Anupam Kher praises Yash: ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಯಶ್ ಭೇಟಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಯಶ್ ಭೇಟಿಯಾಗಿದ್ದು, ಈ ವಿಶೇಷ ಭೇಟಿಯ ಕ್ಷಣಗಳು ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಯಶ್ ಜೊತೆಗಿನ ಭೇಟಿಯ ಬಳಿಕ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ನಟನ ಪ್ರತಿಭೆ ಮಾತ್ರವಲ್ಲದೆ ಅವರ ಸರಳತೆ, ವಿನಮ್ರತೆ ಹಾಗೂ ಆಲೋಚನಾ ಕ್ರಮವನ್ನೂ ಮನಸಾರೆ ಹೊಗಳಿದ್ದಾರೆ.
‘ರಾಕಿ’ ಪಾತ್ರಕ್ಕೆ ಯಶ್ ಜೀವ ತುಂಬಿದ್ದರು!
ಯಶ್ ಅವರ ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಚಿತ್ರಗಳಲ್ಲಿನ ಅಭಿನಯವನ್ನು ಅನುಪಮ್ ಖೇರ್ ವಿಶೇಷವಾಗಿ ಕೊಂಡಾಡಿದ್ದಾರೆ. ರಾಕಿ ಪಾತ್ರವನ್ನು ಯಶ್ ಕೇವಲ ನಿರ್ವಹಿಸಲಿಲ್ಲ, ಬದಲಿಗೆ ಅದಕ್ಕೆ ತಮ್ಮದೇ ಆದ ವ್ಯಕ್ತಿತ್ವ ಮತ್ತು ರಾಜಗಾಂಭೀರ್ಯವನ್ನು ನೀಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಪರದೆ ಮೇಲಿನ ಶಕ್ತಿಶಾಲಿ ವ್ಯಕ್ತಿತ್ವದ ಬಗ್ಗೆ ಮಾತನಾಡಿರುವ ಅನುಪಮ್, ಕ್ಯಾಮೆರಾ ಹಿಂದಿರುವ ಯಶ್ ಮತ್ತಷ್ಟು ವಿಭಿನ್ನ ವ್ಯಕ್ತಿ ಎಂಬುದನ್ನು ತಮ್ಮ ಮಾತುಗಳಲ್ಲಿ ತೆರೆದಿಟ್ಟಿದ್ದಾರೆ.
ತೆರೆಯ ಮೇಲಿನ ‘ರಾಕಿ’… ತೆರೆಯ ಹಿಂದಿನ ಸರಳ ಯಶ್!
ಅನುಪಮ್ ಖೇರ್ ಅವರ ಪ್ರಕಾರ, ತೆರೆಯ ಮೇಲೆ ಅಪಾರ ಶಕ್ತಿಯನ್ನು ಪ್ರದರ್ಶಿಸುವ ಯಶ್, ವೈಯಕ್ತಿಕವಾಗಿ ಅತ್ಯಂತ ಆತ್ಮೀಯ, ವಿನಮ್ರ ಮತ್ತು ಆಳವಾಗಿ ಯೋಚಿಸುವ ವ್ಯಕ್ತಿ. ಇಬ್ಬರೂ ಸ್ಟುಡಿಯೋದಲ್ಲಿ ಭೇಟಿಯಾಗಿ ಕೇವಲ ಸಿನಿಮಾದ ಬಗ್ಗೆ ಮಾತ್ರವಲ್ಲದೆ, ಜೀವನ, ಹೆತ್ತವರು, ಕುಟುಂಬ, ಕನಸುಗಳು ಹಾಗೂ ತಮ್ಮನ್ನು ರೂಪಿಸಿದ ಜೀವನದ ಅನುಭವಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ.
ಬೇರೆ ತಲೆಮಾರು… ಒಂದೇ ಕನಸು!
ತಮ್ಮಗಿಂತ ಕಿರಿಯ ತಲೆಮಾರಿನ ಪ್ರತಿಭಾವಂತರನ್ನು ಭೇಟಿಯಾದಾಗಲೆಲ್ಲ ಹೊಸ ಚೈತನ್ಯ ದೊರೆಯುತ್ತದೆ ಎಂದು ಅನುಪಮ್ ಖೇರ್ ಹೇಳಿದ್ದಾರೆ. ಅಸಾಧಾರಣವಾದುದನ್ನು ಸೃಷ್ಟಿಸಬೇಕು ಎಂಬ ಯಶ್ ಅವರಲ್ಲಿರುವ ಹಂಬಲ ಮತ್ತು ಕಿಚ್ಚು ತಮ್ಮನ್ನೂ ಮತ್ತಷ್ಟು ಸ್ಫೂರ್ತಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ತಲೆಮಾರಿಗೆ ಸೇರಿದವರಾಗಿದ್ದರೂ, “ನಮ್ಮ ಕನಸುಗಳ ಭಾಷೆ ಮಾತ್ರ ಒಂದೇ” ಎಂಬ ಅನುಪಮ್ ಖೇರ್ ಅವರ ಮಾತು ಈ ಭೇಟಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಟಾಕ್ಸಿಕ್’ಗೆ ಅನುಪಮ್ ಖೇರ್ ಶುಭ ಹಾರೈಕೆ
ಭೇಟಿಯ ಕೊನೆಯಲ್ಲಿ ತಮ್ಮ ಆತ್ಮೀಯ ಸ್ನೇಹಿತ ಯಶ್ ಅವರ ಮುಂಬರುವ ‘ಟಾಕ್ಸಿಕ್’ ಸಿನಿಮಾ ಹೊಸ ಮ್ಯಾಜಿಕ್ ಸೃಷ್ಟಿಸಲಿ, ಅಪಾರ ಪ್ರೀತಿ ಮತ್ತು ಅಭೂತಪೂರ್ವ ಯಶಸ್ಸು ಗಳಿಸಲಿ ಎಂದು ಅನುಪಮ್ ಖೇರ್ ಹಾರೈಸಿದ್ದಾರೆ. ಯಶ್ ಅವರ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಬಾಲಿವುಡ್‌ನ ಹಿರಿಯ ನಟನಿಂದಲೇ ಇಂತಹ ಮೆಚ್ಚುಗೆ ವ್ಯಕ್ತವಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇದೀಗ ಅನುಪಮ್ ಖೇರ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯಶ್ ಮತ್ತು ‘ಟಾಕ್ಸಿಕ್’ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


