂತೆ.

ಆ ಒಂದು ಮಾತಿನಿಂದ ಆರಂಭವಾದ ಮಾತುಕತೆ ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿದಿದೆ. ಈ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಕಷ್ಟದ ದಿನಗಳ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೆ, ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆಯೂ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಒಬ್ಬ ದೊಡ್ಡ ನಟನ ಜೊತೆ ಇಷ್ಟು ಹೊತ್ತು ಕುಳಿತು ಮಾತನಾಡಿದ್ದು ಇದೇ ಮೊದಲು ಎಂದು ಕೌಶಿಕ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಒಂದು ಗಂಟೆಯ ಮಾತುಕತೆಯಲ್ಲಿ ಸಿಕ್ಕಿದ್ದು ಜೀವನಪಾಠ!

ಈ ಭೇಟಿಯ ಬಗ್ಗೆ ಭಾವುಕರಾಗಿ ಬರೆದುಕೊಂಡಿರುವ ಕೌಶಿಕ್, ಜಗ್ಗೇಶ್ ಅವರ ಜೊತೆ ಕಳೆದ ಸಮಯ ಕೇವಲ ಮಾತುಕತೆಗೆ ಸೀಮಿತವಾಗಿರಲಿಲ್ಲ; ಜೀವನಕ್ಕೆ ಬೇಕಾದ ಅನುಭವ, ಅಮೂಲ್ಯ ಸಲಹೆಗಳು ಮತ್ತು ಹೊಸ ಸ್ಫೂರ್ತಿಯನ್ನು ನೀಡಿತು ಎಂದು ಹೇಳಿಕೊಂಡಿದ್ದಾರೆ.

'ನಿಮ್ಮ ಅಮೂಲ್ಯ ಸಮಯಕ್ಕೆ, ಪ್ರೀತಿಗೆ ಮತ್ತು ಸಲಹೆಗಳಿಗೆ ಧನ್ಯವಾದಗಳು ಜಗ್ಗೇಶ್ ಸರ್. ನಿಮ್ಮಂತಹ ಹಿರಿಯ ಕಲಾವಿದರ ಅನುಭವದ ಮಾತುಗಳನ್ನು ಹತ್ತಿರದಿಂದ ಕೇಳುವುದೇ ಒಂದು ಸೌಭಾಗ್ಯ. ನಿಮ್ಮ ಜೊತೆ ಕಳೆದ ಈ ಕ್ಷಣಗಳು ಮತ್ತು ನೀವು ನೀಡಿದ ಸಲಹೆಗಳನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಕೆಲವು ಭೇಟಿಗಳು ಆಕಸ್ಮಿಕವಾಗಿ ನಡೆಯುತ್ತವೆ. ಆದರೆ ಅವು ನೀಡುವ ನೆನಪುಗಳು ಜೀವನಪೂರ್ತಿ ನಮ್ಮೊಂದಿಗಿರುತ್ತವೆ' ಎಂಬರ್ಥದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳುತ್ತಿರುವ ಕೌಶಿಕ್‌ಗೆ ಹಿರಿಯ ನಟ ಜಗ್ಗೇಶ್ ಅವರಿಂದ ಇಂತಹ ಆತ್ಮೀಯತೆ ಮತ್ತು ಮಾರ್ಗದರ್ಶನ ಸಿಕ್ಕಿರುವುದು ಖುಷಿಯ ವಿಚಾರವೇ ಸರಿ. ಈ ಆಕಸ್ಮಿಕ ಭೇಟಿ ಅವರ ಮನದಲ್ಲಿ ಸಿಹಿ ನೆನಪಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.