ಹಾಸನದಿಂದ ಮೂಡಿಗೆರೆಗೆ ಕಾಡಾನೆಗಳನ್ನು ಓಡಿಸುತ್ತಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿಧಾನಸೌಧದಲ್ಲಿ ರಾಜೀನಾಮೆಗೆ ಮುಂದಾಗಿದ್ದಾರೆ. ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ಸಿಡಿದೆದ್ದಿರುವ ಶಾಸಕಿಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು (ನ.23): ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆಗೆ ಕಾಡಾನೆಗಳನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ಸಿಡಿದೆದ್ದಿರುವ ಶಾಸಕಿ, ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿ, ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ತಲುಪಿಸುವಂತೆ ಕೊಟ್ಟು ಹೋಗಿದ್ದಾರೆ. ಈ ಘಟನೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ವಿಧಾನಸೌಧದಲ್ಲಿ ಹೈಡ್ರಾಮಾ:

ಕಾಡಾನೆಗಳ ಸ್ಥಳಾಂತರ ವಿರೋಧಿಸಿ ರಾಜೀನಾಮೆ ನೀಡಲು ನಿರ್ಧರಿಸಿದ ನಯನಾ ಮೋಟಮ್ಮ, ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭಾಧ್ಯಕ್ಷರ (ಸ್ಪೀಕರ್) ಕಚೇರಿಗೆ ತೆರಳಿದರು. ಆದರೆ, ಆ ಸಮಯದಲ್ಲಿ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಸ್ಪೀಕರ್ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರ ಕಚೇರಿಗೆ ತೆರಳಿ ರಾಜೀನಾಮೆ ಪತ್ರವನ್ನು ನೀಡಲು ಮುಂದಾದರು. ಈ ವೇಳೆ, "ನಿಯಮಗಳ ಪ್ರಕಾರ ನಾನು ರಾಜೀನಾಮೆ ಪತ್ರ ಸ್ವೀಕರಿಸಲು ಅವಕಾಶವಿಲ್ಲ" ಎಂದು ಅಶೋಕ್ ಮಿರ್ಜಿ ಸ್ಪಷ್ಟಪಡಿಸಿದರು. ಬಳಿಕ ತಕ್ಷಣವೇ ಸ್ಪೀಕರ್ ಅವರಿಗೆ ದೂರವಾಣಿ ಕರೆ ಮಾಡಿದ ಆಪ್ತ ಕಾರ್ಯದರ್ಶಿ, ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ನೀಡಲು ಕಚೇರಿಗೆ ಬಂದಿರುವ ವಿಚಾರವನ್ನು ತಿಳಿಸಿದರು.

ಮನವೊಲಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ದೌಡು:

ಕಾಂಗ್ರೆಸ್ ಶಾಸಕಿಯೊಬ್ಬರು ರಾಜೀನಾಮೆ ನೀಡಲು ಮುಂದಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆಯ ಮೇರೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ತಕ್ಷಣವೇ ಸ್ಪೀಕರ್ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರ ಕಚೇರಿಗೆ ಆಗಮಿಸಿ, ನಯನಾ ಮೋಟಮ್ಮ ಅವರ ಮನವೊಲಿಸುವ ಪ್ರಯತ್ನ ನಡೆಸಿದರು.

ಸ್ವಪಕ್ಷೀಯ ಸರ್ಕಾರದ ವಿರುದ್ಧ ನಯನಾ ಮೋಟಮ್ಮ ಕಿಡಿ:

ಸ್ಪೀಕರ್ ಕಚೇರಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಸರ್ಕಾರ ಹಾಗೂ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ನಾನು ರಾಜೀನಾಮೆ ಪತ್ರ ಕೊಡಲು ಹೋದಾಗ ಸ್ಪೀಕರ್ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ರಾಜೀನಾಮೆ ಪತ್ರವನ್ನು ಅವರ ಆಪ್ತ ಕಾರ್ಯದರ್ಶಿಗೆ ನೀಡಲು ಮುಂದಾದೆ. ಆದರೆ ನಾವು ಸ್ವೀಕರಿಸಲು ಬರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ನಾಳೆ ಖುದ್ದು ಸ್ಪೀಕರ್ ಅವರನ್ನೇ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನಮ್ಮ ಕ್ಷೇತ್ರಕ್ಕೆ ಆನೆಗಳನ್ನು ಬಿಡಲು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಆನೆಗಳಿಂದ ಜನರಿಗೆ ಏನಾದರೂ ತೊಂದರೆ ಅಥವಾ ಪ್ರಾಣಹಾನಿಯಾದರೆ ಆ ನಷ್ಟವನ್ನು ಯಾರು ಭರಿಸುತ್ತಾರೆ? ಎಂದು ಪ್ರಶ್ನೆ ಮಾಡಿದರು.

ನಮ್ಮ ಗಮನಕ್ಕೂ ತರದೆ, ನನ್ನನ್ನು ಕೂಡ ಕೇಳದೆ ಗೌಪ್ಯವಾಗಿ ಆನೆ ಓಡಿಸುವ ಕಾರ್ಯಾಚರಣೆ ಶುರುಮಾಡಿದ್ದಾರೆ. ನಾವು ಕ್ಷೇತ್ರದ ಜನರಿಗೆ ಉತ್ತರ ಕೊಡಬೇಕಿದೆ. ಅಧಿಕಾರಿಗಳು ನಮ್ಮ ಮಾತನ್ನು ಕೇಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ತಕ್ಷಣವೇ ಈ ಆನೆ ಡ್ರೈವ್ (ಕಾರ್ಯಾಚರಣೆ) ನಿಲ್ಲಿಸಿ ತಾತ್ಕಾಲಿಕ ವಿರಾಮ ನೀಡಬೇಕು. ಸರ್ಕಾರ ನಮ್ಮ ಮಾತನ್ನು ಕೇಳಬೇಕು. ಸರ್ಕಾರವೇ ನಮ್ಮ ಮಾತು ಕೇಳಲಿಲ್ಲ ಎಂದರೆ ನಾವ್ಯಾಕೆ ಶಾಸಕರಾಗಿ ಇರಬೇಕು? ಹಾಸನದ ಜನರ ಜೀವಕ್ಕೆ ಮಾತ್ರ ಬೆಲೆನಾ? ಮೂಡಿಗೆರೆ ಜನರ ಜೀವಕ್ಕೆ ಬೆಲೆ ಇಲ್ವಾ? ಈ ಬೆಳವಣಿಗೆಯಿಂದ ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಸರ್ಕಾರವೇ ಬೆಲೆ ಕೊಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ಮೂಡಿಗೆರೆ ಶಾಸಕಿಯ ಈ ನಡೆ ಮಲೆನಾಡು ಭಾಗದ ಆನೆ-ಮಾನವ ಸಂಘರ್ಷದ ಗಂಭೀರತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಸರ್ಕಾರ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಅವರ ಮನವೊಲಿಕೆಗೆ ನಯನಾ ಮೋಟಮ್ಮ ಮಣಿಯುತ್ತಾರಾ ಅಥವಾ ನಾಳೆ ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.