Ramayana box office collection: ಮಿಶ್ರ ವಿಮರ್ಶೆಗಳ ನಡುವೆಯೂ 'ರಾಮಾಯಣ' ಚಿತ್ರದ ಬಾಕ್ಸ್ ಆಫೀಸ್ ಓಟಕ್ಕೆ ಬ್ರೇಕ್ ಬಿದ್ದಿಲ್ಲ. ಬಿಡುಗಡೆಯಾದ 8 ದಿನಗಳಲ್ಲೇ ₹1,033.55 ಕೋಟಿ ಗಳಿಸಿ ದಾಖಲೆ ಬರೆದಿರುವ ಈ ಚಿತ್ರ, ಎರಡನೇ ವಾರದಲ್ಲೂ ಇದೇ ವೇಗವನ್ನು ಕಾಯ್ದುಕೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.
ದೀಪಾವಳಿಗೂ ಮುನ್ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ರಾಮಾಯಣ' ಸಿನಿಮಾ ಆರಂಭದಲ್ಲೇ 64.85 ಕೋಟಿ ರೂ. ಗಳಿಕೆಯೊಂದಿಗೆ ಶುಭಾರಂಭ ಮಾಡಿತು. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು, ಬಿಡುಗಡೆಯಾದ ದಿನದಿಂದಲೂ ಬಾಕ್ಸ್ ಆಫೀಸ್ನಲ್ಲಿ ಬಲಿಷ್ಠ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲ ವಾರಾಂತ್ಯದಲ್ಲಿ ಹಾಗೂ ದೀಪಾವಳಿಯ ನಂತರ ಚಿತ್ರದ ವಸೂಲಾತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಇದರೊಂದಿಗೆ 'ರಾಮಾಯಣ' ರಣಬೀರ್ ಕಪೂರ್ ಅವರಿಗೆ ಅತಿ ಹೆಚ್ಚು ಗಳಿಕೆ ತಂದುಕೊಟ್ಟ ಚಿತ್ರವಾಗಿ ಬದಲಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
'ರಾಮಾಯಣ'ಕ್ಕಿಂತ ಕಡಿಮೆ ಗಳಿಕೆ ಸಾಧಿಸಿದ ರಣಬೀರ್ ಚಿತ್ರಗಳು
'ರಾಮಾಯಣ' ಚಿತ್ರ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲೇ ರಣಬೀರ್ ಕಪೂರ್ ಅವರ ಹಿಂದಿನ ಎಲ್ಲಾ ಚಿತ್ರಗಳ ಸಮಗ್ರ ಜೀವಿತಾವಧಿ ಗಳಿಕೆಯನ್ನು ಹಿಂದಿಕ್ಕಿದೆ. ಎಂಟನೇ ದಿನಕ್ಕೆ 'ರಾಮಾಯಣ' ವಿಶ್ವದಾದ್ಯಂತ 1,000 ಕೋಟಿ ರೂ.ಗಡಿಯನ್ನು ದಾಟಿದೆ. ಪ್ರಸ್ತುತ 'ರಾಮಾಯಣ' ಚಿತ್ರದ ಒಟ್ಟು ಗಳಿಕೆ 1,033 ಕೋಟಿ ರೂ.ಗಳಷ್ಟಿದೆ. ವಿಶ್ವಾದ್ಯಂತ 915 ಕೋಟಿ ರೂ.ಗಳಿಸಿದ್ದ 'ಅನಿಮಲ್' ಚಿತ್ರವನ್ನು 'ರಾಮಾಯಣ' ಮೀರಿಸಿದೆ. ಅಂತೆಯೇ 588.50 ಕೋಟಿ ರೂ. ಜೀವಿತಾವಧಿ ಗಳಿಕೆ ದಾಖಲಿಸಿದ್ದ 'ಸಂಜು' ಚಿತ್ರದ ದಾಖಲೆಯನ್ನೂ ಇದು ಹಿಂದಿಕ್ಕಿದೆ. ರಣಬೀರ್ ಕಪೂರ್ ಅವರ ಇತರ ಚಿತ್ರಗಳಾದ 'ಬ್ರಹ್ಮಾಸ್ತ್ರ: ಪಾರ್ಟ್ ಒನ್ – ಶಿವ' ಹಾಗೂ 'ಯೇ ಜವಾನಿ ಹೈ ದೀವಾನಿ' ಕೂಡ 'ರಾಮಾಯಣ'ಕ್ಕಿಂತ ಕಡಿಮೆ ಗಳಿಕೆ ಸಾಧಿಸಿವೆ.
ಎಂಟನೇ ದಿನಕ್ಕೆ 'ರಾಮಾಯಣ' ಭಾರತದಲ್ಲಿ 53.50 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ಈ ಚಿತ್ರಕ್ಕೆ ಭಾರತದಲ್ಲಿ ಎಂಟನೇ ದಿನದಂದು ಒಟ್ಟು 24,042 ಪ್ರದರ್ಶನಗಳನ್ನು (ಶೋ) ನಡೆಸಲಾಗಿದೆ. ಇದರಲ್ಲಿ ಹಿಂದಿ ಆವೃತ್ತಿಯ 'ರಾಮಾಯಣ' 19,464 ಪ್ರದರ್ಶನಗಳ ಮೂಲಕ 43 ಕೋಟಿ ರೂ.ಗಳಿಸಿದೆ. ಕನ್ನಡ ಆವೃತ್ತಿಯು 3.25 ಕೋಟಿ ರೂ.ಗಳಿಕೆ ನೀಡಿದ್ದರೆ, ಮಲಯಾಳಂ ಆವೃತ್ತಿಯು 2.80 ಕೋಟಿ ರೂ.ಸಂಪಾದಿಸಿದೆ. ವಿದೇಶಗಳಲ್ಲಿ 'ರಾಮಾಯಣ' 25 ಕೋಟಿ ರೂ. ವಸೂಲಿ ಮಾಡಿದ್ದು, ವಿದೇಶಗಳಲ್ಲಿ ಚಿತ್ರದ ಒಟ್ಟು ಗಳಿಕೆ 358.50 ಕೋಟಿ ರೂ. ತಲುಪಿದೆ.
ಪ್ರೇಕ್ಷಕರ ಪ್ರತಿಕ್ರಿಯೆಯತ್ತ ಗಮನ
ಪ್ರಸ್ತುತ 'ರಾಮಾಯಣ' ಚಿತ್ರದ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಗಳಿಕೆ ರೂ. 1,033.55 ಕೋಟಿಗಳಷ್ಟಿದೆ. ವ್ಯಾಪಾರ ವಿಶ್ಲೇಷಕರು ಚಿತ್ರದ ಎರಡನೇ ವಾರಾಂತ್ಯದ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಚಿತ್ರವು ತನ್ನ ಬಲವಾದ ಪ್ರದರ್ಶನವನ್ನು ಮುಂದುವರಿಸಲಿದೆ ಎಂದು ಅಂದಾಜಿಸಿದ್ದಾರೆ. ಆದಾಗ್ಯೂ, 'ರಾಮಾಯಣ' ಎರಡನೇ ವಾರದಲ್ಲೂ ತನ್ನ ಉತ್ಸಾಹವನ್ನು ಮುಂದುವರಿಸಲು ಸಾಧ್ಯವೇ ಎಂಬ ವಿಚಾರದಲ್ಲಿ ಅನಿಶ್ಚಿತತೆ ಇದೆ. ಚಿತ್ರದ ಕುರಿತು ಮಿಶ್ರ ವಿಮರ್ಶೆಗಳು ಮುಂದುವರಿದಿರುವುದರಿಂದ, ಪ್ರೇಕ್ಷಕರ ಪ್ರತಿಕ್ರಿಯೆ ಹಾಗೂ ಚಿತ್ರದ ವಾಣಿಜ್ಯ ಪ್ರದರ್ಶನದತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಈ ಮೊದಲೇ ಹೇಳಿದ ಹಾಗೆ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡಿಗರ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ ಬಲಿಷ್ಠ 'ರಾವಣ'ನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಯಶ್ ಅವರಿಗಿರುವ ಜನಪ್ರಿಯತೆ 'ರಾಮಾಯಣ' ಚಿತ್ರಕ್ಕೆ ದಕ್ಷಿಣ ಭಾರತದ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಬಲ ತಂದುಕೊಟ್ಟಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಯಶ್ ಅಭಿಮಾನಿಗಳಿಂದ ಚಿತ್ರಕ್ಕೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಕನ್ನಡ ಆವೃತ್ತಿಯೊಂದೇ 3.25 ಕೋಟಿ ರೂ. ಗಳಿಸಿರುವುದು ಚಿತ್ರದ ಮೇಲಿನ ಕ್ರೇಜ್ಗೆ ಸಾಕ್ಷಿಯಾಗಿದೆ. (ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹಿಂದಿ ಮತ್ತು ಇತರ ಭಾಷೆಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ).













