ಈ ನಡುವೆ ಅವರು ರಾಹುಲ್‌ ದ್ರಾವಿಡ್‌ರನ್ನು ಎಳೆದು ತಂದಿದ್ದಾರೆ

ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ನಿಶ್ಚಿತಾರ್ಥ 2017ರ ಜ.1ರಂದು ಆಗಲಿದೆ ಎನ್ನುವ ಸುದ್ದಿ ಸುಳ್ಳಂತೆ. ಹಾಗಂತ ಅನುಷ್ಕಾ ಶರ್ಮಾ ಅವರೇ ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟಿಗನೊಂದಿಗಿನ ತಮ್ಮ ಸಂಬಂಧವನ್ನು ಇಷ್ಟೆಲ್ಲ ರಂಗೇರಿಸುತ್ತಿರುವವರಿಗೆ ಅನುಷ್ಕಾ ಬೇರೆಯದೇ ಕತೆ ಹೇಳಿದ್ದಾರೆ. ಈ ನಡುವೆ ಅವರು ರಾಹುಲ್‌ ದ್ರಾವಿಡ್‌ರನ್ನು ಎಳೆದು ತಂದಿದ್ದಾರೆ. ‘ದ್ರಾವಿಡ್‌ ಕೂಡ ನನಗೆ ಚೆನ್ನಾಗಿ ಗೊತ್ತು. ಅವರನ್ನು ಭೇಟಿಯಾದ ಮೊದಲ ದಿನದಲ್ಲೇ ಧೈರ್ಯದಿಂದ ಮಾತನಾಡಿದ್ದೆ' ಎಂದಿದ್ದಾರೆ. ‘ನನ್ನ ಸಹೋದರ ಕ್ರಿಕೆಟ್‌ ಅಭಿಮಾನಿ. ಅವನಿಗೆ ವಿಪರೀತ ನಾಚಿಕೆ. ಒಮ್ಮೆ ಆಟ ಮುಗಿದ ಕೂಡಲೇ ದ್ರಾವಿಡ್‌ ಅವರ ಆಟೋಗ್ರಾಫ್‌ ಪಡೆಯಲು ಬಯಸಿದ. ಆದರೆ, ಹಸ್ತಾಕ್ಷರ ಕೇಳಲು ಅವನಿಗೇನೋ ಹೆದರಿಕೆ. ನಾನೇ ಪುಸ್ತಕ, ಪೆನ್ನು ಹಿಡಿದು ದ್ರಾವಿಡ್‌ ಮುಂದೆ ನಿಂತೆ. ಅವರು ಆಟೋಗ್ರಾಫ್‌ ಕೊಟ್ಟಮೇಲೂ ನನ್ನ ಪೆನ್ನಿನಿಂದಲೇ ಬೇರೆಲ್ಲರಿಗೂ ಹಸ್ತಾಕ್ಷರ ಕೊಟ್ಟರು. ಅಲ್ಲಿಯವರೆಗೂ ನಾನು ಕಾದೆ. ಎಲ್ಲ ಮುಗಿದ ಮೇಲೆ ದ್ರಾವಿಡ್‌ ಪೆನ್ನನ್ನು ಜೇಬಿಗೆ ಹಾಕಿಕೊಂಡು ಹೊರಟೇ ಬಿಟ್ಟರು. ಆಗ ನಾನೇ ಅವರ ಬಳಿ ಪೆನ್ನು ವಾಪಸು ಕೊಡುವಂತೆ ಕೇಳಿದೆ. ಅವರು ನಗುತ್ತಲೇ ಪೆನ್ನು ಹಿಂತಿರುಗಿಸಿದರು. ನನ್ನ ಪೆನ್ನು ಯಾವ ಸ್ಟಾರ್‌ ಬಳಿ ಇದ್ದರೂ ನಾನು ಧೈರ್ಯದಿಂದಲೇ ಕೇಳುತ್ತೇನೆ' ಎಂದು ಅನುಷ್ಕಾ ತಮ್ಮ ಹಿಂದಿನ ಕತೆ ಹೇಳಿಕೊಂಡರು. ಅನುಷ್ಕಾಗೆ ಕೊಹ್ಲಿಯಷ್ಟೇ ಗೊತ್ತು ಎನ್ನುವವರಿಗೂ ಇದು ಅಚ್ಚರಿ ಘಟನೆ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred