ಜೀ ವಾಹಿನಿಯ 'ಕರ್ಣ' ಧಾರಾವಾಹಿಯಲ್ಲಿ ವೈದ್ಯೆ ನಿಧಿ ದಿಢೀರ್ ವಕೀಲೆಯಾಗಿ ವಾದ ಮಾಡಿದ ದೃಶ್ಯದ ವಿರುದ್ಧ ವಕೀಲರೊಬ್ಬರು BCCC ಗೆ ದೂರು ನೀಡಿದ್ದರು. ಈ ಕುರಿತು ವಾಸ್ತವಿಕತೆಗೆ ಹತ್ತಿರವಾದ ದೃಶ್ಯ ಪ್ರಸಾರ ಮಾಡುವಂತೆ ಮಂಡಳಿ ವಾಹಿನಿಗೆ ಸೂಚನೆ ನೀಡಿದೆ.
ಬೆಂಗಳೂರು: ಸೀರಿಯಲ್ಗಳು ಎಂದರೆ ಎಲ್ಲವೂ ಕಾಲ್ಪನಿಕವೇ. ಕೆಲವೊಮ್ಮೆ ಕೆಲವು ದೃಶ್ಯಗಳು ವಾಸ್ತವಕ್ಕೆ ಹತ್ತಿರ ಎನ್ನಿಸುವ ಎಳ್ಳಷ್ಟೂ ಅಂಶ ಒಳಗೊಂಡಿರುವುದಿಲ್ಲ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು, ರೋಚಕತೆಗಾಗಿ ಆ ದೃಶ್ಯಗಳನ್ನು ಸೇರಿಸಲಾಗುತ್ತದೆ ಅಷ್ಟೇ. ಅದರಲ್ಲಿ ಒಂದು ಕರ್ಣ ಸೀರಿಯಲ್ (Karna Serial). ಈ ಸೀರಿಯಲ್ನಲ್ಲಿ ನಾಯಕ ಕರ್ಣ ಜೈಲಿಗೆ ಹೋಗುವ ಸಂದರ್ಭ ಬಂದಾಗ ವೈದ್ಯೆಯಾಗಿರುವ ನಾಯಕಿ ನಿಧಿ ದಿಢೀರನಿಗೆ ಲಾಯರ್ ಆಗಿ ವಾದ ಮಾಡಿ ಗೆಲ್ಲುತ್ತಾಳೆ. ಅಷ್ಟಕ್ಕೂ ವಾಸ್ತವದಲ್ಲಿ ಇದು ಸಾಧ್ಯವೇ ಇಲ್ಲದ ಮಾತು. ಯಾವುದೇ ಹುದ್ದೆಯಲ್ಲಿ ಇದ್ದರೂ ಕೋರ್ಟ್ನಲ್ಲಿ ತಮ್ಮ ಪರವಾಗಿ ತಾವು ವಾದ ಮಾಡಬಹುದೇ ವಿನಾ, ಬೇರೆಯವರ ಪರ ವಕಾಲತ್ತು ವಹಿಸುವಂತೆ ಇಲ್ಲ. ಆದರೆ ಸೀರಿಯಲ್ ಅಂದ ಮೇಲೆ ಜನರನ್ನು ಖುಷಿಪಡಿಸಲು ಈ ದೃಶ್ಯ ಹಾಕಲಾಗಿತ್ತು. ಇದಕ್ಕೆ ತಾರಾ ಪಾತ್ರದ ಕಡೆಯಿಂದ ಸಮಜಾಯಿಷಿ ನೀಡಲಾಗಿತ್ತು. ಕೇಸ್ ಫೈಲ್ ಮಾಡಿದಾಗ ವಾದ ಮಾಡುವುದಕ್ಕೆ ಲಾಯರ್ ಇಲ್ಲ ಅಂದರೆ ಅದು ಸ್ಪೆಷಲ್ ಕೇಸ್ ಎಂದು ಪರಿಗಣನೆಗೆ ಬರುತ್ತದೆ. ಯಾರು ಬೇಕಾದರೂ ವಾದ ಮಾಡಬಹುದು, ಅದಕ್ಕೆ ಲಾಯರ್ ಆಗಬೇಕು ಅಂತ ಏನೂ ಇಲ್ಲ ಎನ್ನಲಾಗಿತ್ತು. ಆದರೆ ವಾಸ್ತವದಲ್ಲಿ ಬೇರೆಯವರ ಕೇಸ್ ಅನ್ನು ಹೀಗೆ ಯಾರು ಬೇಕಾದರೂ ವಾದ ಮಾಡುವ ಅವಕಾಶ ಕಾನೂನಿನಲ್ಲಿ ಇಲ್ಲ!
ಇದರ ವಿರುದ್ಧ ಈಗ ಬೆಂಗಳೂರಿನ ವಕೀಲ ಎಸ್. ಸುಮಂತ ಅವರು ‘ಜೀ’ ವಾಹಿನಿ ಮೇಲೆ ಬಿಸಿಸಿಸಿ( Broadcasting Content Complaints Council-ಪ್ರಸಾರ ವಿಷಯ ದೂರುಗಳ ಮಂಡಳಿ) ದೂರು ಸಲ್ಲಿಸಿದ್ದರು. ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರಸಾರವಾಗಿದ್ದ ಈ ದೃಶ್ಯದ ವಿರುದ್ಧ ಈ ದೂರು ದಾಖಲಾಗಿತ್ತು. ನಿಧಿ ಪಾತ್ರಕ್ಕೆ ವಕೀಲರ ವೃತ್ತಿಪರ ಉಡುಪು ಹಾಕಿಸಿದ್ದು ವಾಸ್ತವಕ್ಕೆ ದೂರವಾದದ್ದು. ಅಷ್ಟೇ ಅಲ್ಲದೇ ನ್ಯಾಯಾಲಯದ ಕಲಾಪಗಳನ್ನು ಚಿತ್ರಿಸಿರುವ ರೀತಿ ಸರಿಯಿಲ್ಲ ಎಂದು ದೂರಿದ್ದರು. ಅಸಲಿಗೆ ಒಂದು ಸಂಬಳ ಪಡೆಯುವ ವೃತ್ತಿಯಲ್ಲಿ ಇರುವವರು, ಕೋರ್ಟ್ನಲ್ಲಿ ಬೇರೆಯವರ ಪರ ವಕಾಲತ್ತು ವಹಿಸುವುದು ಅರ್ಥಾತ್ ವಾದ ಮಂಡಿಸುವ ಹಾಗೆ ಇಲ್ಲ. ಅದು ಇನ್ನೊಂದು ಉದ್ಯೋಗದ ರೂಪ ಎನ್ನಿಸಿಕೊಳ್ಳುತ್ತದೆ. ಇದು ಕಾನೂನುಬಾಹಿರವಾಗಿರುವ ಕಾರಣ, ಈ ದೂರು ದಾಖಲು ಮಾಡಲಾಗಿತ್ತು.
BCCC ಕಡೆಯಿಂದ ಉತ್ತರ
ಈ ದೂರು ದಾಖಲು ಮಾಡಿ ಕೆಲವು ತಿಂಗಳು ಕಳೆದಿದ್ದು, ಇದೀಗ ಸದ್ಯ ಈ ದೂರಿಗೆ BCCC ಕಡೆಯಿಂದ ಉತ್ತರವೂ ಬಂದಿದೆ. ಅದರಲ್ಲಿ ಜೀ ವಾಹಿನಿಗೆ ವಾಸ್ತವಕ್ಕೆ ಹತ್ತಿರವಿರುವ ದೃಶ್ಯವನ್ನ ಚಿತ್ರೀಕರಿಸಿ ಎಂದು ಸೂಚಿಸಲಾಗಿದೆ. ಧಾರಾವಾಹಿಯಲ್ಲಿ ತೋರಿಸಲಾದ ಇಂತಹ ಚಿತ್ರಣವನ್ನು ‘ಬೌದ್ಧಿಕವಾಗಿ ಸಮಂಜಸವಾದ’ (cognitively reasonable ) ಎಂದು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಸ್ವೀಕಾರಾರ್ಹ ಮಾನದಂಡಗಳನ್ನು ಪಾಲಿಸುವಂತೆ ಹಾಗೂ ಸಾಧ್ಯವಾದಷ್ಟು ವಾಸ್ತವಿಕತೆಗೆ ಹತ್ತಿರವಾದ ಚಿತ್ರಣ ನೀಡುವಂತೆ ವಾಹಿನಿಗೆ ಸೂಚಿಸಿದೆ. ಮುಂದಿನ ಕಥಾವಸ್ತುಗಳು ಸ್ವೀಕಾರಾರ್ಹ ಮತ್ತು ಸಮಂಜಸ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಎಂಬ ಮುಚ್ಚಳಿಕೆಯನ್ನು ಸಲ್ಲಿಸುವಂತೆ ವಾಹಿನಿಗೆ ಸೂಚಿಸಿದೆ.
ವಾಹಿನಿ ಕಡೆಯಿಂದ ಉತ್ತರ
ಈ ನೋಟಿಸ್ಗೆ ಜೀ ಸಂಸ್ಥೆ ಕೂಡ ಉತ್ತರ ನೀಡಿದೆ. ಮಾರ್ಚ್ 30ರಂದು ನೀಡಿದ ಉತ್ತರದಲ್ಲಿ ಧಾರಾವಾಹಿಯು ಕಾಲ್ಪನಿಕವಾದದ್ದು. ವಾಸ್ತವಕ್ಕೆ ದೂರವಾದದ್ದು. ಸೃಜನಾತ್ಮಕ ಸ್ವಾತಂತ್ರ್ಯದ ಅಡಿಯಲ್ಲಿ ಈ ದೃಶ್ಯ ಚಿತ್ರೀಕರಿಸಲಾಗಿದೆ ಎಂದು ಹೇಳಿದೆ. BCCCಯ ಔಪಚಾರಿಕ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ. ಆದರೆ ಮಂಡಳಿಯ ಕಾರ್ಯದರ್ಶಿ ಜನರಲ್ ಅವರು 2026ರ ನವೆಂಬರ್ 5ರಂದು ಇಮೇಲ್ ಮೂಲಕ ನಿರ್ಧಾರದ ಕುರಿತು ಲಿಖಿತ ಸಂವಹನ ನೀಡಿದ್ದಾರೆ ಎಂದು ವಕೀಲ ಎಸ್. ಸುಮಂತ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.














