ನಟಿ ಐಶ್ವರ್ಯ ಸಿಂದೋಗಿ ಮತ್ತು ನಟ ಶಿಶಿರ್ ಶಾಸ್ತ್ರಿ ಅವರ ನಿಶ್ಚಿತಾರ್ಥ ನೆರವೇರಿದೆ. ಸಮಾರಂಭದಲ್ಲಿ ತಮ್ಮ ದಿವಂಗತ ಪೋಷಕರನ್ನು ನೆನಪಿಸಿಕೊಂಡು ಐಶ್ವರ್ಯ ಭಾವುಕರಾಗಿದ್ದಾರೆ.

Aishwarya Shishir Engagement: ಕೆಲವು ಸಂತೋಷದ ಕ್ಷಣಗಳು ಮನಸ್ಸಿಗೆ ನೆಮ್ಮದಿ ನೀಡಿದರೆ.. ಇನ್ನೂ ಕೆಲವು ಕ್ಷಣಗಳು ಕಣ್ಣಂಚಿನಲ್ಲಿ ನೀರು ತರಿಸುತ್ತವೆ. ಜೀವನದಲ್ಲಿ ಎಷ್ಟೇ ದೊಡ್ಡ ಸಂತೋಷ ಬಂದರೂ ಅದನ್ನು ನಮ್ಮವರ ಜೊತೆ ಹಂಚಿಕೊಳ್ಳಲು ಸಾಧ್ಯವಾಗದಿದ್ದಾಗ ಆ ಖುಷಿಯ ನಡುವೆಯೂ ಒಂದು ನೋವು ಉಳಿಯುತ್ತದೆ. ನಟಿ ಐಶ್ವರ್ಯ ಸಿಂದೋಗಿ ( Aishwarya Shindogi ) ಜೀವನದಲ್ಲೂ ಅಂತಹದ್ದೇ ಒಂದು ಭಾವುಕ ಕ್ಷಣ ನಿನ್ನೆ ಎದುರಾಯಿತು.

ಭಾವುಕರಾದ ಐಶ್ವರ್ಯ ಸಿಂದೋಗಿ

ನಟಿ ಐಶ್ವರ್ಯ ಸಿಂದೋಗಿ ಹಾಗೂ ನಟ ಶಿಶಿರ್ ಶಾಸ್ತ್ರಿ ನಿಶ್ಚಿತಾರ್ಥ ನಿನ್ನೆ ನೆರವೇರಿದೆ. ಈ ಸಮಾರಂಭದ ಸುಂದರ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲೊಂದು ವಿಡಿಯೋ ನೆಟ್ಟಿಗರ ಮನಸ್ಸನ್ನು ಭಾವುಕಗೊಳಿಸಿದೆ. ನಿಶ್ಚಿತಾರ್ಥದ ವೇದಿಕೆಯಲ್ಲಿ ಅಪ್ಪ-ಅಮ್ಮನ ಫೋಟೋ ಮುಂದೆ ನಮಸ್ಕರಿಸಿದ ಐಶ್ವರ್ಯ, ಕ್ಷಣಕಾಲ ಭಾವುಕರಾಗಿದ್ದಾರೆ. ಮಗಳ ಬದುಕಿನ ಅತ್ಯಂತ ವಿಶೇಷ ದಿನದಲ್ಲಿ ಆಶೀರ್ವದಿಸಲು ಹೆತ್ತವರು ದೈಹಿಕವಾಗಿ ಜೊತೆಯಿಲ್ಲದ ನೋವು ಆ ಕ್ಷಣದಲ್ಲಿ ಎದ್ದು ಕಾಣುವಂತಿತ್ತು.

ಐಶ್ವರ್ಯ ಸಿಂದೋಗಿಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲ. ತಂದೆ 2018ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಯಿ 2020ರಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಕೇವಲ ಎರಡು ವರ್ಷಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಐಶ್ವರ್ಯ, ಜೀವನದ ಕಠಿಣ ಹಾದಿಯನ್ನು ಒಬ್ಬರೇ ಎದುರಿಸುತ್ತಾ ಬಂದಿದ್ದಾರೆ. ಅಪ್ಪ-ಅಮ್ಮನ ಪ್ರೀತಿ, ಅವರ ಆಸರೆ, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಆ ಎರಡು ಜೀವಗಳು ಇಲ್ಲದಿದ್ದರೂ ನೆನಪುಗಳನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಐಶ್ವರ್ಯ ಮುನ್ನಡೆಯುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂದೋಗಿ ಕಾರ್ಯಕ್ರಮದ ಬಳಿಕವೂ ಉತ್ತಮ ಸ್ನೇಹಿತರಾಗಿದ್ದರು. ಒಟ್ಟಿಗೆ ರೀಲ್ಸ್ ಮಾಡುವುದು, ಫೋಟೋ ಹಂಚಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರ ಆತ್ಮೀಯತೆ ಅಭಿಮಾನಿಗಳಲ್ಲಿ ಪ್ರೀತಿಯ ಕುರಿತ ಚರ್ಚೆ ಹುಟ್ಟುಹಾಕಿತ್ತು. ಕೆಲ ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.

ನಿಶ್ಚಿತಾರ್ಥದ ವೇಳೆ ಮಾತನಾಡಿದ ಶಿಶಿರ್.. ತಮ್ಮ ಸಂಬಂಧ ಸ್ನೇಹದಿಂದ ಆರಂಭವಾಗಿ ಪರಸ್ಪರ ಗೌರವದ ಮೂಲಕ ಪ್ರೀತಿಗೆ ತಿರುಗಿತು ಎಂದು ಹೇಳಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯ ಎಂದು ಕೂಡ ತಿಳಿಸಿದ್ದಾರೆ. ಇನ್ನು ಶಿಶಿರ್ ಅವರ ಕಾಳಜಿ ಹಾಗೂ ಒಳ್ಳೆಯ ಗುಣಗಳು ತಮ್ಮನ್ನು ಆಕರ್ಷಿಸಿದವು ಎಂದು ಐಶ್ವರ್ಯ ಹೇಳಿದ್ದಾರೆ. 2027ರ ಫೆಬ್ರವರಿಯಲ್ಲಿ ಈ ಜೋಡಿ ಹಸೆಮಣೆ ಏರುವ ನಿರೀಕ್ಷೆ ಇದೆ.

View post on Instagram