ತಮಿಳುನಾಡು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತ ಅವರ ನಡುವಿನ ವಿಚ್ಛೇದನ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಏಕಾಏಕಿ ಸಂಗೀತಾ ಅವರು ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದರ ನಡುವೆ ಇಬ್ಬರ ನಡುವಿನ ಮುನಿಸು ದೂರ ಆಗಿ ಒಂದಾಗುತ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಟಿವಿಕೆ ಪಕ್ಷದ ಮುಖ್ಯಸ್ಥ, ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ. ವರದಿಗಳ ಅನ್ವಯ, ಸಂಗೀತಾ ಅವರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರಾಗಿ, ನ್ಯಾಯಾಧೀಶರಾದ ಡಿ ಸುಜಾತಾ ಅವರಿಗೆ ಅರ್ಜಿಯನ್ನು ಮುಂದುವರಿಸಲು ಬಯಸುವುದಿಲ್ಲ ಮತ್ತು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಬಯಸುವುದಾಗಿ ತಿಳಸಿದ್ದರಂತೆ. ಈ ವರ್ಷದ ಆರಂಭದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಸಂಗೀತಾ ಅವರು, ಸದ್ಯ ಅರ್ಜಿಯನ್ನು ಹಿಂತೆಗೆದುಕೊಳ್ಳು ಕಾರಣಗಳನ್ನು ನೀಡಿದ ಬಳಿಕ ಕಾನೂನು ಪ್ರಕ್ರಿಯೆ ಅಂತ್ಯವಾಗಿದೆ.

ನಟಿಯೊಂದಿಗೆ ಸಂಬಂಧ, ಊಹಾಪೋಹಗಳಿಗೆ ಕೊನೆ ಯಾವಾಗ?

ಆದರೆ, ಅರ್ಜಿಯನ್ನು ಸಂಗೀತಾ ಅವರು ಹಿಂಪಡೆದರೂ ಕೂಡ ಮತ್ತೆ ವಿಜಯ್ ಅವರೊಂದಿಗೆ ಒಂದಾಗುತ್ತಾರಾ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆಯೂ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ಅವರ ನಡುವಿನ ಸಂಬಂಧ ಕುರಿತು ಹರಿದಾಡುತ್ತಿರುವ ರೂಮರ್ಸ್, ಊಹಾಪೋಹಗಳಿಗೂ ಕೊನೆ ಬಿದ್ದಿಲ್ಲ.

ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಕೋರ್ಟ್ ವಿಚಾರಣೆಗೆ ಇಬ್ಬರು ಹಾಜರಾದ ಕಾರಣ ಹಲವು ಬಾರಿ ಅರ್ಜಿಯ ವಿಚಾರಣೆ ಮುಂದೂಡಲ್ಪಟ್ಟಿತ್ತು. 1999ರಲ್ಲಿ ವಿಜಯ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಂಗೀತಾ ಅವರಿಗೆ, ಜೂನ್ 15ರಂದು ಕೋರ್ಟ್‌ ಅರ್ಜಿ ಹಿಂಪಡೆಯುವ ಬಗ್ಗೆ ಯೋಚಿಸಲು ಸೂಚನೆ ನೀಡಿತ್ತಂತೆ. ಆದರೆ ಆ ಬಳಿಕವೂ ಇಬ್ಬರು ಕೋರ್ಟ್ ಎದುರು ಹಾಜರಾಗದ ಕಾರಣ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಆಗಸ್ಟ್ 07ಕ್ಕೆ ಮುಂದೂಡಿತ್ತು.

ವಿಚ್ಛೇದನ ಅರ್ಜಿಯಲ್ಲಿ ಏನಿತ್ತು?

ಇನ್ನು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಸಂದರ್ಭದಲ್ಲಿ ಸಂಗೀತಾ ಅವರು ಹಲವು ಕಾರಣಗಳನ್ನು ಉಲ್ಲೇಖಿಸಿದ್ದರು. ತಮ್ಮ ನಡುವೆ ಹೊಂದಾಣಿಕೆ ಇಲ್ಲದೇ ಇರೋದು, ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಸೇರಿದಂತೆ ವಿಜಯ್ ಅವರ ಸಿನಿಮಾ ನಟಿಯೊಂದಿಗೆ ಆತ್ಮೀಯರಾಗಿದ್ದು, ಇದು ತಮ್ಮ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅರ್ಜಿಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಹಾಗೂ ತಮಿಳುನಾಡಿನ ಚೆನ್ನೈನ ನೀಲಂಕರೈ ನಲ್ಲಿರುವ ಮನೆಯಲ್ಲಿ ವಾಸಿಸಲು ಅನುಮತಿಯನ್ನು ಕೋರಿ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರಂತೆ.

2023ರಲ್ಲಿಯೇ ದಾಂಪತ್ಯದಲ್ಲಿ ಬಿರುಕು?

2023ರಲ್ಲಿಯೇ ವಿಜಯ್ ಹಾಗೂ ಸಂಗೀತಾ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ ಆ ಸಮಯದಲ್ಲಿ ಆ ವರದಿಗಳನ್ನು ನಿರಾಕರಿಸಿದ್ದರು. ಆದರೆ 2025ರಲ್ಲಿ ಟಿವಿಕೆ ಪಕ್ಷದ ಎರಡನೇ ರಾಜ್ಯ ಸಮ್ಮೇಳದಿಂದಲೂ ಅವರು ದೂರ ಉಳಿದುಕೊಂಡಿದ್ದ ಸಂದರ್ಭದಲ್ಲಿ ಭಾರೀ ಊಹಾಪೋಹಗಳು ಕಂಡು ಬಂದಿತ್ತು. ಇದರೊಂದಿಗೆ ಟಿವಿಕೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಸಂಗೀತಾ ಅವರು ಭಾಗಿಯಾಗಿರಲಿಲ್ಲ.

1999ರ ಆಗಸ್ಟ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿಜಯ್ ಹಾಗೂ ಸಂಗೀತಾ ಅವರು ಮೂರು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಅಂದು ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆದಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗ ಜೇಸನ್ ಸಂಜಯರ್, ದಿವ್ಯಾ ಸಾಶಾ ಸಾರ್ವಜನಿಕ ಜೀವನದಿಂದ ದೂರವೇ ಉಳಿದುಕೊಂಡಿದ್ದಾರೆ.

ಆದರೆ, ಸದ್ಯ ಸಂಗೀತಾ ಅವರು ವಿಜಯ್ ಅವರೊಂದಿಗೆ ವೈವಾಹಿಕ ಜೀವನ ಮುಂದೂವರಿಸಲು ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿಲ್ಲವಂತೆ. ಕೇವಲ ಈ ವಿವಾದವನ್ನು ಕೋರ್ಟ್ ವರೆಗೂ ತೆಗೆದುಕೊಂಡು ಹೋಗದೆ ಅವರೇ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದರಂತೆ. ವಿಜಯ್ ಅವರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಕುಟುಂಬದ ಗೌರವ, ರಾಜಕೀಯ ಪ್ರತಿಷ್ಠೆಯ ಕಾರಣಕ್ಕೆ ಈ ವಿಚಾರವನ್ನು ಮತ್ತಷ್ಟು ಸಾರ್ವಜನಿಕ ಚರ್ಚೆ, ಟೀಕೆಗಳಿಗೆ ಒಳಗಾಗದಂತೆ ನೋಡಿಕೊಳ್ಳಲು ಕುಟುಂಬ ಸದಸ್ಯರು ಸೂಚನೆ ನೀಡಿದ್ದರಂತೆ. ಈ ಕಾರಣದಿಂದಲೇ ಲೀಗಲ್ ಕೇಸ್ ಮುಂದುವರಿಸುವುದರ ಬದಲು, ಕುಟುಂಬದ ಒಳಗೆಯೇ ಇತ್ಯರ್ಥ ಮಾಡಿಕೊಳ್ಳಲು ಸಂಗೀತಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಆದರೆ ಅರ್ಜಿ ಹಿಂಪಡೆಯಲು ಕಾರಣವೇನು ಅಂತ ಸಂಗೀತಾ ಅಥವಾ ವಿಜಯ್ ಅವರು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.