ಹುಮಾ ಖುರೇಷಿ ನಟನೆಯ ‘ಬೇಬಿ ಡು ಡೈ ಡು’ ಟೀಸರ್ ಬಿಡುಗಡೆಯಾಗಿದೆ. ‘ಬೇಬಿ ಕರ್ಮಾರ್ಕರ್’ ಎಂಬ ಭಾರತದ ಮೊದಲ ದೇಸಿ ಹಿಟ್‌ವುಮನ್ ಪಾತ್ರದಲ್ಲಿ ಹುಮಾ ಕಾಣಿಸಿಕೊಂಡಿದ್ದು, ಡಾರ್ಕ್ ಮಿಸ್ಟರಿ ಮತ್ತು ಥ್ರಿಲ್ಲರ್ ಕಥೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಹುಮಾ ಖುರೇಷಿ ನಟನೆಯ 'ಬೇಬಿ ಡು ಡೈ ಡು' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಅವರು 'ಬೇಬಿ ಕರ್ಮಾರ್ಕರ್' ಎಂಬ ಭಾರತದ ಮೊದಲ ದೇಸಿ ಹಿಟ್‌ವುಮನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಿಬ್ ಸಲೀಂ ನಿರ್ಮಿಸಿ, ನಾಚಿಕೇತ್ ಸಮಂತ್ ನಿರ್ದೇಶಿಸಿರುವ ಈ ಸಿನಿಮಾ ಡಾರ್ಕ್, ಮಿಸ್ಟರಿ ಹಾಗೂ ಥ್ರಿಲ್ಲಿಂಗ್ ಕಥೆಯನ್ನು ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್ ನಟಿ ಹುಮಾ ಖುರೇಷಿ ನಟನೆಯ ಬಹುನಿರೀಕ್ಷಿತ ಸಿನಿಮಾ 'ಬೇಬಿ ಡು ಡೈ ಡು' ಟೀಸರ್ ಕೊನೆಗೂ ಹೊರಬಂದಿದೆ. ಈ ಟೀಸರ್ 'ಬೇಬಿ ಕರ್ಮಾರ್ಕರ್' ಎಂಬ ಪಾತ್ರದ ಡಾರ್ಕ್, ವಿಚಿತ್ರ ಮತ್ತು ಅನಿರೀಕ್ಷಿತ ಜಗತ್ತಿನ ಒಂದು ಸಣ್ಣ ಝಲಕ್ ನೀಡಿದೆ. ವಿಶೇಷ ಅಂದ್ರೆ, ಈ ಪಾತ್ರವನ್ನು ಭಾರತದ ಮೊದಲ ದೇಸಿ ಹಿಟ್‌ವುಮನ್ ಅಂತಾನೇ ಹೇಳಲಾಗ್ತಿದೆ.

ಹುಮಾ ಖುರೇಷಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಗೆ ಸಿಕಂದರ್ ಖೇರ್, ಚಂಕಿ ಪಾಂಡೆ, ಸೀಮಾ ಪಹ್ವಾ, ರಚಿತ್ ಸಿಂಗ್ ಮತ್ತು ಮರುಧರ್ ಶೇಖಾವತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್, ಬೇಬಿ ಕರ್ಮಾರ್ಕರ್ ಪಾತ್ರದ ಬಾಲ್ಯದ ದಿನಗಳಿಂದ ಶುರುವಾಗಿ, ಆಕೆಯ ಬದುಕಿನಲ್ಲಿ ಬರುವ ವಿಭಿನ್ನ ಪಾತ್ರಗಳನ್ನು ಒಂದೊಂದಾಗಿ ಪರಿಚಯಿಸುತ್ತಾ ಹೋಗುತ್ತದೆ.

ಬೇಬಿ ಕರ್ಮಾರ್ಕರ್ ಪ್ರಪಂಚದ ಒಂದು ನೋಟ

ಮುಂಬೈ ನಗರದ ಹಿನ್ನೆಲೆಯಲ್ಲಿ ಸಾಗುವ ಈ ಟೀಸರ್, ಕುತೂಹಲ, ಆಕ್ಷನ್ ಮತ್ತು ನಿಗೂಢತೆಯಿಂದ ತುಂಬಿದೆ. ಇದು ಬೇಬಿ ಕರ್ಮಾರ್ಕರ್ ಪ್ರಪಂಚವನ್ನು ತೆರೆದಿಡುತ್ತದೆ, ಆದರೆ ಆಕೆಯ ಹಿನ್ನೆಲೆ ಬಗ್ಗೆ ಮಾತ್ರ ಏನನ್ನೂ ಬಿಟ್ಟುಕೊಡುವುದಿಲ್ಲ. ನಗರದ ಗದ್ದಲದ ನಡುವೆ, ಕೆಂಪು ಬಣ್ಣದ ಕೊಡೆ ಹಿಡಿದ ಮಹಿಳೆಯೊಬ್ಬಳು ಯಾರ ಗಮನಕ್ಕೂ ಬಾರದೆ ಸಾಗುತ್ತಾಳೆ. ಆಕೆ ತನ್ನ ಹಿಂದೆ ಹಲವು ಪ್ರಶ್ನೆಗಳನ್ನು ಬಿಟ್ಟುಹೋಗಿ, ಸಿನಿಮಾದ ಮಿಸ್ಟರಿಯನ್ನು ಜೀವಂತವಾಗಿಡುತ್ತಾಳೆ.

ಅನಿರೀಕ್ಷಿತ ಕಥೆಯ ಬಗ್ಗೆ ಚಿತ್ರತಂಡ ಹೇಳಿದ್ದೇನು?

ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಸಾಕಿಬ್ ಸಲೀಂ, "ಈ ಟೀಸರ್ ಮೂಲಕ ನಾವು ಬೇಬಿಯ ಪ್ರಪಂಚದ ಬಾಗಿಲನ್ನು ತೆರೆದಿದ್ದೇವೆ. ಬೇಬಿ ಕರ್ಮಾರ್ಕರ್ ಪಾತ್ರದ ನಿಗೂಢತೆಯ ಆಚೆಗೆ, ಮರೆಯಲಾಗದ ಪಾತ್ರಗಳ ಒಂದು ದೊಡ್ಡ ದಂಡೇ ಇದೆ. ಪ್ರತಿಯೊಂದು ಪಾತ್ರವೂ ಕಥೆಗೆ ಹೊಸ ತಿರುವು ನೀಡುತ್ತದೆ. ಪ್ರೇಕ್ಷಕರು ಈ ಕಥೆಯ ಎಳೆಗಳನ್ನು ಜೋಡಿಸಲು ಶುರುಮಾಡಿ, ನಮ್ಮ ಈ ಅನಿರೀಕ್ಷಿತ ಜಗತ್ತಿಗೆ ಕಾಲಿಡುತ್ತಾರೆ ಎಂಬ ಖುಷಿ ನಮಗಿದೆ," ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ದೇಶಕ ನಾಚಿಕೇತ್ ಸಮಂತ್ ಕೂಡಾ, 'ಬೇಬಿ ಡು ಡೈ ಡು' ಕೇವಲ ಬೇಬಿ ಕರ್ಮಾರ್ಕರ್ ಕಥೆಯಲ್ಲ, ಇದು ಅವಳ ಸುತ್ತ ಇರುವ ಇಡೀ ಪ್ರಪಂಚದ ಕಥೆ. ಈ ಟೀಸರ್ ಆ ಜಗತ್ತನ್ನು ಮನರಂಜನೆ, ಅನಿರೀಕ್ಷಿತ ಮತ್ತು ನಿಗೂಢತೆಯಿಂದ ತುಂಬುವ ಕೆಲವು ಪಾತ್ರಗಳನ್ನು ಪರಿಚಯಿಸುತ್ತದೆ. ಪ್ರತಿಯೊಂದು ಪಾತ್ರವೂ ಕಥೆಗೆ ವಿಭಿನ್ನ ಶಕ್ತಿಯನ್ನು ತರುತ್ತದೆ. ಜುಲೈ 3 ರಂದು ಪ್ರೇಕ್ಷಕರಿಗೆ ಕಾದಿರುವ ಕಥೆಯಿದು ಕೇವಲ ಆರಂಭವಷ್ಟೇ," ಎಂದಿದ್ದಾರೆ.

ಪ್ರೊಫೆಷನಲ್ ಹಂತಕಿಯಾಗಿ ಹುಮಾ ಖುರೇಷಿ

ಹುಮಾ ಖುರೇಷಿ ಅವರನ್ನು ಪ್ರೊಫೆಷನಲ್ ಮಹಿಳಾ ಹಂತಕಿಯಾಗಿ ತೋರಿಸಿರುವ ಬಗ್ಗೆಯೂ ನಿರ್ದೇಶಕ ಸಮಂತ್ ಮಾತನಾಡಿದ್ದಾರೆ. "ಅವಳು ಕೊಲೆ ಮಾಡಿ ಜನರ ಗುಂಪಲ್ಲಿ ಮಾಯವಾಗಿಬಿಡ್ತಾಳೆ. ಅದೇ ಅವಳ ವಿಶೇಷತೆ. ಕೊಲೆ ಮಾಡುವುದು ಎಷ್ಟು ಮುಖ್ಯವೋ, ಅಲ್ಲಿಂದ ತಪ್ಪಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಈ ಪಾತ್ರಕ್ಕೆ ಬೇಕಾದ ಸಹಜತೆಯನ್ನು ಹುಮಾ ತಂದಿದ್ದಾರೆ. ಒಂದು ಅದ್ಭುತ ಪಾತ್ರವನ್ನು ಬರೆಯುವುದು ಒಂದು ಕಡೆಯಾದರೆ, ಅದನ್ನು ಜೀವಂತವಾಗಿಸಲು ಒಬ್ಬ ಗಟ್ಟಿ ನಟಿಯ ಅವಶ್ಯಕತೆ ಇರುತ್ತದೆ," ಎಂದು ಅವರು ಹೇಳಿದರು.

ಸಲೀಂ ಸಿಬ್ಲಿಂಗ್ಸ್ ಬ್ಯಾನರ್ ಅಡಿಯಲ್ಲಿ ಸಾಕಿಬ್ ಸಲೀಂ ನಿರ್ಮಿಸಿರುವ ಮತ್ತು ಪುಣೆ 04 ಫಿಲ್ಮ್ಸ್ ಸಹಯೋಗದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ನಾಚಿಕೇತ್ ಸಮಂತ್ ನಿರ್ದೇಶಿಸಿದ್ದಾರೆ. 'ಬೇಬಿ ಡು ಡೈ ಡು' ಸಿನಿಮಾವು ಮಿಸ್ಟರಿ, ಗೊಂದಲ ಮತ್ತು ಸರ್ಪ್ರೈಸ್‌ಗಳಿಂದ ತುಂಬಿದ ರೋಚಕ ಪಯಣವನ್ನು ಪ್ರೇಕ್ಷಕರಿಗೆ ನೀಡುವ ಭರವಸೆ ಮೂಡಿಸಿದೆ. ಈ ಚಿತ್ರ 2026ರ ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.