ಕೆಜಿಎಫ್, ಕಾಂತಾರ ಚಿತ್ರಗಳ ಯಶಸ್ಸಿನ ನಂತರ, ಕನ್ನಡ ಚಿತ್ರರಂಗ 2024ರಿಂದ ಕುಸಿತ ಕಂಡಿದೆ. ದೊಡ್ಡ ಬಜೆಟ್ ಚಿತ್ರ ನಿರೀಕ್ಷಿತ ಯಶಸ್ಸು ಕಾಣದಿರುವುದು ಮತ್ತು ಒಟ್ಟಾರೆ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದೆ. ಕಾಂತಾರ 2 ಚಿತ್ರರಂಗದ ಭರವಸೆಯ ಕಿರಣವಾಗಿದೆ. ಆದ್ರೆ ಒಂದೇ ಸಿನಿಮಾ ಇಂಡಸ್ಟ್ರಿ ಕಾಪಾಡುತ್ತಾ?
ಕನ್ನಡ ಚಿತ್ರರಂಗ ಎಂದರೆ ದಕ್ಷಿಣ ಭಾರತದಲ್ಲಿ ಅತ್ಯಂತ ವಿಭಿನ್ನ ಕಥಾ ಶೈಲಿ ಹಾಗೂ ಹೊಸತನ ಹೊಂದಿದ ಚಿತ್ರರಂಗ ಎನ್ನುವ ಖ್ಯಾತಿ ಹೊಂದಿತ್ತು. ಆದರೆ, ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್ ಯುಗಾಂತ್ಯದ ನಂತರ ಕನ್ನಡ ಚಿತ್ರರಂಗ ಮಕಾಡೆ ಮಲಗುತ್ತಿದೆ. ದೊಡ್ಮನೆ ಮಕ್ಕಳು, ಸುದೀಪ್, ದರ್ಶನ್, ಯಶ್, ಶೆಟ್ಟಿ ತ್ರಿವಳಿಗಳು, ಗಣೇಶ್, ದುನಿಯಾ ವಿಜಯ್, ಸರ್ಜಾ ಸಹೋದರರು ಈಗಿನ ಕಾಲಘಟ್ಟದಲ್ಲಿ ಹಿಟ್ ಚಿತ್ರ ಕೊಟ್ಟರೂ ಅದು ಇತಿಹಾಸ ಆದಂತಾಗಿದೆ.
ತೆಲುಗು ಸಿನಿಮಾಗೆ ಬಾಹುಬಲಿ ಹೇಗೋ, ಕನ್ನಡ ಸಿನಿಮಾಗೆ ಕೆಜಿಎಫ್ (KGF) ಹಾಗೆ. ಬಾಹುಬಲಿ ತೆಲುಗು ಸಿನಿಮಾವನ್ನು ಭಾರತದಾದ್ಯಂತ ಹೊಸ ಪ್ರೇಕ್ಷಕರಿಗೆ ಪರಿಚಯಿಸಿತು.
ಕನ್ನಡ ಚಿತ್ರರಂಗಕ್ಕೆ KGF ಅದೇ ರೀತಿ ಪ್ರಭಾವ ಬೀರಿತು. 2018 ರಲ್ಲಿ ಬಿಡುಗಡೆಯಾದ KGF 240-250 ಕೋಟಿ ಗಳಿಸಿದರೆ, 2022 ರಲ್ಲಿ ಬಿಡುಗಡೆಯಾದ KGF 2 ಕನ್ನಡ ಸಿನಿಮಾದ ಇತಿಹಾಸದಲ್ಲೇ ಅತಿ ದೊಡ್ಡ ಹಿಟ್ ಆಗಿ 1,200 ಕೋಟಿಗೂ ಹೆಚ್ಚು ಗಳಿಸಿತು. ಅದೇ ವರ್ಷ ಬಿಡುಗಡೆಯಾದ ಕಾಂತಾರ ಕೂಡ ಕನ್ನಡ ಚಿತ್ರರಂಗದ ಬೆಳವಣಿಗೆಗೆ ವೇಗ ನೀಡಿತು. ಕಡಿಮೆ ಬಜೆಟ್‌ನ ಈ ಚಿತ್ರ 400 ಕೋಟಿಗೂ ಹೆಚ್ಚು ಗಳಿಸಿತು. ಆದರೆ ಈ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಸ್ಯಾಂಡಲ್‌ವುಡ್ ವಿಫಲವಾಗಿದೆ.
KGF ಮತ್ತು ಕಾಂತಾರದಷ್ಟು ದೊಡ್ಡ ಯಶಸ್ಸು ಕಾಣದಿದ್ದರೂ, 2023 ರಲ್ಲಿ ಬಿಡುಗಡೆಯಾದ ದರ್ಶನ್ ಅಭಿನಯದ ಕಾಟೇರ ಸಿನಿಮಾ ಉತ್ತಮ ಯಶಸ್ಸು ಕಂಡಿತು. ಆದರೆ 2024ರಲ್ಲಿ ಈ ಯಶಸ್ಸು ಕಡಿಮೆಯಾಯಿತು. ಕಳೆದ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್. ಆದರೆ ಈ ಚಿತ್ರ ನಿರ್ಮಾಪಕರಿಗೆ ನಷ್ಟ ತಂದಿತು. ಈ ವರ್ಷದ ಲೆಕ್ಕಪತ್ರ ನೋಡಿದರೆ ಕನ್ನಡ ಚಿತ್ರರಂಗದ ಪರಿಸ್ಥಿತಿ ಚಿಂತಾಜನಕವಾಗಿದೆ.
ಈ ವರ್ಷದ ಮೊದಲಾರ್ಧದಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 10 ಕೋಟಿ ಗಳಿಸಿದ ಒಂದೇ ಒಂದು ಕನ್ನಡ ಚಿತ್ರವೂ ಇಲ್ಲ. ಈ ವರ್ಷದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಚೂ ಮಂತರ್. ನಟ ಶರಣ್ ಮತ್ತು ಅದಿತಿ ಪ್ರಭುದೇವ ನಟಿಸಿದ ಈ ಸಿನಿಮಾ ಗಳಿಸಿದ್ದು ಕೇವಲ 6.45 ಕೋಟಿ ರೂ. ಆದರೂ ಅದೇ ಕನ್ನಡದ ಸಿನಿಮಾಗಳ ಪೈಕಿ ಅತಿ ಹೆಚ್ಚಿನ ಆದಾಯ ಗಳಿಸಿದ ಸಿನಿಮಾ ಎನ್ನಲಾಗುತ್ತಿದೆ.
Sacnilk ಪ್ರಕಾರ 2025ರ ಮೊದಲಾರ್ಧದಲ್ಲಿ ಚಿತ್ರರಂಗವಾರು ನಿವ್ವಳ ಗಳಿಕೆ:
- ಕನ್ನಡ ಚಿತ್ರರಂಗದ ಸಿನಿಮಾಗಳು - ₹47.64 ಕೋಟಿ
- ಮಲಯಾಳಂ ಸಿನಿಮಾ - ₹514 ಕೋಟಿ,
- ತಮಿಳು ಚಿತ್ರರಂಗ - ₹833 ಕೋಟಿ,
- ತೆಲುಗು ಚಿತ್ರಂಗ - ₹918 ಕೋಟಿ
- ಬಾಲಿವುಡ್ ಚಿತ್ರರಂಗದ ಸಿನಿಮಾಗಳು- ₹2,066 ಕೋಟಿ ಗಳಿಸಿವೆ.
- ಇದು ಕನ್ನಡ ಚಿತ್ರರಂಗದ ಕುಸಿತವನ್ನು ತೋರಿಸುತ್ತದೆ.
ಕರ್ನಾಟಕದ ಚಿತ್ರಮಂದಿರಗಳನ್ನು ಇತರ ಭಾಷೆಗಳ ಚಿತ್ರಗಳು ರಕ್ಷಿಸುತ್ತಿವೆ. KGF ಮತ್ತು ಕಾಂತಾರದ ಯಶಸ್ಸು ಸ್ಯಾಂಡಲ್‌ವುಡ್‌ಗೆ ವರದಾನ ಮತ್ತು ಶಾಪ ಎರಡೂ ಆಗಿದೆ. ದೊಡ್ಡ ತಾರೆಯರು ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ದೊಡ್ಡ ಬಜೆಟ್‌ನ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದ್ದರಿಂದ, ವರ್ಷಕ್ಕೆ ಬಿಡುಗಡೆಯಾಗುವ ತಾರಾ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನು ರಾಜ್ಯದಲ್ಲಿ ಸಣ್ಣಪುಟ್ಟ ನಟರು ಅಭಿನಯಿಸಿದ ಚಿತ್ರಗಳು ಬಿಡುಗಡೆ ಆಗುತ್ತಿದ್ದರೂ ಆ ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ. ಕಾಂತಾರ-2 ಕನ್ನಡ ಚಿತ್ರರಂಗದ ಭರವಸೆಯ ಕಿರಣವಾಗಿದೆ. ಇದು IMDb ಯ 2025 ರ ಅತ್ಯಂತ ನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಒಂದು ದೊಡ್ಡ ಯಶಸ್ಸಿನಿಂದ ಇಡೀ ಚಿತ್ರರಂಗವನ್ನು ಉಳಿಸಲು ಸಾಧ್ಯವಿಲ್ಲ.
