ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕುಟುಂಬದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಹಾಗೂ ತಮ್ಮ ಮೇಲಿರುವ ಜವಾಬ್ದಾರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನೀಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಶನದಲ್ಲಿ ಅವರು ತಮ್ಮ ಬಾಲ್ಯದ ನೆನಪುಗಳು, ತಂದೆ ವಿಜಯ್ ಜೊತೆಗಿನ ಬಾಂಧವ್ಯ, ಕುಟುಂಬದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಹಾಗೂ ತಮ್ಮ ಮೇಲಿರುವ ಜವಾಬ್ದಾರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಾಲ್ಯದಲ್ಲೇ ಅಪ್ಪನ ಜೊತೆ ಡ್ಯಾನ್ಸ್ ಮಾಡಿದ್ದ ಜೇಸನ್

ತಮ್ಮ ತಂದೆ ವಿಜಯ್ ನಟನೆಯ ಸಿನಿಮಾದ ಹಾಡೊಂದರಲ್ಲಿ ಬಾಲ್ಯದಲ್ಲೇ ಅವರ ಜೊತೆ ಡ್ಯಾನ್ಸ್ ಮಾಡಿದ್ದ ಘಟನೆಯನ್ನು ಜೇಸನ್ ಸಂಜಯ್ ನೆನಪಿಸಿಕೊಂಡಿದ್ದಾರೆ. ಆಗ ತಮಗೆ ಸುಮಾರು 8-9 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಸಾಕಷ್ಟು ಜನರನ್ನು ನೋಡಿ ತಾವು ಹೆದರಿದ್ದೆ. ಡ್ಯಾನ್ಸ್‌ಗಾಗಿ ಆ್ಯಕ್ಷನ್ ಹೇಳುತ್ತಿದ್ದಂತೆ ನೇರವಾಗಿ ಅಪ್ಪನ ಬಳಿ ಓಡಿ ಹೋಗಿ ಅವರನ್ನು ತಬ್ಬಿಕೊಂಡಿದ್ದೆ. ಆಗ ತಂದೆ ಧೈರ್ಯ ಹೇಳಿ ತಮ್ಮನ್ನು ಡ್ಯಾನ್ಸ್ ಮಾಡಿಸಿದ್ದರು ಎಂದು ಜೇಸನ್ ಹೇಳಿದ್ದಾರೆ. ಆ ಸಮಯದಲ್ಲಿ ಅದರ ಗಂಭೀರತೆ ಏನು ಎಂಬುದು ತಮಗೆ ಗೊತ್ತಿರಲಿಲ್ಲ. ಅಪ್ಪನ ಜೊತೆ ಸೇರಿ ಮಜಾ ಮಾಡೋಣ ಎಂಬ ಮನಸ್ಥಿತಿಯಲ್ಲಿ ಆ ಹಾಡಿನಲ್ಲಿ ಭಾಗವಹಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಅಪ್ಪ ಮುಖ್ಯಮಂತ್ರಿ ಆಗಿರುವುದರಿಂದ ದೊಡ್ಡ ಜವಾಬ್ದಾರಿ ಇದೆ

ಇದೀಗ ತಮ್ಮ ತಂದೆ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ತಮ್ಮ ಮೇಲೂ ದೊಡ್ಡ ಜವಾಬ್ದಾರಿ ಇದೆ ಎಂದು ಜೇಸನ್ ಹೇಳಿದ್ದಾರೆ. "ನನ್ನ ತಂದೆ ಈಗ ಮುಖ್ಯಮಂತ್ರಿ ಆಗಿದ್ದಾರೆ. ಅವರ ಹೆಸರಿನ ಜೊತೆ ನನ್ನ ಕುಟುಂಬದ ಮೇಲೂ ಒಂದು ದೊಡ್ಡ ಜವಾಬ್ದಾರಿ ಇದೆ. ಈಗ ನನ್ನ ಪ್ರತಿಯೊಂದು ಸಣ್ಣ ವಿಚಾರವನ್ನೂ ಜನರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಹಾಗಾಗಿ ನಾನು ಇನ್ನಷ್ಟು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು" ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿರುವವರನ್ನು ಜನರು ಹಿಂದೆಂದಿಗಿಂತಲೂ ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಮ್ಮ ಸಿನಿಮಾ ಹಾಗೂ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕಾಮೆಂಟ್‌ಗಳನ್ನು ತಾವು ಓದುತ್ತೇನೆ ಎಂದೂ ಜೇಸನ್ ತಿಳಿಸಿದ್ದಾರೆ.

ಜನರು ನನ್ನ ಬಗ್ಗೆ ತಮಗೆ ಬೇಕಾದ ಕಥೆ ಕಟ್ಟಿಕೊಳ್ಳುತ್ತಾರೆ

ತಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನೇರವಾಗಿ ತಿಳಿಯದೇ ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಜೇಸನ್ ಹೇಳಿದ್ದಾರೆ. ಕೆಲವರು ತಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಮನಸ್ಸಿನಲ್ಲೇ ಒಂದು ಕಥೆ ಸೃಷ್ಟಿಸಿಕೊಂಡು, ಅದಕ್ಕೆ ತಕ್ಕಂತೆ ಅಭಿಪ್ರಾಯಗಳನ್ನು ಬರೆಯುತ್ತಾರೆ. ಆದರೆ ಅವರಿಗೆ ತಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಹೀಗೆ ಯೋಚಿಸುತ್ತಿದ್ದಾರೆ ಎಂದು ಭಾವಿಸಿ ಅಂತಹ ಕಾಮೆಂಟ್‌ಗಳನ್ನು ತಾವು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

"ಮುಂದೆ ಜನರ ಜೊತೆ ನೇರವಾಗಿ ಮಾತನಾಡುವ ಅವಕಾಶ ಸಿಕ್ಕಾಗ ನಾನು ಯಾರು ಎಂಬುದು ಅವರಿಗೆ ಅರ್ಥವಾಗುತ್ತದೆ. ನನ್ನನ್ನು ಬೇರೆಯ ರೀತಿಯಲ್ಲಿ ತೋರಿಸಿಕೊಳ್ಳಬೇಕು ಅಥವಾ ನನ್ನ ಇಮೇಜ್ ಬದಲಿಸಬೇಕು ಎಂದು ನಾನು ಬಯಸುವುದಿಲ್ಲ. ನಾನು ನಾನಾಗಿಯೇ ಇದ್ದರೆ ಜನರು ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ. ಸತ್ಯಕ್ಕೆ ಯಾವಾಗಲೂ ಬೆಲೆ ಇರುತ್ತದೆ" ಎಂದು ಜೇಸನ್ ಹೇಳಿದ್ದಾರೆ.

ಕುಟುಂಬದ ಬಗ್ಗೆ ಹರಿದಾಡುತ್ತಿರುವುದೆಲ್ಲ ರೂಮರ್ಸ್

ವಿಜಯ್ ಹಾಗೂ ಅವರ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಸುದ್ದಿಗಳ ಕುರಿತು ಮಾತನಾಡಿರುವ ಜೇಸನ್ ಸಂಜಯ್, ಅವುಗಳಲ್ಲಿ ಬಹುತೇಕವು ಕೇವಲ ವದಂತಿಗಳು ಎಂದು ಹೇಳಿದ್ದಾರೆ. ನನ್ನ ತಂದೆ ಮತ್ತು ನಮ್ಮ ಕುಟುಂಬದ ಬಗ್ಗೆ ಹೊರಗೆ ಬರುತ್ತಿರುವ ಹಲವು ವಿಚಾರಗಳು ರೂಮರ್ಸ್. ನಾವೆಲ್ಲರೂ ಜವಾಬ್ದಾರಿಯುತವಾಗಿ ನಮ್ಮ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಬಗ್ಗೆ ಅನಗತ್ಯವಾಗಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಆದರೆ ಅವೆಲ್ಲವನ್ನೂ ಮೀರಿ ನಾವು ನಮ್ಮ ಜೀವನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಜಯ್ ಕುಟುಂಬದ ಬಗ್ಗೆ ಹರಿದಾಡುತ್ತಿದ್ದ ಹಲವು ವದಂತಿಗಳಿಗೆ ಜೇಸನ್ ಸಂಜಯ್ ಸ್ಪಷ್ಟನೆ ನೀಡಿದ್ದಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ನನ್ನ ಹಿಂದೆ ದೊಡ್ಡ ಪರಂಪರೆ ಇದೆ

ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಮಾತನಾಡಿದ ಜೇಸನ್, ತಮ್ಮ ಹಿಂದೆ ದೊಡ್ಡ ಪರಂಪರೆ ಇದೆ ಎಂಬ ಅರಿವು ತಮಗಿದೆ ಎಂದು ಹೇಳಿದ್ದಾರೆ. ಕುಟುಂಬದ ಕಾರಣದಿಂದ ಜನರಿಂದ ಅಪಾರ ಪ್ರೀತಿ ಸಿಗುತ್ತಿರುವುದಕ್ಕೆ ತಾವು ಅದೃಷ್ಟವಂತರು ಎಂದೂ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜನರನ್ನು ನೇರವಾಗಿ ಭೇಟಿ ಮಾಡಿ ಮಾತನಾಡುವ ಅವಕಾಶ ಸಿಕ್ಕಾಗ, ತಮ್ಮ ವ್ಯಕ್ತಿತ್ವವನ್ನು ಜನರು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಜೇಸನ್ ಸಂಜಯ್ ವ್ಯಕ್ತಪಡಿಸಿದ್ದಾರೆ.

ನನ್ನ ಅಮ್ಮ ಒಂಥರಾ ಸ್ಪೈ ಇದ್ದಂತೆ

ತಮ್ಮ ತಾಯಿ ಸಂಗೀತಾ ಅವರ ಬಗ್ಗೆ ಕೂಡ ಜೇಸನ್ ಸಂಜಯ್ ತಮಾಷೆಯಾಗಿ ಮಾತನಾಡಿದ್ದಾರೆ. ಮನೆಯಲ್ಲಿ ತಮಗೆ ಏನಾದರೂ ಗೊತ್ತಾಗದಂತೆ ಮಾಡಲು ಪ್ರಯತ್ನಿಸಿದರೆ ತಕ್ಷಣವೇ ಸಿಕ್ಕಿಬೀಳುತ್ತೇನೆ. ನನ್ನ ಅಮ್ಮ ಒಂಥರಾ ಸ್ಪೈ ಇದ್ದಂತೆ ಎಂದು ಅವರು ಹೇಳಿದ್ದಾರೆ. ತಾವು ಪ್ರತ್ಯೇಕವಾಗಿ ಎಲ್ಲಾದರೂ ಹೋಗಲು ಅಥವಾ ಮನೆಯಲ್ಲಿ ಏನಾದರೂ ಮುಚ್ಚಿಡಲು ಪ್ರಯತ್ನಿಸಿದರೂ ತಾಯಿಗೆ ಗೊತ್ತಾಗಿಬಿಡುತ್ತಿತ್ತು ಎಂದು ಜೇಸನ್ ತಮ್ಮ ಕುಟುಂಬದ ಮೋಜಿನ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ತಂದೆಯ ಸಲಹೆ ಇದೇ

ತಂದೆ ವಿಜಯ್ ಯಾವಾಗಲೂ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ ಎಂದು ಜೇಸನ್ ತಿಳಿಸಿದ್ದಾರೆ. ಕುಟುಂಬದ ಹೆಸರಿನ ನೆರಳಿನಲ್ಲಿ ಬದುಕುವ ಬದಲು, ಸ್ವಂತ ಶ್ರಮದಿಂದ ಗುರುತಿಸಿಕೊಳ್ಳಬೇಕು ಎಂಬುದನ್ನು ವಿಜಯ್ ಯಾವಾಗಲೂ ಹೇಳುತ್ತಿದ್ದರು ಎಂದು ಅವರು ಹೇಳಿದ್ದಾರೆ.