ಬಿಗ್ ಬಾಸ್ 11ನೇ ಸೀಸನ್ ಮೂಲಕ ಪರಿಚಯವಾದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಅವರ ಮದುವೆ ನಿಶ್ಚಯವಾಗಿದೆ. ಇವರಿಬ್ಬರ ಪ್ರೇಮ ಪಯಣಕ್ಕೆ ಬಿಗ್ ಬಾಸ್ ವೇದಿಕೆಯೇ ಕಾರಣವಾಗಿದ್ದು, ಕಿಚ್ಚ ಸುದೀಪ್ ಅವರಿಗೂ ವಿಶೇಷ ಆಹ್ವಾನ ನೀಡಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥದ ಸಂಭ್ರಮ ಮತ್ತು ಅವರ ಪಯಣದ ಬಗ್ಗೆ ಇಲ್ಲಿ ತಿಳಿಯಿರಿ.

Bigg Boss ಖ್ಯಾತಿಯ ಶಿಶಿರ್​ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಅವರ ಮದುವೆ ಫಿಕ್ಸ್​ ಆಗಿದೆ. ನಾಳೆ ಅರ್ಥಾತ್​ 22ರಂದು ಇವರ ನಿಶ್ಚಿತಾರ್ಥ ನಡೆಯುತ್ತಿದ್ದು, ಇದಾಗಲೇ ಜೋಡಿ ಹಲವಾರು ಮಂದಿಗೆ ಆಮಂತ್ರಣ ಪತ್ರಿಕೆ ನೀಡಿದೆ. ಅದರಲ್ಲಿಯೂ ಸೆಲೆಬ್ರಿಟಿಗಳಿಗೆ ವಿಶೇಷ ಆಮಂತ್ರಣ ನೀಡಿರುವ ಜೋಡಿ ಅದರ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಂಡಿದೆ. ಅದರಲ್ಲಿ ವಿಶೇಷವಾಗಿ ಆಮಂತ್ರಣಕ್ಕೆ ಕಾರಣರಾದವರು ಕಿಚ್ಚ ಸುದೀಪ್​. ಏಕೆಂದರೆ, ಸುದೀಪ್​ ಅವರು ನಡೆಸಿಕೊಡುವ Bigg Bossನಿಂದಲೇ ಇವರ ಸುಂದರ ಲವ್​ಸ್ಟೋರಿ ಶುರುವಾದದ್ದು. ಸುದೀಪ್​ ಅವರು ನೇರವಾಗಿ ಕಾರಣ ಅಲ್ಲದೇ ಇದ್ದರೂ, ಬಿಗ್​ಬಾಸ್​​ನಿಂದಲೇ ಇವರ ಪ್ರೇಮದ ಪ್ರಯಣ ಶುರು ಆಗಿರುವ ಕಾರಣದಿಂದಾಗಿ, ಆ ಕೀರ್ತಿ ಕೂಡ ಸಲ್ಲಬೇಕಾದದ್ದು ಸುದೀಪ್​ ಅವರಿಗೇ.

ಜೋಡಿ ಹೇಳಿದ್ದೇನು?

ನಮ್ಮ ಜೀವನದ ಒಂದು ಸುಂದರ ತಿರುವಿಗೆ ಕಾರಣವಾದ Bigg Boss ಅದೇ ವೇದಿಕೆಯಲ್ಲಿ ನಮ್ಮಿಬ್ಬರ ಪಯಣ ಶುರುವಾಗಲು ಕಾರಣರಾದವರು Sudeep Sir! ಇಂದು ನಮ್ಮ ಜೀವನದ ಅತಿ ವಿಶೇಷ ಕ್ಷಣವಾದ ನಿಶ್ಚಿತಾರ್ಥದ ಆಮಂತ್ರಣವನ್ನು ನಿಮಗೆ ನೀಡಿದ್ದು ನಿಜಕ್ಕೂ ತುಂಬಾ ಖುಷಿ ಮತ್ತು ಹೆಮ್ಮೆಯ ವಿಚಾರ. ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ನಮಗೆ ಸದಾ ವಿಶೇಷ. ನಮ್ಮ ಕಥೆಯಲ್ಲಿ ನಿಮಗೂ ಒಂದು ಸುಂದರ ಸ್ಥಾನವಿದೆ ಎಂದು ಶೀರ್ಷಿಕೆ ಕೊಟ್ಟಿರುವ ಶಿಶಿರ್​ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಆಮಂತ್ರಣ ಪತ್ರಿಕೆಯ ಫೋಟೋ ಶೇರ್​ ಮಾಡಿಕೊಂಡಿದೆ.

Bigg Bossನ 11ನೇ ಸೀಸನ್​ನಲ್ಲಿ ಈ ಜೋಡಿ ಭಾಗವಹಿಸಿತ್ತು. ಅಲ್ಲಿಯೇ ಇವರ ಪ್ರೇಮ ಪಯಣ ಶುರುವಾಗಿತ್ತು. ಅಲ್ಲಿಂದ ಹೊರಕ್ಕೆ ಬಂದ ಮೇಲೂ ಮುಂದುವರೆದಿತ್ತು. ಬಳಿಕ ಸೀರಿಯಲ್, ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಿದ್ದ ಐಶ್ವರ್ಯ, ಶಿಶಿರ್ ಜೊತೆಗಿನ ಗೆಳತನದಿಂದ ಸುದ್ದಿಯಾಗಿದ್ದರು. ಇಬ್ಬರೂ ಬಿಗ್ ಬಾಸ್ ಬಳಿಕ ಎಲ್ಲಾ ಕಡೆಗಳಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾ, ಟ್ರಾವೆಲ್ ಮಾಡುತ್ತಲೇ ಇದ್ದಾರೆ. ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಾಗಿ ಏನೋ ಇದೆ ಎನ್ನುವ ಗುಸು ಗುಸು ಕೇಳಿ ಬಂದಿದ್ದರೂ ಜೋಡಿ ಮಾತ್ರ ಏನಿಲ್ಲ, ಏನಿಲ್ಲ ಎನ್ನುತ್ತಿತ್ತು. ಈಗ ಮದುವೆಯ ವಿಷಯವನ್ನು ರಿವೀಲ್​ ಮಾಡಿದ್ದಾರೆ.

ಜೋಡಿಯ ಕುರಿತು

ಇನ್ನು ಐಶ್ವರ್ಯ ಅವರ ಕುರಿತು ಹೇಳುವುದಾದರೆ, ಐಶ್ವರ್ಯ ತಂದೆಯ ಸಾವಿನ ಬಳಿಕ ಕಷ್ಟದಲ್ಲಿ ದಿನದೂಡಿದ್ದರು ಐಶ್ವರ್ಯ. ಅವರ ಬ್ಯುಸಿನೆಸ್ ನಲ್ಲೂ ಹಲವರು ಮೋಸ ಮಾಡಿದ್ದರಂತೆ. ಆದರೆ ಎಲ್ಲಾ ಕಷ್ಟವನ್ನು ಮೆಟ್ಟಿ ನಿಂತು ಐಶ್ವರ್ಯ ನಟನೆಯಲ್ಲಿ ತೊಡಗಿದರು, ಬಳಿಕ ಅಮ್ಮನನ್ನು ಸಹ ಕಳೆದುಕೊಂಡರು. ಆದರೆ ಕಲೆ, ನಟನಾ ಲೋಕ ಕೈ ಬಿಟ್ಟಿಲ್ಲ ಎನ್ನುತ್ತಾರೆ ಐಶ್ವರ್ಯ. ಇನ್ನು ಶಿಶಿರ್​ ಅವರು, ಕಿರುತೆರೆ ಮತ್ತು ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟ ಹಾಗೂ ಭರತನಾಟ್ಯ ಕಲಾವಿದ. 2012ರಲ್ಲಿ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 'ಕುಲವಧು' ಧಾರಾವಾಹಿಯ ವಚನ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. 'ಪುಟ್ಟಗೌರಿ ಮದುವೆ', 'ಭಾರತಿ', 'ಸೇವಂತಿ' ಸೇರಿದಂತೆ ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. 2018ರಲ್ಲಿ 'ಮಿ. ಎಲ್‌ಎಲ್‌ಬಿ' (Mr LLB) ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು. 'ಬಿಲ್‌ಗೇಟ್ಸ್' (BillGates) ಮತ್ತು 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.