ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕಿಶನ್​ ಪಾತ್ರದ ಮೂಲಕ ಎಂಟ್ರಿ ಕೊಟ್ಟಿರೋ ನಟ ರಾಜೇಶ್​ ಧ್ರುವ ಬಿಗ್​ಬಾಸ್​ ಆಫರ್​ ರಿಜೆಕ್ಟ್​ ಮಾಡಿದ್ಯಾಕೆ? ಕಿರುತೆರೆಯ ಇನ್ನೊಂದು ಮುಖದ ಬಗ್ಗೆ ಹೇಳಿದ್ದೇನು? 

ಅಗ್ನಿಸಾಕ್ಷಿಯ ಮೂಲಕ ಜನಪ್ರಿಯರಾಗಿದ್ದ ನಟ ರಾಜೇಶ್​ ಧ್ರುವ ಅವರು ಇದೀಗ ಕಲರ್ಸ್​ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕಿಶನ್​ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಸದ್ಯ ಈ ಸೀರಿಯಲ್​ನಲ್ಲಿ ಕಿಶನ್​ ಮತ್ತು ಆತ ಪ್ರೀತಿಸಿದ ಪೂಜಾಳ ಮದುವೆಯ ವಿವಾದ ಶುರುವಾಗಿದೆ. ಇವರಿಬ್ಬರ ಮದುವೆಯನ್ನು ತಪ್ಪಿಸಲು ಏನಾದರೂ ಕಿತಾಪತಿ ಮಾಡುವ ಸಾಹಸ ಮಾಡುತ್ತಿದ್ದಾರೆ ಕಿಶನ್​ನ ಮನೆಯವರು. ಸದ್ಯ ಭಾಗ್ಯಳ ಮನೆಯವರನ್ನು ಪರೀಕ್ಷಿಸುವ ಸಲುವಾಗಿ ಕಿಶನ್​ಗೆ ಆಸ್ತಿಯಲ್ಲಿ ಬಿಡಿಗಾಸೂ ಕೊಡುವುದಿಲ್ಲ ಎಂದು ತಾತ ಹೇಳಿದ್ದು, ಸೀರಿಯಲ್​ ಮುಂದೇನಾಗುತ್ತದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಇದೆ. 

 ಇದು ಸೀರಿಯಲ್​ ಕಥೆಯಾದರೆ, ಇದೀಗ ನಿಜ ಜೀವನದ ಕೆಲವು ಅನಿಸಿಕೆಗಳನ್ನು ತೆರೆದಿಟ್ಟಿದ್ದಾರೆ ನಟ ರಾಜೇಶ್​ ಧ್ರುವ. ಬಣ್ಣದ ಲೋಕದಲ್ಲಿ ಎಲ್ಲವೂ ಹೇಗೆ ಜನರು ಅಂದುಕೊಂಡಂತೆ ಇರುವುದಿಲ್ಲ ಎನ್ನುವ ಬಗ್ಗೆ ಇವರು ಮಾತನಾಡಿದ್ದಾರೆ. ಕಿರುತೆರೆಯಲ್ಲಿ ನಟ ಎಂದ ಮಾತ್ರಕ್ಕೆ ಒಳ್ಳೆಯ ಪೇಮೆಂಟ್​ ಇದೆ, ಒಂದರ ಮೇಲೊಂದರಂತೆ ಅವಕಾಶ ಸಿಗುತ್ತಿದೆ. ಇವರೇನು ಕಡಿಮೆ ಎಂದೆಲ್ಲಾ ಸಾಮಾನ್ಯ ಜನರು ಅಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಇದರ ಕಥೆಯೇ ಬೇರೆ ಇದೆ ಎನ್ನುತ್ತಲೇ ಕಿರುತೆರೆಯ ಇನ್ನೊಂದು ಮುಖವನ್ನು ಬಯಲು ಮಾಡಿದ್ದಾರೆ ರಾಜೇಶ್​. ಸೀರಿಯಲ್​ಗಳಲ್ಲಿ ಹೀರೋ ಆದರೆ ಅವರಿಗೆ ಚೆನ್ನಾಗಿ ದುಡ್ಡು ಬರತ್ತೆ. ಆದರೆ ಉಳಿದ ಕಲಾವಿದರ ಬದುಕು ಬಲು ಕಷ್ಟ. ಕೆಲ ಪ್ರೊಡಕ್ಷನ್‌ ಹೌಸ್‌ನವರು ಪೇಮೆಂಟ್​ ಕೊಡುತ್ತಾರೆ. ಆದರೆ ಹೆಚ್ಚಿನ ಪ್ರೊಡಕ್ಷನ್​ ಹೌಸ್​ನಿಂದ ಹಣ ಬರುವುದು ತುಂಬಾ ಕಷ್ಟ. ಕಮಿಟ್‌ ಆಗಬೇಕಾದರೆ ಅವರ ಅಗ್ರಿಮೆಂಟ್‌ಗಳನ್ನು ನಾವು ಸೈನ್‌ ಮಾಡಿಕೊಂಡು ಹೋಗಬೇಕು. ಎರಡು ಅಥವಾ ಮೂರು ತಿಂಗಳಿಗೆ ಒಮ್ಮೆ ನಿಮ್ಮ ಪೇಮೆಂಟ್‌ ಬರುತ್ತದೆ. ಜನವರಿಯಲ್ಲಿ ನಾವು ಶೂಟಿಂಗ್‌ ಮಾಡಿದ್ರೆ ಆ ಪೇಮೆಂಟ್‌ ಮಾರ್ಚ್‌ ಕೊನೆಯಲ್ಲಿ ಬರುತ್ತೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಗ್​ಬಾಸ್​ ಮನೆಗೆ ಆಫರ್​ ಬಂದಿತ್ತಾ ಎನ್ನುವ ಪ್ರಶ್ನೆಗೆ ಹಿಂದೊಮ್ಮೆ ಬಂದಿತ್ತು. ಆದರೆ ನನಗೆ ಹೋಗುವ ಮನಸ್ಥಿತಿ ಇರಲಿಲ್ಲ. ಆದ್ದರಿಂದ ರಿಜೆಕ್ಟ್​ ಮಾಡಿಬಿಟ್ಟೆ. ಮುಂದೆ ಏನಾದ್ರೂ ಸಿಕ್ಕರೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಅಷ್ಟಕ್ಕೂ ಇದೀಗ ಬಿಗ್​ಬಾಸ್​ 12ನೇ ಸೀಸನ್​ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜೇಶ್​ ಅವರಿಗೆ ಅವಕಾಶ ಸಿಗಬಹುದಾ ಎನ್ನುವ ಬಗ್ಗೆಯೂ ಚರ್ಚೆ ಶುರುವಾಗಿದೆ.

ಇದೇ ವೇಳೆ ಸೀರಿಯಲ್​ಗಳು ಬೇರೆ ಭಾಷೆಗಳಿಂದ ರಿಮೇಕ್​ ಆಗುತ್ತಿರುವ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದ್ದಾರೆ ರಾಜೇಶ್​. ಇದಕ್ಕೆ ಕಾರಣ, ರೀಮೇಕ್​ಗಳಲ್ಲಿ ನಟರಿಗೆ ಅವರ ಪ್ರತಿಭೆ ಅನಾವರಣಗೊಳಿಸುವ ಅಷ್ಟೊಂದು ಆದ್ಯತೆ ಇಲ್ಲದೇ ಇರುವುದು. ‘‘ರಿಮೇಕ್‌ ಬಗ್ಗೆ ಹೇಳುವುದಾದರೆ, ಇಂಥ ಸೀರಿಯಲ್​ಗಳಿಗೆ ಒಂದು ಬಾರ್ಡರ್‌ ಇರುತ್ತದೆ. ರೈಟರ್‌ ಅಥವಾ ನಟ ಅದನ್ನು ಚಾಚೂ ತಪ್ಪದೇ ಪಾಲಿಸಬೇಕು. ಮೀರಿ ಹೋಗುವಂತಿಲ್ಲ. ನಾನು ಇದಾಗಲೇ ಮೂರ್ನಾಲ್ಕು ರಿಮೇಕ್‌ ಸೀರಿಯಲ್‌ಗಳನ್ನು ಮಾಡಿದ್ದೇನೆ. ತುಂಬಾ ಕೆಟ್ಟ ಅನುಭವ. ನಾನು ಒಂದು ಸೀರಿಯಲ್‌ ಅನ್ನು ಮಾಡುತ್ತಿದ್ದೆ. ಹೇಗೆ ಅಂದ್ರೆ, ತಮಿಳಿನಲ್ಲಿರುವ ಸಣ್ಣ ಡೈಲಾಗ್‌ ಕೂಡ ಚೇಂಜ್‌ ಮಾಡದೇ ಇಲ್ಲಿ ಅನುಕರಣೆ ಮಾಡುತ್ತಿದ್ದರು. ಸ್ವಮೇಕ್‌ ಅಂತ ಬಂದಾಗ ಫ್ರೀಡಂ ಇರುತ್ತದೆ, ಹಾಗೆಯೇ ಜನ ಕೂಡ ಸ್ವೀಕರಿಸುತ್ತಾರೆ’’ ಎಂದು ಅಭಿಪ್ರಾಯ ಪಟ್ಟಿದ್ದಾರೆ ನಟ.