ಬೆಂಗಳೂರಿನಲ್ಲಿ ನಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತ್ಯುತ್ಸವದಲ್ಲಿ ಗಾನ ಸುಧೆ ಆಲಿಸುತ್ತಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಕರ್ನಾಟಿಕ್ ಸಂಗೀತದಲ್ಲಿ ಭಕ್ತಿಯೇ ಜೀವಾಳ ಎಂದ ಅವರು, ಸುಬ್ಬುಲಕ್ಷ್ಮಿ ಅವರ ಸಾಧನೆ ಹಾಗೂ ಗಾಂಧೀಜಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಬೆಂಗಳೂರು (ಸೆ.16): ಕರ್ನಾಟಿಕ್‌ ಸಂಗೀತ ಕ್ಷೇತ್ರದ ದಂತಕಥೆ, 'ಭಾರತ ರತ್ನ' ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110 ನೇ ಜಯಂತ್ಯುತ್ಸವದ ಅಂಗವಾಗಿ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗಾನ ಸುಧೆಯನ್ನು ಆಲಿಸುತ್ತಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾವುಕರಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, 'ಭಕ್ತಿ'ಯನ್ನು ಕರ್ನಾಟಿಕ್‌ ಸಂಗೀತದ "ಜೀವಕೋಶ" (Living soul) ಎಂದು ಬಣ್ಣಿಸಿದರು. ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ರೂಪಿಸುವಲ್ಲಿ ವಿವಿಧ ಭಾಷೆಗಳು ಹಾಗೂ ಧಾರ್ಮಿಕ ಚೌಕಟ್ಟುಗಳು ವಹಿಸಿದ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು.

"ಕರ್ನಾಟಿಕ್‌ ಸಂಗೀತದಲ್ಲಿರುವ ಭಕ್ತಿಯು ಈ ಪರಂಪರೆಯ ಜೀವಂತ ಆತ್ಮವಾಗಿದೆ. ಇದು ಪ್ರಮುಖ ಭಾಷೆಗಳ ಭವ್ಯ ಸಂಗಮದ ಮೂಲಕ ಸದಾ ಜೀವಂತವಾಗಿ ಸಾಗಿದೆ. ಒಂದೇ ಸಂಗೀತ ಕಚೇರಿಯಲ್ಲಿ, ವಿವಿಧ ಭಾಷಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳು ನದಿಗಳು ಸಾಗರವನ್ನು ಸೇರುವಂತೆ ಒಂದಾಗಿ ಹರಿಯುತ್ತವೆ" ಎಂದು ಸಚಿವೆ ಹೇಳಿದರು. ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಭಕ್ತಿ ಪರಂಪರೆಯು 12, 13 ಮತ್ತು 14 ನೇ ಶತಮಾನಗಳಲ್ಲಿ ಉತ್ತರ ಭಾರತಕ್ಕೂ ಪಸರಿಸಿತು ಮತ್ತು ಇದು ಹಿಂದುಸ್ತಾನಿ ಭಜನೆಗಳ ಮೇಲೆಯೂ ಪ್ರಭಾವ ಬೀರಿದೆ ಎಂದರು.

ಮಹಾತ್ಮ ಗಾಂಧೀಜಿ ಮತ್ತು 'ಹರಿ ತುಮ್ ಹರೋ' ಭಜನೆಯ ನೆನಪು

ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಠಿಣ ಸಂಗೀತ ಅಭ್ಯಾಸ, ವಿನಯತೆ ಹಾಗೂ ಕಲೆಯ ಮೇಲಿದ್ದ ನಿಷ್ಠೆಯನ್ನು ಸಚಿವೆ ನೆನಪಿಸಿಕೊಂಡರು. "ಅವರ ಗಾಯನ ಪ್ರತಿಭೆಯು ಕಠಿಣ ಬೌದ್ಧಿಕ ಶಿಸ್ತನ್ನು ಆಧರಿಸಿತ್ತು. ತಮ್ಮ ಅಪಾರ ಸಾಧನೆಯ ಹೊರತಾಗಿಯೂ ಅವರು ಕೊನೆಯವರೆಗೂ ತಮ್ಮನ್ನು ಸಂಗೀತ ವಿದ್ಯಾರ್ಥಿಯೆಂದೇ ಪರಿಭಾವಿಸಿದ್ದರು" ಎಂದರು.

ಇದೇ ವೇಳೆ, ಮಹಾತ್ಮ ಗಾಂಧೀಜಿ ಅವರಿಗಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಮೀರಾಬಾಯಿ ಅವರ "ಹರಿ ತುಮ್ ಹರೋ" ಭಜನೆಯನ್ನು ಹಾಡಿದ ಘಟನೆಯನ್ನು ಸಚಿವರು ಸ್ಮರಿಸಿದರು. ಗಾಂಧೀಜಿಯವರಿಗಾಗಿ ಈ ಭಜನೆಯನ್ನು ಧ್ವನಿಮುದ್ರಣ ಮಾಡುವ ಮುನ್ನ, ಅದರ ಸರಿಯಾದ ಉಚ್ಚಾರಣೆಗಾಗಿ ಸುಬ್ಬುಲಕ್ಷ್ಮಿ ಅವರು ಇಡೀ ರಾತ್ರಿ ಶ್ರಮಿಸಿದ್ದರು. ಈ ಬಗ್ಗೆ ಗಾಂಧೀಜಿಯವರು, "ಬೇರಾರೂ ಹಾಡುವುದಕ್ಕಿಂತ ಸುಬ್ಬುಲಕ್ಷ್ಮಿ ಅವರು ಈ ಭಜನೆಯನ್ನು ಹೇಳುವುದನ್ನೇ ನಾನು ಹೆಚ್ಚು ಇಷ್ಟಪಡುತ್ತೇನೆ" ಎಂದು ಹೇಳಿದ್ದನ್ನು ಸಚಿವರು ಉಲ್ಲೇಖಿಸಿದರು.

ಅಲ್ಲದೆ, ಸುಬ್ಬುಲಕ್ಷ್ಮಿ ಅವರ ಪರೋಪಕಾರಿ ಗುಣವನ್ನು ಕೊಂಡಾಡಿದ ಸಚಿವೆ, ತಾವು ಕಚೇರಿಗಳಿಂದ ಗಳಿಸಿದ ಆದಾಯವನ್ನು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಿಗೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ವಿವಿಧ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡುತ್ತಿದ್ದರು ಎಂದು ತಿಳಿಸಿದರು.

ಸಂಗೀತ ಕ್ಷೇತ್ರದ ಮಹಾನ್ ಚೇತನ 'ಎಂ.ಎಸ್. ಸುಬ್ಬುಲಕ್ಷ್ಮಿ'

ಜನನ ಮತ್ತು ಹಿನ್ನೆಲೆ: ಸೆಪ್ಟೆಂಬರ್ 16, 1916 ರಂದು ಮಧುರೈನಲ್ಲಿ ಸಾಂಪ್ರದಾಯಿಕ ಕಲಾ ಕುಟುಂಬದಲ್ಲಿ ಜನಿಸಿದ ಮಧುರೈ ಶಣ್ಮುಖವಡಿವು ಸುಬ್ಬುಲಕ್ಷ್ಮಿ (MS Subbulakshmi) ಅವರು, 20 ನೇ ಶತಮಾನದ ಕರ್ನಾಟಿಕ್‌ ಸಂಗೀತದ ಶ್ರೇಷ್ಠ ಕಂಠಸಿರಿಯಾಗಿ ಹೊರಹೊಮ್ಮಿದರು. ಇವರ ಸಂಗೀತವು ದೇಶ-ವಿದೇಶಗಳ ಗಡಿಗಳನ್ನು ದಾಟಿ ಜಾತಿ, ಭಾಷೆ, ಪ್ರಾದೇಶಿಕತೆ ಮತ್ತು ಧರ್ಮಗಳ ಬೇಲಿಗಳನ್ನು ಮೀರಿ ಜನಪ್ರಿಯತೆ ಗಳಿಸಿತ್ತು.

1974 ರಲ್ಲಿ 'ರಾಮನ್ ಮ್ಯಾಗ್ಸೆಸೆ' (Ramon Magsaysay) ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಂಗೀತಗಾರ್ತಿ ಇವರಾಗಿದ್ದರು. 1966 ರಲ್ಲಿ ಸಂಯುಕ್ತ ರಾಷ್ಟ್ರಸಂಸ್ಥೆಯ (UN General Assembly) ಮಹಾಸಭೆಯಲ್ಲಿ ಗಾಯನ ನಡೆಸಿಕೊಟ್ಟ ಪ್ರಥಮ ಭಾರತೀಯ ಕಲಾಕಾರರೆನಿಸಿದ್ದರು. 1998 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪ್ರಶಸ್ತಿ ಪುರಸ್ಕೃತರಾದ ಮೊದಲ ಸಂಗೀತಗಾರ್ತಿ ಇವರು. ತಮ್ಮ ನಾದೋಪಾಸನೆಯ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಡಿಸೆಂಬರ್ 11, 2004 ರಂದು ತಮ್ಮ 88 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು.

Scroll to load tweet…