ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಇಳಿ ವಯಸ್ಸಿನಲ್ಲೂ ಸಿಂಪಲ್ ಡಯಟ್ ಹಾಗೂ ವರ್ಕೌಟ್ ಮೂಲಕ ಅವರು ಹೇಗೆ ಫಿಟ್ ಆಗಿದ್ದಾರೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನವೆಂಬರ್ 2ರಂದು ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಅವರ ಬಹುನಿರೀಕ್ಷಿತ 'ಕಿಂಗ್' ಸಿನಿಮಾ ರಿಲೀಸ್ ಆಗಲಿದ್ದು, ಬರ್ತ್‌ಡೇ ಪ್ರಯುಕ್ತ ಅಭಿಮಾನಿಗಳಿಗಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. 'ತು ಮಿಲ್ ಜಾಯೇ' ಅನ್ನೋ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ಕೆಮಿಸ್ಟ್ರಿ ಹಾಗೂ ಸಿನಿಮಾಗಾಗಿ ಅವರು ಕಷ್ಟಪಟ್ಟು ಹುರಿಗೊಳಿಸಿರುವ ದೇಹವನ್ನು ನಾವು ನೋಡಬಹುದು.

60ರ ಹರೆಯದಲ್ಲೂ ಶಾರುಖ್ ಇಷ್ಟೊಂದು ಫಿಟ್ ಆಗಿರೋದು ಹೇಗೆ? ಸಿನಿಮಾಗಾಗಿ ದೇಹವನ್ನು ಹುರಿಗೊಳಿಸಲು ದೊಡ್ಡ ಟ್ರೈನರ್‌ಗಳ ತಂಡವೇ ಇರುತ್ತದೆ. ಆದರೆ, ದಿನನಿತ್ಯದ ಜೀವನದಲ್ಲಿ ಶಾರುಖ್ ಕೆಲವು ಕಟ್ಟುನಿಟ್ಟಿನ ಲೈಫ್‌ಸ್ಟೈಲ್ ಫಾಲೋ ಮಾಡುತ್ತಾರೆ. 2024ರಲ್ಲಿ 'ದಿ ಗಾರ್ಡಿಯನ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು. 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನ ದಿನನಿತ್ಯದ ರೊಟೀನ್ ಇಲ್ಲಿದೆ.

ಶಾರುಖ್ ಖಾನ್ ಡೈಲಿ ರೊಟೀನ್

'ಸಿಕ್ಸ್ ಪ್ಯಾಕ್ ಇರಬೇಕು, ಬಿಳಿ ಬನಿಯನ್ ಹಾಕಿರಬೇಕು, ಪಕ್ಕದಲ್ಲಿ ಒಬ್ಬಳು ಹುಡುಗಿ ಇರಬೇಕು, ಮುಖದ ಮೇಲೆ ರಕ್ತ ಹಾಗೂ ಕೈಯಲ್ಲಿ ಪಿಸ್ತೂಲ್ ಇರಬೇಕು' ಅನ್ನೋದು ತಮ್ಮ ಜೀವನದ ಆಸೆ ಅಂತ 'ದಿ ಗಾರ್ಡಿಯನ್' ಸಂದರ್ಶನದಲ್ಲಿ ಶಾರುಖ್ ಹೇಳಿದ್ದರು. ಆದರೆ ಅವರ ದಿನನಿತ್ಯದ ರೊಟೀನ್ ನಾವು ಅಂದುಕೊಂಡಷ್ಟು ಸುಲಭವಿಲ್ಲ.

ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ಊಟ ಮಾಡುವುದಾಗಿ ನಟ ಹೇಳಿದ್ದಾರೆ. ಇದು ಇಂಟರ್ಮಿಟೆಂಟ್ ಫಾಸ್ಟಿಂಗ್ ಅಲ್ಲ, ಬದಲಾಗಿ ಅವರ ವೈಯಕ್ತಿಕ ಆಯ್ಕೆ. ಹಾಗೇ ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ಜಿಮ್‌ನಲ್ಲಿ ಕಳೆಯುತ್ತಾರೆ. "ಬೆಳಗ್ಗೆ 5 ಗಂಟೆಗೆ ನಾನು ಮಲಗುತ್ತೇನೆ. ಮಾರ್ಕ್ ವಾಲ್ಬರ್ಗ್ ಏಳುವ ಹೊತ್ತಿಗೆ ನಾನು ನಿದ್ದೆಗೆ ಜಾರುತ್ತೇನೆ. ಶೂಟಿಂಗ್ ಇದ್ದರೆ ಬೆಳಗ್ಗೆ 9 ಅಥವಾ 10 ಗಂಟೆಗೆ ಏಳುತ್ತೇನೆ. ರಾತ್ರಿ 2 ಗಂಟೆಗೆ ಮನೆಗೆ ಬಂದು, ಸ್ನಾನ ಮಾಡಿ, ವರ್ಕೌಟ್ ಮುಗಿಸಿಯೇ ಮಲಗುವುದು" ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಶಾರುಖ್ ಖಾನ್ ಡಯಟ್ ಪ್ಲಾನ್

2016ರಲ್ಲಿ ಆರ್‌ಜೆ ದೇವಾಂಗನಾ ಜೊತೆಗಿನ ಸಂದರ್ಶನದಲ್ಲಿ ಶಾರುಖ್ ತಮ್ಮ ಡಯಟ್ ಪ್ಲಾನ್ ಬಗ್ಗೆ ಮಾತನಾಡಿದ್ದರು. ತಮಗೆ ಭರ್ಜರಿ ಊಟದ ಶೋಕಿ ಇಲ್ಲ, ಬದಲಾಗಿ ಸಿಂಪಲ್ ಹಾಗೂ ಸಾಂಪ್ರದಾಯಿಕ ಊಟವೇ ಇಷ್ಟ ಎಂದಿದ್ದರು. ಆದರೆ ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ಹೋದಾಗ ಬಿರಿಯಾನಿ, ಲಸ್ಸಿ ಸೇರಿದಂತೆ ತುಪ್ಪ ಹಾಕಿದ ಎಲ್ಲ ಬಗೆಯ ಊಟವನ್ನು ಸವಿಯುತ್ತಾರೆ.

"ನನಗೆ ತುಂಬಾ ಸಿಂಪಲ್ ಊಟ ಇಷ್ಟ. ಸ್ನ್ಯಾಕ್ಸ್ ಅಥವಾ ಬೇರೆ ಏನನ್ನೂ ನಾನು ತಿನ್ನಲ್ಲ. ಮುಝೆ ಪಕ್ವಾನ್ ಪಸಂದ್ ನಹೀ (ನನಗೆ ಭರ್ಜರಿ ಊಟ ಇಷ್ಟವಿಲ್ಲ)" ಎಂದು ವಿಡಿಯೋದಲ್ಲಿ ಹೇಳಿದ್ದರು. ಹೆಚ್ಚಾಗಿ ಮೊಳಕೆಕಾಳು, ಗ್ರಿಲ್ಡ್ ಚಿಕನ್, ತರಕಾರಿ ಹಾಗೂ ಕೆಲವೊಮ್ಮೆ ಸ್ವಲ್ಪ ದಾಲ್ ತಿನ್ನುವುದಾಗಿ ನಟ ಹೇಳಿದ್ದಾರೆ. "ಹಲವು ವರ್ಷಗಳಿಂದ ನಾನು ಇದೇ ರೀತಿ ಊಟ ಮಾಡುತ್ತಿದ್ದೇನೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದಿದ್ದಾರೆ.

'ಕಿಂಗ್' ಸಿನಿಮಾ ಬಗ್ಗೆ

ಇನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಕಿಂಗ್' ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಸುಹಾನಾ ಖಾನ್, ರಾಣಿ ಮುಖರ್ಜಿ, ರಾಘವ್ ಜುಯಲ್, ಅರ್ಷದ್ ವಾರ್ಸಿ ಹಾಗೂ ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ 2026ರ ಡಿಸೆಂಬರ್ 24ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.