1987-88ರಲ್ಲಿ ಮಲ್ಲಿಕಾರ್ಜುನ್ ಮೇಟಿ ಎಂಬ ಅಭಿಮಾನಿ ಬರೆದ ಪತ್ರಕ್ಕೆ ನಟ ವಿಷ್ಣುವರ್ಧನ್ ಅವರು ಪ್ರೀತಿಯಿಂದ ಉತ್ತರಿಸಿ ತಮ್ಮ ಭಾವಚಿತ್ರವನ್ನು ಕಳುಹಿಸಿದ್ದರು. 35 ವರ್ಷಗಳ ನಂತರ ಆ ಅಪರೂಪದ ಪತ್ರ ಮತ್ತು ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು: ಗಾಂಧಿನಗರದ ಸುರಸುಂದರಾಂಗ ಚೆಲುವ ಅಂದ್ರೆ ಅದು ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿಮಾನಿಗೆ ಬರೆದ ಪತ್ರ ಮತ್ತು ಕೋರಿಕೆಯನ್ನು ಈಡೇರಿಸುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಜೀವಂತವಾಗಿದ್ದು, ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಚಂದನವನದ ಸ್ಟಾರ್ ಆಗಿದ್ದ, ವಿಷ್ಣುವರ್ಧನ್ ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿಯೂ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಈ ಒಂದು ಕಾರಣದಿಂದಲೇ ಇಂದಿಗೂ ನಿಮಗೆ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳು ರಾಜ್ಯದಲ್ಲಿದ್ದು, ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಕೊಂಡಿವೆ.
1987-88ರಲ್ಲಿ ಬರೆದ ವಿಷ್ಣು ಪತ್ರ
1987-88ರಲ್ಲಿ ಮಲ್ಲಿಕಾರ್ಜುನ್ ಮೇಟಿ ಎಂಬವರು ತಮ್ಮ ನೆಚ್ಚಿನ ನಟ ಡಾ.ವಿಷ್ಣುವರ್ಧನ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಹಾಗೆಯೇ ಪತ್ರದ ಮುಖೇನ ಫೋಟೋ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ್ ಅವರು ಬರೆದ ಪತ್ರಕ್ಕೆ 15 ದಿನಗಳ ನಂತರ ಸುಂದವಾದ ಉತ್ತರ ಬಂದಿತ್ತು. ಸುಮಾರು 35 ವರ್ಷಗಳಾದ್ರೂ ಇಂದಿಗೂ ಆ ಪತ್ರವನ್ನು ಮೇಟಿಯವರು ಕಾಯ್ದುಕೊಂಡಿದ್ದಾರೆ. ಇದೀಗ ಆ ಪತ್ರ ಮತ್ತು ವಿಷ್ಣುವರ್ಧನ್ ಕಳುಹಿಸಿದ್ದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಬರೆದ ಪತ್ರದಲ್ಲೇನಿದೆ?
ಪ್ರೀತಿಯ ಅಭಿಮಾನಿಗೆ.
ನಿಮ್ಮ ವಿಷ್ಣುವರ್ಧನ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಕಂಡು ಬಹಳ ಸಂತೋಷವಾಯಿತು. ನೀವು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ನಿಮ್ಮ ಅಭಿಮಾನವೇ ನನಗೆ ಶ್ರೀರಕ್ಷೆ. ನಿಮ್ಮ ಅಪೇಕ್ಷೆ ಮೇರೆಗೆ ನನ್ನ ಭಾವಚಿತ್ರವನ್ನು ಕಳುಹಿಸುತ್ತಿದ್ದೇನೆ.
ಇಂತಿ,
ಎಂದೆಂದೂ ನಿಮ್ಮವ
ವಿಷ್ಣುವರ್ಧನ್
ಅಭಿಮಾನಿಗಳ ಪ್ರತಿಕ್ರಿಯೆ
ಸರ ನಾನು ಪತ್ರ ಬರೆದಿದ್ದೆ. ಉತ್ತರದ ಜೊತೆಗೆಫೋಟೋ ಕಳಿಸಿದ್ದರು. ಆದರೆ ಅದನ್ನು ಕಾಪಾಡಲು ಆಗಿಲ್ಲ ಎಂದು ಮಲ್ಹಾರಿ ಜೋಶಿ ಪ್ರತಿಕ್ರಿಯಿಸಿದ್ದಾರೆ. ವಿಷ್ಣುವರ್ಧನ್ ಅವರದ್ದು ಸ್ನೇಹಮಯಿ ವ್ಯಕ್ತಿತ್ವ. ಕನ್ನಡದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯ, ಗಾಂಭೀರ್ಯ ಮತ್ತು ಸರಳತೆ ಎಂದೆಂದಿಗೂ ಮರೆಯಲಾಗದು. ವಿಷ್ಣು ಸರ್ ಸಹಿ ನೋಡಿ ನನಗೆ ತುಂಬ ಖುಷಿ ಆಯಿತು ನಿಮಗೆ ಧನ್ಯವಾದಗಳು. ಒಳ್ಳೆಯ ಚಲನಚಿತ್ರಗಳು ಯಾರೇ ಅಭಿನಯಿಸಿದರು ಮೆಚ್ಚುವುದೆ. ಒಳ್ಳೆಯತನಕ್ಕೆ ಮತ್ಸರವೇಕೆ ಎಂಬ ಕಮೆಂಟ್ಗಳು ಬಂದಿವೆ.
ಇದನ್ನೂ ಓದಿ: 832 ಬಾರಿ ಮರು ಬಿಡುಗಡೆಯಾದ ಕನ್ನಡದ ಮಾಸ್ ಸಿನಿಮಾ; 70 ಲಕ್ಷಕ್ಕೆ 300 ಕೋಟಿ ಕಲೆಕ್ಷನ್














