ರಿಯಲ್ ಸ್ಟಾರ್ ಉಪೇಂದ್ರ ಮತ್ತು ChatGPT ಸಹಯೋಗದ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ.20ರಂದು ಬಿಡುಗಡೆಯಾದ ಈ ರೀಲ್‌ನಲ್ಲಿ ಉಪೇಂದ್ರ ತಮ್ಮ ವಿಶಿಷ್ಟ 'ನಾನು ನಾನು' ಶೈಲಿಯಲ್ಲಿ ChatGPT ಜೊತೆ ಸಂಭಾಷಣೆ ನಡೆಸಿದ್ದಾರೆ.

ಉಪೇಂದ್ರ ಅವರ ಸಿನಿಮಾ ನೋಡಿದವರಿಗೆ ಅವರ ಆಲೋಚನೆಗಳ ವೇಗ ಎಂಥದ್ದು ಎಂಬುದು ಗೊತ್ತು. ಒಂದು ಸರಳ ಪ್ರಶ್ನೆಯನ್ನೇ ಸಂಕೀರ್ಣವಾಗಿಸಿ, ಸಂಕೀರ್ಣ ವಿಚಾರವನ್ನೂ ಹೊಸ ದೃಷ್ಟಿಕೋನದಲ್ಲಿ ನೋಡುವಂತೆ ಮಾಡುವುದೇ ಉಪ್ಪಿ ಸ್ಟೈಲ್. ಈಗ ಇದೇ ವಿಶಿಷ್ಟ ಶೈಲಿ ಕೇವಲ ಬೆಳ್ಳಿತೆರೆಗೆ ಸೀಮಿತವಾಗಿಲ್ಲ. ನೇರವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ (AI) ಜಗತ್ತಿಗೂ ಕಾಲಿಟ್ಟಿದೆ!

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಚಾಟ್‌ಜಿಪಿಟಿ ಸಹಯೋಗದಲ್ಲಿ ಮೂಡಿಬಂದಿರುವ ಹೊಸ ಜಾಹೀರಾತು ರೀಲ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದರಲ್ಲೂ, AI ಜೊತೆಗಿನ ಸಂಭಾಷಣೆಯಲ್ಲಿ ಉಪೇಂದ್ರ ತಮ್ಮ ಎಂದಿನ 'ನಾನು ನಾನು' ಶೈಲಿಯನ್ನು ಮುಂದುವರಿಸಿರುವುದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ. ಅಷ್ಟೇ ಅಲ್ಲ, AI ಎದುರು ಉಪ್ಪಿ ತಮ್ಮದೇ ಆದ 'UI' ಪರಿಕಲ್ಪನೆಯನ್ನು ಮುಂದಿಟ್ಟಿರುವುದು ಈ ವಿಡಿಯೋದ ವಿಶೇಷ ಆಕರ್ಷಣೆ.

AIಗೆ ಉಪ್ಪಿ ಕೊಟ್ಟ ಹೊಸ ಅರ್ಥವೇನು?

ನವೆಂಬರ್ 20ರಂದು ಬಿಡುಗಡೆಯಾದ ಈ ಜಾಹೀರಾತಿನಲ್ಲಿ ಉಪೇಂದ್ರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ (AI) ಎಂಬ ಜನಪ್ರಿಯ ತಂತ್ರಜ್ಞಾನಕ್ಕೆ ತಮ್ಮದೇ ಆದ ತಿರುವು ನೀಡಿದ್ದಾರೆ. AI ಬದಲಿಗೆ 'UI' ಅಂದರೆ 'Uppi Intelligence' ಎಂಬ ತಮಾಷೆಯ ಕಲ್ಪನೆಯನ್ನು ಪರಿಚಯಿಸಿದ್ದಾರೆ. ಹೀಗಾಗಿ ಇದು ಕೇವಲ ಒಂದು ಜಾಹೀರಾತಾಗಿ ಉಳಿಯದೆ, ಉಪ್ಪಿ ಅಭಿಮಾನಿಗಳಿಗೆ ಅವರ ವಿಶಿಷ್ಟ ಚಿಂತನಾ ಶೈಲಿಯನ್ನು ಮತ್ತೊಮ್ಮೆ ನೆನಪಿಸುವ ವಿಡಿಯೋ ಆಗಿದೆ.

ವಿಡಿಯೋದಲ್ಲಿ ಉಪೇಂದ್ರ, ತಮ್ಮ 'ಉಪೇಂದ್ರ' ಮತ್ತು 'UI' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ 'ನಾನು, ನೀನು' ಎಂಬ ಚಿಂತನೆಯ ಧಾಟಿಯಲ್ಲೇ ಚಾಟ್‌ಜಿಪಿಟಿ ಜೊತೆ ಸಂಭಾಷಣೆ ನಡೆಸಿದ್ದಾರೆ. ಸಾಮಾನ್ಯವಾಗಿ AIಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ರೀತಿಗಿಂತ ಭಿನ್ನವಾಗಿ, ತಮ್ಮದೇ ಆದ ತರ್ಕ ಮತ್ತು ಪ್ರಶ್ನೆಗಳ ಮೂಲಕ ಸಂಭಾಷಣೆಯನ್ನು ಕುತೂಹಲಕರವಾಗಿಸಿದ್ದಾರೆ. ಪ್ರಶ್ನೆ ಕೇಳುವ ಉಪ್ಪಿ ಶೈಲಿ, ಅದಕ್ಕೆ ಪ್ರತಿಕ್ರಿಯಿಸುವ AI-ಇವೆರಡರ ನಡುವಿನ ಸಂಭಾಷಣೆಯೇ ಜಾಹೀರಾತಿನ ಪ್ರಮುಖ ಹೈಲೈಟ್.

'ಮನುಷ್ಯರ ತಲೆಗೆ ಹುಳ ಬಿಟ್ಟಿದ್ದ ಉಪ್ಪಿ, ಈಗ AI ಸರದಿ!'

ಈ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಕಾಮೆಂಟ್‌ಗಳ ಸುರಿಮಳೆಯೇ ಹರಿದಿದೆ. ಉಪ್ಪಿ ಅವರ ಪ್ರಶ್ನಿಸುವ ಶೈಲಿಯನ್ನು ಮೆಚ್ಚಿಕೊಂಡಿರುವ ನೆಟ್ಟಿಗರು, ತಮಾಷೆಯ ಮಾತುಗಳ ಮೂಲಕ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. "ಇಷ್ಟು ದಿನ ಮನುಷ್ಯರ ತಲೆಗೆ ಹುಳ ಬಿಡುತ್ತಿದ್ದ ಉಪ್ಪಿ, ಈಗ AI ತಲೆಗೂ ಹುಳ ಬಿಟ್ಟಿದ್ದಾರೆ", "ಉಪ್ಪಿ ಪ್ರಶ್ನೆಗಳಿಗೆ ಉತ್ತರ ಕೊಡಲು ಚಾಟ್‌ಜಿಪಿಟಿ ಕೂಡ ಹ್ಯಾಂಗ್ ಆಗಬಹುದು" ಎಂಬಂತಹ ಕಾಮೆಂಟ್‌ಗಳು ಗಮನ ಸೆಳೆಯುತ್ತಿವೆ.

ಇನ್ನು ತಂತ್ರಜ್ಞಾನ ಮತ್ತು ಮನರಂಜನೆಯ ಸಂಗಮಕ್ಕೆ ಉಪೇಂದ್ರ ತಮ್ಮದೇ ಆದ 'UI' ಟಚ್ ನೀಡಿದ್ದಾರೆ. ಸಿನಿಮಾ ಮೂಲಕ ಪ್ರೇಕ್ಷಕರನ್ನು ಯೋಚಿಸುವಂತೆ ಮಾಡುತ್ತಿದ್ದ ಉಪ್ಪಿ, ಈ ಬಾರಿ AI ಜೊತೆಗಿನ ಸಂಭಾಷಣೆಯಲ್ಲೂ ಅದೇ ಕುತೂಹಲವನ್ನು ಸೃಷ್ಟಿಸಿದ್ದಾರೆ. ಅದಕ್ಕೇ ಇರಬೇಕು, 'AIಗೆ ಉಪ್ಪಿ ಎದುರಾದರೆ ಹೇಗಿರಬಹುದು?' ಎಂಬ ಪ್ರಶ್ನೆಗೆ ಈ ಜಾಹೀರಾತು ಸಖತ್ ಮನರಂಜನಾತ್ಮಕ ಉತ್ತರ ನೀಡುತ್ತಿದೆ.