ಹಿರಿಯ ನಟ ಜೈಜಗದೀಶ್ ಅವರು ಪತ್ನಿ ವಿಜಯಲಕ್ಷ್ಮಿ ಸಿಂಗ್ ಜೊತೆ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ವೀಲ್ ಚೇರ್‌ನಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ವಯೋಸಹಜ ಸುಸ್ತಿನಿಂದಾಗಿ ಅವರು ವೀಲ್ ಚೇರ್ ಬಳಸಿದ್ದಾರೆ.

ನಂಜನಗೂಡು: ಹಿರಿಯ ಸ್ಯಾಂಡಲ್​ವುಡ್​ ನಟ ಜೈಜಗದೀಶ್​ ಅವರು ಕನ್ನಡ ಚಿತ್ರರಂಗದಲ್ಲ ಛಾಪು ಮೂಡಿಸಿದವರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದಾರೆ. 3೦೦ಕ್ಕೂ ಚಿತ್ರಗಳನ್ನು ಮಾಡಿದ್ದಾರೆ. ಜೈಜಗದೀಶ್ - ವಿಜಯಲಕ್ಷ್ಮೀ ಸಿಂಗ್ ತಾರಾ ಜೋಡಿ ಈಚೆಗಷ್ಟೇ ಅರ್ಥಾತ್​ ಜೂನ್​ ತಿಂಗಳಿನಲ್ಲಿ 36ನೇ ಮದುವೆ ವಾರ್ಷಿಕೋತ್ಸವ ಅಚರಿಸಿಕೊಂಡಿದ್ದರು. ಜೂನ್ 4, 1990 ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಂಪತಿ, ಅಂದು ಗಡಿಬಿಡಿಯಲ್ಲಿ ಮದುವೆಯಾಗಿತ್ತು ಎಂದು ತಮಾಷೆ ಕೂಡ ಮಾಡಿದ್ದರು.

72 ವರ್ಷ ವಯಸ್ಸು

1954ರಲ್ಲಿ ಹುಟ್ಟಿರುವ ಜೈಜಗದೀಶ್​ ಅವರಿಗೆ ಈಗ 72 ವರ್ಷ ವಯಸ್ಸು. ಸಹಜವಾಗಿ ವಯೋ ಸಮಸ್ಯೆ ಬಂದಿರುತ್ತದೆ. ಆದರೆ, ಅವರ ವೈರಲ್ ವಿಡಿಯೋ ಒಂದು ಇದೀಗ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಅವರು ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರು ವ್ಹೀಲ್​ಚೇರ್​ನಲ್ಲಿ ಕುಳಿತುಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಏಕೆಂದರೆ ಜೈಜಗದೀಶ್​ ಎಂದರೆ, ಆ ಯಂಗ್​ ಆ್ಯಂಡ್​ ಎನರ್ಜೆಟಿಕ್​ ಹೀರೋ ಕಣ್ಮುಂದೆ ಬರುತ್ತಾರೆ. ಇಂಥ ನಟನಿಗೆ ಅಭಿಮಾನಿಗಳು ಅಸಂಖ್ಯ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಅಭಿಮಾನಿಗಳು ನೋಡಿದಾಗ ಶಾಕ್​ ಆಗುವುದು ಸತ್ಯ.

ಅಭಿಮಾನಿಗಳು ಗಾಬರಿ

ಹಲವರು ನಟನಿಗೆ ಏನಾಯ್ತು ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದು ವಯೋಸಹಜಸಮಸ್ಯೆ ಅಷ್ಟೇ. ಸುಮ್ಮನೇ ಗಾಬರಿಯಾಗಬೇಡಿ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತಿದ್ದಾರೆ. ಹಲವರು ಜೈಜಗದೀಶ್​ ಅವರು ಹಲವು ಸಿನಿಮಾಗಳನ್ನು ಹೆಸರಿಗೆ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ravi______07 ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

ಅಷ್ಟಕ್ಕೂ ಜೈಜಗದೀಶ್ - ವಿಜಯಲಕ್ಷ್ಮೀ ಸಿಂಗ್ ದಂಪತಿ ನಂಜನಗೂಡು ಶ್ರೀ ಅವರ ದರ್ಶನಕ್ಕೆ ಮಕ್ಕಳ ಸಹಿತ ಆಗಮಿಸಿದ್ದ ವೇಳೆ ಈ ವಿಡಿಯೋ ತೆಗೆಯಲಾಗಿದೆ. ಮೊದಲಿಗೆ ನಡೆದುಕೊಂಡೇ ಬಂದ ನಟ, ಕೊನೆಗೆ ಸುಸ್ತಾಗಿದ್ದರಿಂದ ವ್ಹೀಲ್​ಚೇರ್​ ಮೇಲೆ ಕುಳಿತುಕೊಂಡರು. ಆದರೂ ತಮ್ಮ ನೆಚ್ಚಿನ ನಟನ ಈ ಸ್ಥಿತಿ ನೋಡಿ ಹಲವರು ಭಾವುಕರಾಗಿದ್ದಾರೆ. ಅಂದಹಾಗೆ ದಂಪತಿಗೆ ವೈಭವಿ, ವೈಸಿರಿ, ವೈನಿಧಿ ಎನ್ನುವ ಮಕ್ಕಳಿದ್ದು, ಅವರೂ ಈ ಸಂದರ್ಭದಲ್ಲಿ ದರ್ಶನಕ್ಕೆ ಬಂದಿದ್ದರು.