Yash as Ravana in Ramayana: ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿರುವ 'ರಾಮಾಯಣ' ಸಿನಿಮಾ ಕೇವಲ ಆರೇ ದಿನಗಳಲ್ಲಿ ಬರೋಬ್ಬರಿ ₹849 ಕೋಟಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಬರೆದಿದೆ. ಈ ನಡುವೆ ಚಿತ್ರದಲ್ಲಿ 'ರಾವಣ'ನಾಗಿ ಅಬ್ಬರಿಸಿರುವ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಈ ನಟ ನೀಡಿರುವ ಹೇಳಿಕೆ ಇದೀಗ ಎಲ್ಲರ ಗಮನ ಸೆಳೆದಿದೆ.
ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಈ ಚಿತ್ರವು, ಕೇವಲ ಆರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ ₹849 ಕೋಟಿ ಗಳಿಕೆ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಒಟ್ಟಾರೆಯಾಗಿ ಸುಮಾರು ₹4,000 ಕೋಟಿ ಬಜೆಟ್ನಲ್ಲಿ ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ) ಹಾಗೂ ಯಶ್ (ರಾವಣ) ಕಾಂಬಿನೇಷನ್ನಲ್ಲಿ ಮೂಡಿಬಂದಿರುವ 'ರಾಮಾಯಣ' ಚಿತ್ರವು, ಚಿತ್ರಮಂದಿರಗಳಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿದೆ.
ಕರ್ನಾಟಕದಲ್ಲಿ 'ಕಾಂತಾರ' ದಾಖಲೆ ಸರಿಗಟ್ಟಿದ ಚಿತ್ರ!
ಕರ್ನಾಟಕದಲ್ಲಿಯೂ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಮೊದಲ ದಿನ ₹15.2 ಕೋಟಿ ಗಳಿಸಿದ್ದ ಚಿತ್ರ, ನಂತರದ ದಿನಗಳಲ್ಲಿ ಕ್ರಮವಾಗಿ ₹10.1 ಕೋಟಿ, ₹14.7 ಕೋಟಿ, ₹16.1 ಕೋಟಿ, ₹5ನೇ ದಿನ ₹16.8 ಕೋಟಿ ಹಾಗೂ 6ನೇ ದಿನ ₹17 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ₹89.9 ಕೋಟಿ ಗಳಿಸಿದೆ.
ಅಲ್ಲದೆ, ಕರ್ನಾಟಕದಲ್ಲಿ ಸತತ 6 ದಿನಗಳ ಕಾಲ ಡಬಲ್ ಡಿಜಿಟ್ (ಹತ್ತಕ್ಕೂ ಹೆಚ್ಚು ಕೋಟಿ) ಗಳಿಕೆ ಕಂಡ ‘ಕಾಂತಾರ ಚಾಪ್ಟರ್ 1’ ದಾಖಲೆಯನ್ನು ‘ರಾಮಾಯಣ’ ಸರಿಗಟ್ಟಿದ್ದು, ಬುಧವಾರವೂ ಇದೇ ಟ್ರೆಂಡ್ ಮುಂದುವರಿದರೆ ಹೊಸ ಇತಿಹಾಸ ಬರೆಯಲಿದೆ.
ಇದೇ ವೇಳೆ ಚಿತ್ರದಲ್ಲಿ 'ರಾವಣ'ನ ಪಾತ್ರದಲ್ಲಿ ಅಬ್ಬರಿಸಿರುವ ರಾಕಿಂಗ್ ಸ್ಟಾರ್ ಯಶ್ ಕುರಿತು ಸ್ಯಾಂಡಲ್ವುಡ್ ನಟ ಚಿಕ್ಕಣ್ಣ ನೀಡಿರುವ ತಮಾಷೆಯ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
" ರಿಯಲ್ ಲೈಫ್ನಲ್ಲಿ ರಾಮ, ಸಿನಿಮಾದಲ್ಲಿ ರಾವಣ"
ಚಿತ್ರದಲ್ಲಿ ರಾವಣನಾಗಿ ಯಶ್ ಅವರ ಲುಕ್ ಮತ್ತು ನಟನೆಗೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ತಮ್ಮ ಮುಂಬರುವ 'ಲಕ್ಷ್ಮೀಪುತ್ರ' ಸಿನಿಮಾದ ಪ್ರಚಾರದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಚಿಕ್ಕಣ್ಣ ಹಾಗೂ ನಾಯಕಿ ವಂದಿತಾ, ಯಶ್ ಅವರ ರಾವಣನ ಪಾತ್ರದ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕಿ, "ರಾಮಾಯಣದಲ್ಲಿ ರಾವಣನಾಗಿ ಯಶ್ ಅವರೇ ಪರ್ಫೆಕ್ಟ್, ಕರೆಕ್ಟ್ ಕ್ಯಾರೆಕ್ಟರ್ ಅಂತ ಅನ್ಸುತ್ತೆ ಅಲ್ವಾ?" ಎಂದು ಕೇಳಿದಾಗ, ಹಾಸ್ಯ ನಟ ಚಿಕ್ಕಣ್ಣ ತಮ್ಮದೇ ಶೈಲಿಯಲ್ಲಿ ನಗುತ್ತಾ, "ಆದರೆ ನಿಜ ಜೀವನದಲ್ಲಿ ಹಾಗಲ್ಲ, ಕ್ಯಾರೆಕ್ಟರ್ ಉಲ್ಟಾ ಇದೆ! ಅವರು ರಿಯಲ್ ಲೈಫ್ನಲ್ಲಿ ರಾಮ, ಸಿನಿಮಾದಲ್ಲಿ ಆಕ್ಟ್ ಮಾಡಿರೋದು ಮಾತ್ರ ರಾವಣ!" ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
'ಲಕ್ಷ್ಮೀಪುತ್ರ' ನಾಯಕಿ ವಂದಿತಾ ಬಗ್ಗೆ ಚಿಕ್ಕಣ್ಣ ಮಾತು
ಇದೇ ಸಂದರ್ಶನದಲ್ಲಿ ತಮ್ಮ ನಾಯಕಿ ವಂದಿತಾ ಬಗ್ಗೆ ಮಾತನಾಡಿದ ಚಿಕ್ಕಣ್ಣ, "ಆನ್ಸ್ಕ್ರೀನ್ ಮತ್ತು ಆಫ್ಸ್ಕ್ರೀನ್ ಅವರಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಯಾವಾಗಲೂ ಹೀಗೇ ಇರ್ತಾರೆ. ಮೊದಲ ಬಾರಿಗೆ ನಟಿಸಿದಂತೆ ಎಲ್ಲೂ ಅನಿಸುವುದಿಲ್ಲ, ತುಂಬಾ ಚೆನ್ನಾಗಿ ನಟಿಸಿದ್ದಾರೆ, ಡೆಡಿಕೇಟೆಡ್ ಆಗಿದ್ದಾರೆ. ನಮ್ಮ ‘ಲಕ್ಷ್ಮೀಪುತ್ರ’ ಚಿತ್ರದ ಕಥೆಗೆ ಯಾವ ರೀತಿಯ ನಾಯಕಿ ಬೇಕಿತ್ತೋ ಅದಕ್ಕೆ ಪರ್ಫೆಕ್ಟ್ ಆಗಿ ಹೊಂದಿಕೊಂಡಿದ್ದಾರೆ. ಮುಂದೆಯೂ ಹೀಗೇ ತಗ್ಗಿ-ಬಗ್ಗಿ ಇರಲಿ ಅಷ್ಟೇ ಸಾಕು" ಎಂದು ಕಾಲೆಳೆದರು.
ಇದಕ್ಕೆ ಉತ್ತರಿಸಿದ ನಾಯಕಿ ವಂದಿತಾ, "ಚಿಕ್ಕಣ್ಣ ಅವರು ಕೇವಲ ಕಾಮಿಡಿಯನ್ ಆಗಿದ್ದಾಗಿನಿಂದಲೂ ನಾನು ಅವರ ದೊಡ್ಡ ಫ್ಯಾನ್. ಮೈಸೂರಿನ ಸಣ್ಣ ಹಳ್ಳಿಯಿಂದ ಬಂದು, ಯಾವುದೇ ಗಾಡ್ಫಾದರ್ ಅಥವಾ ಬ್ಯಾಕ್ಗ್ರೌಂಡ್ ಇಲ್ಲದೆ ಕಷ್ಟಪಟ್ಟು ಹೀರೋ ಆಗಿ ಬೆಳೆದಿರುವುದು ನಿಜಕ್ಕೂ ದೊಡ್ಡ ಸ್ಫೂರ್ತಿ. ಅವರಿಗೂ ದೊಡ್ಡ ಫ್ಯಾನ್ ಬೇಸ್ ಇದೆ. ನಾವಿಬ್ಬರೂ ಮೈಸೂರಿನವರೇ ಆಗಿದ್ದು, ಅವರ ಜೊತೆ ನಾಯಕಿಯಾಗಿ ನಟಿಸಿದ್ದು ನನಗೆ ತುಂಬಾನೇ ಖುಷಿ ಕೊಟ್ಟಿದೆ" ಎಂದರು.
ಇನ್ನು ಸಂದರ್ಶನದ ಕೊನೆಯಲ್ಲಿ ಸಿನಿಮಾದ ಡೈಲಾಗ್ ಹೇಳುವಂತೆ ನಿರೂಪಕಿ ಕೇಳಿದಾಗ, "ಈಗಲೇ ಡೈಲಾಗ್ ಹೇಳಲ್ಲ, ಮರೆತುಹೋಗಿದೆ! ಸಿನಿಮಾ ರಿಲೀಸ್ ಆದ್ಮೇಲೆ ನೋಡಿ ಜನರಿಗೆ ಯಾವುದು ಇಷ್ಟ ಆಗುತ್ತೋ ಆ ಡೈಲಾಗ್ ಹೇಳ್ತೀನಿ" ಎಂದು ಚಿಕ್ಕಣ್ಣ ತಮಾಷೆಯಾಗಿ ಮಾತು ಮುಗಿಸಿದರು.












