2003ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ 'ಕರಿಯ' ಚಿತ್ರ ಕೇವಲ 56 ದಿನಗಳಿಗೆ ಥಿಯೇಟರ್‌ಗಳಿಂದ ಎತ್ತಂಗಡಿಯಾಗಿತ್ತು. ನಂತರ 6 ಲಕ್ಷಕ್ಕೆ ಹಕ್ಕು ಮಾರಾಟವಾಗಿ, ಮರು ಬಿಡುಗಡೆಗೊಂಡಾಗ 365 ದಿನ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತು. 21 ವರ್ಷಗಳ ನಂತರವೂ ಈ ಚಿತ್ರದ ಮೇಲಿನ ಕ್ರೇಜ್ ಹಾಗೆಯೇ ಉಳಿದಿದೆ.

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಗೆ 'ಕರಿಯ' ಯಾವತ್ತೂ ಮರೆಯಲಾಗದ ಸಿನಿಮಾ. 2003ರಲ್ಲಿ ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆ ಆದಾಗ ಕೇವಲ 56 ದಿನಗಳಿಗೆ ಥಿಯೇಟರ್‍‌ಗಳಿಂದ ಎತ್ತಂಗಡಿಯಾಗಿತ್ತು. ಅಂದು 56 ದಿನಕ್ಕೆ ಚಿತ್ರ ಮಂದಿರದಿಂದ ಹೊರಬಿದ್ದಿದ್ದ 'ಕರಿಯ', ನಂತರ ರೀ-ರಿಲೀಸ್‌ ಕಂಡು ಬ್ಲಾಕ್‌ಬಸ್ಟರ್ ಆಗಿ ಇತಿಹಾಸ ಸೃಷ್ಟಿಸಿದ್ದು ಹೇಗೆ ಎನ್ನುವ ರೋಚಕ ಕಥೆ ಇಲ್ಲಿದೆ.

ಅಸಲಿಗೆ ಆಗಿದ್ದೇನು?

ದರ್ಶನ್ ಅಭಿನಯದ ಕರಿಯ ಸಿನಿಮಾ 2003ರ ಜನವರಿ 3ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಮೊದಲ ಒಂದು ವಾರ ಸಿನಿಮಾಗೆ ಅಷ್ಟಾಗಿ ಜನ ಬರಲಿಲ್ಲ. ಆ ನಂತರ ನಿಧಾನವಾಗಿ ಪ್ರೇಕ್ಷಕರು ಥಿಯೇಟರ್‌ನತ್ತ ಬರಲು ಶುರು ಮಾಡಿದ್ದರು. ಸಿನಿಮಾ ಚೆನ್ನಾಗಿ ಓಡುತ್ತಿರುವಾಗಲೇ ದಿಢೀರ್ ಥಿಯೇಟರ್‍‌ಗಳಿಂದ ಎತ್ತಂಗಡಿ ಆಗಿತ್ತು. ನಿರ್ದೇಶಕ ಪ್ರೇಮ್ ಸಂದರ್ಶನ ಒಂದರಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ ಕೆಲವರ ರಾಜಕೀಯದಿಂದಾಗಿ, ಬೇರೆ ಸಿನಿಮಾ ಬಿಡುಗಡೆ ಮಾಡುವ ಉದ್ದೇಶದಿಂದ 'ಕರಿಯ' ಎತ್ತಂಗಡಿ ಆಗಿತ್ತು ಎಂದಿದ್ದಾರೆ.

ಸಿನಿಮಾದ ವಿತರಣೆ ಹಕ್ಕು 'ರಜಸ್ಸು ಕಂಬೈನ್ಸ್' ಬಳಿ ಇತ್ತು. ಥಿಯೇಟರ್‌ನಿಂದ ಸಿನಿಮಾ ಎತ್ತಂಗಡಿ ಆದ್ಮೇಲೆ 'ಇಕ್ಬಾಲ್ ಫಿಲ್ಮ್ಸ್' ಸಂಸ್ಥೆಯ ವಿತರಕರು ಕೇವಲ 6 ಲಕ್ಷ ರೂಪಾಯಿಗೆ ಬೆಂಗಳೂರು-ಕೋಲಾರ-ತುಮಕೂರು ಭಾಗದ ಹಕ್ಕುಗಳನ್ನು ಖರೀದಿಸಿದರು. ವಿತರಕ ಇಕ್ಬಾಲ್ ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಿ ಎರಡನೇ ಬಾರಿಗೆ ಮರು ಬಿಡುಗಡೆ ಮಾಡಿದರು. ಬೆನ್ನಲ್ಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಸಿನಿಮಾ ಸತತ ಒಂದು ವರ್ಷ (365 ದಿನಗಳು) ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಆಗಿನ ಕಾಲಕ್ಕೆ ಆ ಸಿನಿಮಾ 2.50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಆಯಿತು.

21 ವರ್ಷ ಕಳೆದಿದ್ದರೂ ನಿಲ್ಲದ ಕ್ರೇಜ್

ಸಿನಿಮಾ ರಿಲೀಸ್ ಆಗಿ 21 ಕಳೆದರೂ ಕರಿಯ ಸಿನಿಮಾ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ. 2024ರ ಆಗಸ್ಟ್ 30ರಂದು (ಶುಕ್ರವಾರ) ಈ ಸಿನಿಮಾ ಮತ್ತೊಮ್ಮೆ ಭರ್ಜರಿಯಾಗಿ ಮರು ಬಿಡುಗಡೆ ಆಗಿತ್ತು. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದ ಕಾರಣ ಅವರ ಹೊಸ ಸಿನಿಮಾಗಳ ಬಿಡುಗಡೆ ತಡವಾಗಿತ್ತು. ಇಂತಹ ಸಂದರ್ಭದಲ್ಲಿ 'ಕರಿಯ' ರೀ-ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ದೊಡ್ಡ ಹಬ್ಬದಂತಾಯಿತು. ಹಲವು ಥಿಯೇಟರ್‌ಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತು. ಸೂಪರ್ ಹಿಟ್ 'ಕೆಂಚಾಲೋ ಮಂಚಾಲೋ' ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಒಟ್ಟಾರೆ 56 ದಿನಕ್ಕೆ ಥಿಯೇಟರ್‌ನಿಂದ ಎತ್ತಂಗಡಿಯಾಗಿದ್ದ ಸಿನಿಮಾ ಒಂದು ಸರಿಯಾದ ಪ್ರಚಾರ ಮತ್ತು ಪ್ರೇಕ್ಷಕರ ಪ್ರೀತಿಯಿಂದ ರೀ-ರಿಲೀಸ್‌ನಲ್ಲಿ 365 ದಿನ ಓಡಿ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ದಾಖಲೆ ಬರೆದಿದ್ದು ಕನ್ನಡ ಚಿತ್ರರಂಗದ ಅಪರೂಪದ ಇತಿಹಾಸವಾಗಿದೆ.