ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ರಾವಣನಾಗಿ ಅದ್ಭುತವಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ಅಪ್ಪ ಹೀರೋ ಬದಲು ವಿಲನ್ ರಾವಣನ ಪಾತ್ರ ಮಾಡಿದ್ದೇಕೆ ಎಂದು ಪುತ್ರ ಯಥರ್ವ್ ಪ್ರಶ್ನಿಸಿದ್ದು ಯಶ್ ಅವರನ್ನು ಪೇಚಿಗೆ ಸಿಲುಕಿಸಿದೆ.

ಬೆಂಗಳೂರು: ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಈಗ ಬ್ಲಾಕ್​ಬಸ್ಟರ್​ ಸಿನಿಮಾ ಆಗಿ ಹೊರಹೊಮ್ಮಿದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಸಿನಿಮಾ ನೋಡಿ ಹಲವು ಮಂದಿ ಮೆಚ್ಚಿಕೊಂಡಿದ್ದಾರೆ. ಒಂದರ್ಥದಲ್ಲಿ ಇದರಲ್ಲಿ ರಾವಣನೇ ಹೀರೋ. ಆ ಪಾತ್ರಕ್ಕೆ ನಟ ಯಶ್​ ನ್ಯಾಯ ಒದಗಿಸಿದ್ದಾರೆ. ರಾವಣದ ಜೀವನದ ಪ್ರತಿಯೊಂದು ಅಂಶವನ್ನೂ ಈ ಸಿನಿಮಾದಲ್ಲಿ ತೋರಿಸಲಾಗಿದ್ದು, ನಟ ಯಶ್​ ಅವರ ಅಭಿನಯ, ಸಿನಿಮಾದಲ್ಲಿನ ಗ್ರಾಫಿಕ್ಸ್​ ಹಾಗೂ ಇತರ ಅಂಶಗಳನ್ನು ನೋಡಿದ ಯಶ್​ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ರಾವಣನೇ ಹೀರೋ

ಅಷ್ಟಕ್ಕೂ ಮೂಲ ರಾಮಾಯಣದಲ್ಲಿ ನೋಡಿದರೆ, ಅಲ್ಲಿ ರಾವಣ ಪಾತ್ರವೇ ಮೊದಲು ಬರುವುದು. ಆ ಬಳಿಕ ಹುಟ್ಟಿರುವವ ರಾಮ. ಈ ಹಿನ್ನೆಲೆಯಲ್ಲಿ ನೋಡುವುದಾದರೂ ರಾವಣನೇ ಇಲ್ಲಿ ನಾಯಕ. ಆದರೆ ಆತ ವಿಲನ್​ ಆಗಿರುವ ಕಾರಣದಿಂದ ರಾಮ ಹೀರೋ, ರಾವಣ ವಿಲನ್​ ಅಷ್ಟೇ. ಅದೇನೇ ಇದ್ದರೂ ರಾವಣನನ್ನು ಕೆಟ್ಟದ್ದಕ್ಕೆ ಹೋಲಿಸುವುದು ಇದೆ. ಅಷ್ಟಕ್ಕೂ ಯಶ್​ ಅವರು ಇದುವರೆಗೆ ಮಾಡಿರುವ ಸಿನಿಮಾ ಎಲ್ಲರದಲ್ಲಿಯೂ ಅವರು ಹೀರೋ ಅರ್ಥಾತ್​ ನಾಯಕ. ಖಳನಾಗಿ ಮಾಡಿದ್ದು ಇಲ್ಲ. ಇದು ಅವರ ಪುಟ್ಟ ಮಗ ಯಥರ್ವ್​ಗೂ ಗೊತ್ತಿದೆ. ಯಥರ್ವ್​ ಈಗ 7 ವರ್ಷದ ಬಾಲಕ. ಆತನಿಗೆ ಚೆನ್ನಾಗಿ ರಾಮ, ರಾವಣ, ಸೀತೆ ಎಲ್ಲರೂ ಗೊತ್ತು.

ಪೇಚಿನಲ್ಲಿ ಯಶ್​

ಇದೇ ಈಗ ಯಶ್​ ಅವರನ್ನು ಪೇಚಿಗೆ ಸಿಲುಕಿಸಿದೆಯಂತೆ. ತೆಲುಗು ಚಾನೆಲ್​ ಒಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಯಶ್​ ಮಾತನಾಡಿದ್ದಾರೆ. ನಾನು ರಾವಣ ಆಗಿರುವುದು ಮನೆಯಲ್ಲಿ ಸಮಸ್ಯೆಯಾಗಿ ಬಿಟ್ಟಿದೆ. ನನ್ನ ಮಗ, ನೀನು ಹೀರೋ ಅಲ್ಲ, ರಾವಣನಾ ಎಂದು ಕೇಳುತ್ತಿದ್ದಾನೆ. ನೀನ್ಯಾಕೆ ರಾವಣ ಪಾತ್ರ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾನೆ. ಅವನಿಗೆ ನಾನು ಸಿನಿಮಾದಲ್ಲಿ ಮಾತ್ರ ನಾನು ವಿಲನ್​. ನಿಜ ಜೀವನದಲ್ಲಿ ಹೀರೋನೇ ಎಂದು ಹೇಳಿ ಸಮಾಧಾನ ಮಾಡಿದ್ದೇನೆ. ಆದರೂ ಅವನಿಗೆ ಅಪ್ಪ ನಾಯಕ ರಾಮನ ಬದಲು ವಿಲನ್​ ರಾವಣ ಯಾಕಾದ ಎನ್ನುವ ಪ್ರಶ್ನೆ ಇದೆ ಎಂದಿದ್ದಾರೆ.

ಸಿನಿಮಾಗಳಲ್ಲಿ ಸದಾ ವಿಲನ್‌ಗಳಿಗೆ ಚಪ್ಪಟೆ ಮೂಗು, ಒರಟು ಮುಖ ತೋರಿಸುವ ಸಂಪ್ರದಾಯವಿದೆ. ಆದರೆ ಯಶ್ ಅತ್ಯಂತ ಸುಂದರ ಮತ್ತು ಅದ್ಭುತ ನಟ. ರಾವಣ ಕೇವಲ ಒಬ್ಬ ಸಾಮಾನ್ಯ ರಾಕ್ಷಸನಲ್ಲ, ಆತ ಮಹಾನ್ ವಿದ್ವಾಂಸ, ಶಿವಭಕ್ತ, ಸುಂದರ ಲಂಕೆಯನ್ನು ಕಟ್ಟಿದ ಸಮರ್ಥ ರಾಜ. ಆತನ ಪಾತ್ರದಲ್ಲಿ ಹಲವು ಭಾವಗಳಿರುವುದರಿಂದಲೇ ಯಶ್ ಅವರಂತಹ ಸೂಪರ್‌ಸ್ಟಾರ್ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಅಂಶವನ್ನು ಸದ್ಗುರು ಜಗ್ಗಿ ವಾಸುದೇವ ಹೇಳಿದ್ದು ಇಲ್ಲಿ ಉಲ್ಲೇಖಾರ್ಹ.