ಭಾಗ್ಯಳಿಗೆ ಕಾಟ ಕೊಡಲು ಬಂದ ಕಿಶನ್​ ಅತ್ತೆಯ ಜೊತೆನೇ ಭಾಗ್ಯ ಇಷ್ಟೊಂದು ಸೊಗಸಾಗಿ ನೃತ್ಯ ಮಾಡಿ ಮೋಡಿ ಮಾಡಿದ್ದಾಳೆ ನೋಡಿ! 

ಸದ್ಯ ಭಾಗ್ಯಲಕ್ಷ್ಮಿಯ ಭಾಗ್ಯಳ ಲೈಫ್​ನಲ್ಲಿ ಬರೀ ವಿಲನ್​ಗಳದ್ದೇ ಎಂಟ್ರಿ ಆಗಿದೆ. ಪತಿ ತಾಂಡವ್​, ಆತನ ಲವರ್ ಶ್ರೇಷ್ಠಾ, ಒಂದು ಹಂತದಲ್ಲಿ ಸ್ವಂತ ಅಮ್ಮ- ಸ್ವಂತ ಮಗಳು! ಬಳಿಕ ಕನ್ನಿಕಾ ಬಂದ್ಲು, ಆಕೆಯ ಅಣ್ಣ ಆದಿ ಎಂಟ್ರಿ ಆಗಿದೆ. ಅಯ್ಯಬ್ಬಾ ಎಂದು ವೀಕ್ಷಕರು ಸಾಕೋಸಾಕಪ್ಪ ಎನ್ನುತ್ತಿರುವಾಗಲೇ ಈಗ ಪೂಜಾ ಲವರ್​ ಕಿಶನ್​ನ ಅತ್ತೆಯ ಎಂಟ್ರಿನೂ ಆಗಿಬಿಟ್ಟಿದೆ. ಒಟ್ಟಿನಲ್ಲಿ ಎಲ್ಲಾ ಸೇರಿ ಈಗ ಪೂಜಾ ಮತ್ತು ಕಿಶನ್​ ಮದುವೆಯನ್ನು ನಿಲ್ಲಿಸಲು ಶತಾಯುಗತಾಯು ಪ್ರಯತ್ನ ಮಾಡುತ್ತಿದ್ದಾರೆ. ಮದುವೆಗೆ ಭಾಗ್ಯಳಿಗೆ ಹಣ ಹೊಂದಿಸಲು ಆಗದೇ ಮದುವೆ ಆಗಬಾರದು ಎಂದು ಏನೇನೋ ಶಾಸ್ತ್ರ ಹೇಳುವ ಮೂಲಕ ಈ ಮದುವೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸದ್ಯದವರೆಗೆ ಅವರ ಪ್ರಯತ್ನ ಏನೂ ಸಫಲ ಕಾಣಿಸುತ್ತಿಲ್ಲ.

ಇದು ಭಾಗ್ಯಲಕ್ಷ್ಮಿ ಸೀರಿಯಲ್​ ಕಥೆಯಾದರೆ, ಅಸಲಿಗೆ ಭಾಗ್ಯಲಕ್ಷ್ಮಿ ಪಾತ್ರಧಾರಿ ಸುಷ್ಮಾ ಕೆ. ರಾವ್​ ಹಾಗೂ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿರೋ ಕಿಶನ್​ ಅತ್ತೆ ಉರ್ಫ್​ ಭವ್ಯಶ್ರೀ ರೈ ಇಬ್ಬರೂ ಶಾಸ್ತ್ರೀಯ ನೃತ್ಯಗಾರರು. ಸುಷ್ಮಾ ಅವರ ಭರತನಾಟ್ಯವನ್ನು ಇದಾಗಲೇ ಇದೇ ಸೀರಿಯಲ್​ನಲ್ಲಿ ವೀಕ್ಷಕರು ಕಣ್ತುಂಬಿಸಿಕೊಂಡಿದ್ದಾರೆ. ಇದೀಗ ಭವ್ಯಶ್ರೀ ರೈ ಅವರ ನೃತ್ಯ ಕೂಡ ಕಣ್ತುಂಬಿಸಿಕೊಳ್ಳುವ ಛಾನ್ಸ್ ಅನ್ನು ಈ ಇಬ್ಬರು ನಟಿಯರು ನೀಡಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸುಷ್ಮಾ ಮತ್ತು ಭವ್ಯಶ್ರೀ ಅವರು ಭರತನಾಟ್ಯದಲ್ಲಿ ಮೋಡಿ ಮಾಡಿದ್ದಾರೆ. ಇವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.

ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ತಿರೋ ಭವ್ಯಶ್ರೀ ರೈ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗ ಮತ್ತು ಕಿರುತೆರಯಲ್ಲಿ ಸಕ್ರಿಯವಾಗಿರುವ ನಟಿ. ಮಂಗಳೂರು ಮೂಲದ ಇವರು ಒಬ್ಬ ನಟಿಯಾಗಿ ಮಾತ್ರವಲ್ಲದೇ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕೂಡ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. 1992 ರಲ್ಲಿ ತೆರೆಕಂಡ ವಿಷ್ಣುವರ್ಧನ್‌ರ `ರಾಜಾಧಿರಾಜ' ಚಿತ್ರದಿಂದ ಬೆಳಕಿಗೆ ಬಂದ ಇವರು ನಂತರ ಶಿವರಾಜಕುಮಾರ್ `ಮುತ್ತಣ್ಣ' ಚಿತ್ರದಲ್ಲಿ ನಟಿಸಿದರು. 1992-2006 ರ ವರೆಗೆ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಇವರು ಕೆಲವು ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದರು. 2010 ಎಪ್ರಿಲ್ 26 ರಂದು ತಮ್ಮ ಸಹನಟ ಮತ್ತು ದೂರದ ಸಂಬಂಧಿ ಸುರೇಶ್ ರೈ ಅವರೊಂದಿಗೆ ಮಂಗಳೂರಿನ ಕಟೀಲು ಕ್ಷೇತ್ರದಲ್ಲಿ ಸರಳವಾಗಿ ಮದುವೆಯಾದರು. ಈ ಜೋಡಿ ಕೆಲವು ಚಿತ್ರಗಳಲ್ಲಿ ಮತ್ತು `ಕುಂಕುಮ ಭಾಗ್ಯ' ಮುಂತಾದ ಧಾರಾವಾಹಿಗಳಲ್ಲಿ ಒಟ್ಟಾಗಿ ನಟಿಸಿತ್ತು.

View post on Instagram