'ಜನನಿ ಜನ್ಮಭೂಮಿ' ಚಿತ್ರೀಕರಣದ ವೇಳೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಕೈ ಮೂಳೆ ಮುರಿದಿತ್ತು. ಈ ಆಕಸ್ಮಿಕ ಅಪಘಾತಕ್ಕೆ ಕಾರಣರಾದ ಬ್ಯಾಂಕ್ ಸುರೇಶ್ ಅವರನ್ನು ರಕ್ಷಿಸುವ ಮೂಲಕ ವಿಷ್ಣು ತಮ್ಮ ದೊಡ್ಡಗುಣ ಮೆರೆದಿದ್ದರು. ಈ ಅಪರೂಪದ ಘಟನೆಯ ಕುತೂಹಲಕಾರಿ ಮಾಹಿತಿಯನ್ನು ಇದೀಗ ಬಹಿರಂಗ ಆಗಿದೆ.

ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಿನಿಮಾ ಜೀವನ ಕುರಿತಾದ ಅನೇಕ ಕುತೂಹಲಕಾರಿ ಸಂಗತಿಗಳು ಆಗಾಗ ಹೊರಬರುತ್ತಲೇ ಇರುತ್ತವೆ. ಅಂತೆಯೇ ಹಿರಿಯ ಸ್ಟಂಟ್ ಮಾಸ್ಟರ್ ಹಾಗೂ ನಟ ಬ್ಯಾಂಕ್ ಸುರೇಶ್ ಇದುವರೆಗೂ ಎಲ್ಲಿಯೂ ಹೇಳದ ವಿಷ್ಣುವರ್ಧನ್ ಬದುಕಿನ ಅಪರೂಪದ ಘಟನೆ ಹಾಗೂ ವಿಷ್ಣುವರ್ಧನ್‌ ಅವರ ದೊಡ್ಡಗುಣವನ್ನು ಸ್ಮರಿಸಿ ಭಾವುಕರಾಗಿದ್ದಾರೆ.

ಜನನಿ ಜನ್ಮಭೂಮಿ ಸೆಟ್‌ ಕಥೆ

ಇತ್ತೀಚೆಗೆ ನಡೆದ ವಿಶೇಷ ಸಂದರ್ಶನ ಒಂದರಲ್ಲಿ ಬ್ಯಾಂಕ್ ಸುರೇಶ್ ಮಾತನ್ನಾಡಿದ್ದಾರೆ. ಇದುವರೆಗೂ ಈ ವಿಚಾರ ಎಲ್ಲೂ ಗೊತ್ತಿಲ್ಲ. ನಾನೀಗ ಆ ಸೀಕ್ರೆಟ್ ಹೇಳ್ತಾ ಇದ್ದೇನೆ. ʼಜನನಿ ಜನ್ಮಭೂಮಿʼ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಬೆಳಗ್ಗೆಯೇ ಮೊದಲ ಫೈಟ್ ಸೀನ್ ಕಂಪೋಸ್ ಆಗಿತ್ತು. ವಿಷ್ಣುವರ್ಧನ್ ಸೆಟ್‌ಗೆ ಬಂದರು. ಫೈಟ್ ದೃಶ್ಯದ ವೇಳೆ ನಾನು (ಬ್ಯಾಂಕ್ ಸುರೇಶ್), ವಿಷ್ಣುವರ್ಧನ್ ಅವರಿಗೆ ಒಂದು ಕಿಕ್ (ಒದೆ) ಕೊಡಬೇಕಿತ್ತು. ಕಿಕ್ ಕೊಟ್ಟಾಗ ವಿಷ್ಣುವರ್ಧನ್ ಕೈಯಿಂದ ಬ್ಲಾಕ್ ಮಾಡಿದರು. ಆ ರಭಸಕ್ಕೆ ಲಟಕ್ ಎಂದು ಶಬ್ದ ಬಂದಿತ್ತು. ನಂತರ ನೋಡಿದ್ರೆ ವಿಷ್ಣುವರ್ಧನ್ ಕೈಯನ ಎರಡು ಮೂಳೆಗಳು ಮುರಿದು ಹೋಗಿದ್ದವು ಎಂದಿದ್ದಾರೆ.

ವಿಷ್ಣುವರ್ಧನ್ ಕೈ ಮುರಿದ ತಕ್ಷಣ ಇಡೀ ಸೆಟ್‌ನಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇತ್ತ ನನಗೆ ನಡುಕ ಶುರುವಾಗಿತ್ತು. ವಿಷ್ಣು ಸರ್ ಅಭಿಮಾನಿಗಳು ಹೇಗಿದ್ದರು ಅಂದರೆ, ವಿಷಯ ಗೊತ್ತಾದರೆ ನನ್ನನ್ನು ಸುಮ್ಮನೆ ಬಿಡುತ್ತಿರಲಿಲ್ಲ. ನನಗೆ ಭಯ ಶುರುವಾಗಿ ಎಲ್ಲಿಗಾದರೂ ಓಡಿಹೋಗೋಣ ಅನ್ನಿಸಿಬಿಟ್ಟಿತ್ತು ಎಂದು ಸುರೇಶ್ ಆ ಕ್ಷಣದ ನೆನಪಿಸಿಕೊಂಡಿದ್ದಾರೆ.

ನಂತರ ಆಸ್ಪತ್ರೆಯಲ್ಲಿ ಕೈಗೆ ಬ್ಯಾಂಡೇಜ್ ಹಾಕಿಸಿಕೊಂಡು ಮರಳಿ ಸೆಟ್‌ಗೆ ಬಂದ ವಿಷ್ಣುವರ್ಧನ್, ಯಾರು ಕಿಕ್ ಹೊಡೆದಿದ್ದು? ಎಂದು ಕೇಳಿದ್ದರು. ಹೊರಗಡೆಯಿಂದ ಬಂದಿದ್ದವರು ಯಾರೂ ಸುರೇಶ್ ಹೆಸರನ್ನು ಹೇಳಲಿಲ್ಲ. ಕೊನೆಗೆ ಸುರೇಶ್ ಅವರೇ ಮುಂದೆ ಬಂದು, ಅಣ್ಣಾ, ಗೊತ್ತಾಗಲಿಲ್ಲ ಕ್ಷಮಿಸಿ ಎಂದರು. ಆಗ ವಿಷ್ಣುವರ್ಧನ್ ಕೋಪ ಮಾಡಿಕೊಳ್ಳಲಿಲ್ಲ. ತಪ್ಪು ನಿಂದಲ್ಲ ಸುರೇಶ್, ನಂದೇ. ಬ್ಲಾಕ್ ಮಾಡಬೇಕಾದರೆ ನಾನು ಬೇರೆ ರೀತಿ ಹಿಡಿಯಬೇಕಿತ್ತು. ಯಾವುದೋ ಧ್ಯಾನದಲ್ಲಿ ತಪ್ಪಾಗಿ ಬ್ಲಾಕ್ ಮಾಡಿದ್ದರಿಂದ ಎರಡು ಮೂಳೆ ಮುರಿಯಿತು ಎಂದು ಸಮಾಧಾನಪಡಿಸಿದರು. ಅವರು ಬದುಕಿರುವವರೆಗೂ ಈ ವಿಚಾರವನ್ನು ಎಲ್ಲಿಯೂ ಬಾಯಿಬಿಡದೆ ನನ್ನನ್ನು ರಕ್ಷಿಸಿದ್ದರು ಎಂದು ವಿಷ್ಣುವರ್ಧನ್‌ ಅವರ ದೊಡ್ಡ ಗುಣವನ್ನು ಬಿಚ್ಚಿಟ್ಟಿದ್ದಾರೆ.

ಕೈ ಮೂಳೆ ಮುರಿದಿದ್ದರಿಂದ 'ಜನನಿ ಜನ್ಮಭೂಮಿ' ಚಿತ್ರೀಕರಣ ಎರಡು ತಿಂಗಳ ಕಾಲ ಸ್ಥಗಿತಗೊಂಡಿತ್ತು. ಎರಡು ತಿಂಗಳ ನಂತರ ಮತ್ತೆ ಶೂಟಿಂಗ್ ಶುರುವಾದಾಗ ವಿಷ್ಣುವರ್ಧನ್, ಸುರೇಶ್ ಅವರನ್ನು ಕರೆಸಿದರು. ಭೇಟಿಯಾದ ತಕ್ಷಣ ನಗುತ್ತಲೇ ಸುರೇಶ್, ನಿಮ್ಮಿಂದಾಗಿ ನಾನು ಎಲ್ಲಾ ದೇವರ ದರ್ಶನ ಮಾಡಿದೆ. ಶೂಟಿಂಗ್ ಇರಲಿಲ್ಲ, ಬೇರೆ ಕೆಲಸವೂ ಇರಲಿಲ್ಲ. ಹೀಗಾಗಿ ಎಲ್ಲಾ ದೇವಸ್ಥಾನಗಳನ್ನು ಸುತ್ತಿಕೊಂಡು ಬಂದೆ ಎಂದು ತಮಾಷೆ ಮಾಡಿದ್ದರಂತೆ. ಸಾಹಸಸಿಂಹ ವಿಷ್ಣುವರ್ಧನ್ ಈ ಸರಳತೆ, ಸಹಕಲಾವಿದರ ಮೇಲಿನ ಕಾಳಜಿ ಮತ್ತು ದೊಡ್ಡತನವನ್ನು ನೆನೆದು ಬ್ಯಾಂಕ್ ಸುರೇಶ್ ಭಾವುಕರಾಗಿದ್ದಾರೆ.