Soumya Mendon Wedding: ಕನ್ನಡ ಕಿರುತೆರೆಯಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ, ಕೊನೆಯದಾಗಿ ‘ಅಮೃತಧಾರೆ’ ಧಾರಾವಾಹಿಯಲ್ಲಿ ಪೊಲೀಸ್ ಆಗಿ ನಟಿಸಿದ್ದ ನಟಿ ಸೌಮ್ಯ ಮೆಂಡನ್ ಇದೀಗ ಪ್ರೀತಿಸಿದ ಹುಡುಗ ನಟ ಸುವೇದ್ ದಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೌಮ್ಯ ಮೆಂಡನ್ ಮತ್ತು ಸುವೇದ್ ದಾಸ್
ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಜನಪ್ರಿಯ ಧಾರಾವಾಹಿಗಳ ಮೂಲಕ ಜನಮನ ಗೆದ್ದ ನಟಿ ಸೌಮ್ಯ ಮೆಂಡನ್. ತಮ್ಮ ಸಾಫ್ಟ್ ಪಾತ್ರಗಳ ಮೂಲಕವೇ ಜನರಿಗೆ ಹತ್ತಿರವಾಗಿದ್ದ ಉಡುಪಿ ಮೂಲಕ ನಟಿ ಸೌಮ್ಯ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ, ನಟ ಸುವೇದ್ ದಾಸ್ ಜೊತೆ ನವೆಂಬರ್ 22ರಂದು ಸೌಮ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವರ್ಷ ಅದ್ದೂರಿಯಾಗಿ ನಡೆದಿದ್ದ ಎಂಗೇಜ್ ಮೆಂಟ್
ಸುವೇದ್ ದಾಸ್ ಮತ್ತು ಸೌಮ್ಯ ಅವರ ನಿಶ್ಚಿತಾರ್ಥ ಕಳೆದ ವರ್ಷದ ಬಹಳ ಅದ್ದೂರಿಯಾಗಿ ನಡೆದಿದ್ದು. ಕಳೆದ ಡಿಸೆಂಬರ್ ನಲ್ಲೇ ಮದುವೆಯಾಗುವುದು ಎಂದು ನಿರ್ಧಾರವೂ ಆಗಿತ್ತು. ಆದರೆ ಕಾರಣಾಂತರಗಳಿಂದ ವಿಳಂಬವಾಗಿದ್ದು, ಇದೀಗ 2026ರ ನವಂಬರ್ 22ರಂದು ಈ ಜೋಡಿ ಕಟೀಲು ದೇಗುಲದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಳಿಕ ಅದ್ಧೂರಿಯಾಗಿ ರಿಸೆಪ್ಶನ್ ನಡೆದಿದೆ. ಮದುವೆ ಸಮಾರಂಭದಲ್ಲಿ ಕನ್ನಡ ಕಿರುತೆರೆಯ ನಟ-ನಟಿಯರು ಕೂಡ ಭಾಗಿಯಾಗಿದ್ದರು. ಕನ್ನಡ ಕಿರುತೆರೆಯ ನಟಿ ಪ್ರಿಯಾ ಆಚಾರ್, ಸಿತಾರಾ ತಮ್ಮ ಸಹ ನಟಿಯ ಮದುವೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು.
ಸೌಮ್ಯ ಮೆಂಡನ್ ನಟಿಸಿರುವ ಧಾರಾವಾಹಿಗಳು
ಸೌಮ್ಯ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾದಲ್ಲೂ ನಟಿಸಿದ್ದಾರೆ, ಜೀ ಕನ್ನಡ ವಾಹಿನಿಯ ‘ಪಾರು’, ‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’, ‘ಗೀತಾ’ ಹಾಗೂ ಸ್ಟಾರ್ ಸುವರ್ಣದ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಂಠಿ ತಂಗಿ ವಸು ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ಇನ್ನು ಇತ್ತೀಚೆಗೆ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೊತೆಗೆ ಕೆಲಸ ಮಾಡುವ, ಜೈದೇವ್ ನ್ನು ಬಲೆ ಬೀಸಲು ಗರ್ಲ್ ಫ್ರೆಂಡ್ ಆಗಿ ನಟಿಸುವ ಪೋಲೀಸ್ ಪಾತ್ರದಲ್ಲಿ ಸೌಮ್ಯ ನಟಿಸಿದ್ದರು.
ಇನ್ನು ಸೌಮ್ಯ ಪ್ರೀತಿಸಿ ಮದುವೆಯಾಗಿರುವ ಸುವೇದ್ ದಾಸ್ ಕೂಡ ನಟರಾಗಿದ್ದು, ಇವರು ಹಲವು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುವೇದ್ ‘ಕಸ್ತೂರಿ ನಿವಾಸ’ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಈ ಜೋಡಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ನಟರಾಗಿದ್ದು, ಬೆಂಗಳೂರಿನಲ್ಲಿಯೇ ಇಬ್ಬರ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಬಳಿಕ ಎರಡೂ ಕುಟುಂಬದವರು ಈ ಮದುವೆ ಒಪ್ಪಿಗೆ ನೀಡಿದ್ದರು. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡು ಈ ವರ್ಷ ಸಪ್ತಪದಿ ತುಳಿದಿದ್ದಾರೆ.
















