ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ದಕ್ಷಿಣ ಭಾರತದ ಹಿರಿಯ ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಬಹಳ ವರ್ಷಗಳ ಕಾಲ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ, ಅದೇ ಸಮಯದಲ್ಲಿ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದರು. ಪತಿಯ ನಿಧನದ ಬಳಿಕ ಅವರ ಸಾವಿನ ಕುರಿತು ಹಲವು ರೀತಿಯ ಸುದ್ದಿಗಳು ಹಾಗೂ ಊಹಾಪೋಹಗಳು ಹರಿದಾಡಿದ್ದವು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ತಾವು ಹಾಗೂ ಕುಟುಂಬ ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಪತಿಯನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದ್ದೆವು!
ಸಂದರ್ಶನದಲ್ಲಿ ತಮ್ಮ ಪತಿಯ ಆರೋಗ್ಯದ ಸ್ಥಿತಿಯನ್ನು ನೆನಪಿಸಿಕೊಂಡ ಮೀನಾ ಭಾವುಕರಾಗಿದ್ದಾರೆ. ವಿದ್ಯಾಸಾಗರ್ ಅವರಿಗೆ ಶ್ವಾಸಕೋಶ ಕಸಿ (Lung Transplant) ಅಗತ್ಯವಿತ್ತು. ಆದರೆ ಇಂತಹ ದೊಡ್ಡ ವೈದ್ಯಕೀಯ ಪ್ರಕ್ರಿಯೆ ಎಷ್ಟು ಸಂಕೀರ್ಣವಾಗಿರುತ್ತದೆ ಎಂಬುದು ಆರಂಭದಲ್ಲಿ ತಮಗೆ ತಿಳಿದಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಚಿಕಿತ್ಸೆ ಹಲವು ದಿನಗಳ ಕಾಲ ಮುಂದುವರಿದಂತೆ ಅವರ ಪತಿಯ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿತ್ತು. ಒಂದು ಹಂತದಲ್ಲಿ ದೇಹ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಪರಿಸ್ಥಿತಿ ಎದುರಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಕುಟುಂಬ ಕೊನೆಯವರೆಗೂ ಹೋರಾಡಿತ್ತು ಎಂದು ಮೀನಾ ತಿಳಿಸಿದ್ದಾರೆ.
ಲಂಗ್ಸ್‌ಗಾಗಿ ದೇಶಾದ್ಯಂತ ಹುಡುಕಾಟ!
ಪತಿಗೆ ಸೂಕ್ತವಾದ ಶ್ವಾಸಕೋಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಮೀನಾ ಭಾರತದೆಲ್ಲೆಡೆ ಪ್ರಯತ್ನ ನಡೆಸಿದ್ದರಂತೆ. ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಲಂಗ್ಸ್‌ಗಾಗಿ ಹುಡುಕಾಟ ನಡೆಸಿದ್ದಾಗಿ ಅವರು ಹೇಳಿದ್ದಾರೆ. ಒಂದು ಹಂತದಲ್ಲಿ ಉತ್ತಮ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಯೋಚನೆಯೂ ಕುಟುಂಬಕ್ಕೆ ಬಂದಿತ್ತು. ಅಲ್ಲಿ ಸಂಬಂಧಿಕರು ಹಾಗೂ ವೈದ್ಯರೂ ಇದ್ದ ಕಾರಣ ಆ ಸಾಧ್ಯತೆಯನ್ನು ಪರಿಶೀಲಿಸಿದ್ದರು. ಆದರೆ ಅಲ್ಲಿಗೆ ತೆರಳಿದರೂ ನಡೆಯುತ್ತಿರುವ ಚಿಕಿತ್ಸೆಯೇ ಮುಂದುವರಿಯಬೇಕಾಗುತ್ತದೆ ಹಾಗೂ ಆ ಸ್ಥಿತಿಯಲ್ಲಿ ಅವರನ್ನು ಸ್ಥಳಾಂತರಿಸುವುದು ಸೂಕ್ತವಲ್ಲ ಎಂಬ ಸಲಹೆ ವೈದ್ಯರಿಂದ ಬಂದಿತ್ತು. ಹೀಗಾಗಿ ಭಾರತದಲ್ಲೇ ಉಳಿದುಕೊಂಡು ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಕೊಡಿಸಲು ಕುಟುಂಬ ನಿರ್ಧರಿಸಿತ್ತು.
ಹಲವು ಬಾರಿ ಟ್ರಾನ್ಸ್‌ಪ್ಲಾಂಟ್‌ಗೆ ಸಿದ್ಧರಾಗಿಯೂ ನಿರಾಸೆ!
ಶ್ವಾಸಕೋಶ ಕಸಿ ಪ್ರಕ್ರಿಯೆಯಲ್ಲಿ ಹಲವು ವೈದ್ಯಕೀಯ ಮಾನದಂಡಗಳು ಹಾಗೂ ಹೊಂದಾಣಿಕೆಯ ಅವಶ್ಯಕತೆಗಳಿರುತ್ತವೆ. ಮೀನಾ ಅವರ ಪ್ರಕಾರ, ಕೆಲವು ಬಾರಿ ಲಂಗ್ಸ್ ಲಭ್ಯವಾಗಿದೆ ಎಂಬ ಮಾಹಿತಿ ಬಂದರೂ, ಅಂತಿಮ ಹಂತದಲ್ಲಿ ಅಗತ್ಯ ಹೊಂದಾಣಿಕೆ ಆಗದೆ ಕಸಿ ಸಾಧ್ಯವಾಗಿರಲಿಲ್ಲ. ಮೂರು-ನಾಲ್ಕು ಬಾರಿ ಟ್ರಾನ್ಸ್‌ಪ್ಲಾಂಟ್‌ಗೆ ಸಿದ್ಧರಾಗಿ ಕೊನೆಯ ಕ್ಷಣದಲ್ಲಿ ಹೊಂದಾಣಿಕೆಯಾಗದೆ ಹಿಂದಿರುಗಬೇಕಾದ ಸಂದರ್ಭಗಳೂ ಎದುರಾಗಿದ್ದವು ಎಂದು ನಟಿ ಹೇಳಿದ್ದಾರೆ. ಈ ಸಂಪೂರ್ಣ ಪರಿಸ್ಥಿತಿ ತಮ್ಮ ಹಾಗೂ ಕುಟುಂಬದವರಿಗೆ ಹೊಸದಾಗಿತ್ತು. ಏನು ಮಾಡಬೇಕು, ಹೇಗೆ ಎದುರಿಸಬೇಕು ಎಂಬುದೇ ಅರ್ಥವಾಗದಷ್ಟು ಕಠಿಣ ಸಮಯವಾಗಿತ್ತು ಎಂದು ಮೀನಾ ನೆನಪಿಸಿಕೊಂಡಿದ್ದಾರೆ.
‘ಅವರನ್ನು ಉಳಿಸಿಕೊಳ್ಳಲು ಶತವಿಧವಾಗಿ ಪ್ರಯತ್ನಿಸಿದೆವು’
ಪತಿಯ ಆರೋಗ್ಯಕ್ಕಾಗಿ ಸಾಧ್ಯವಿದ್ದ ಪ್ರತಿಯೊಂದು ಪ್ರಯತ್ನವನ್ನೂ ಮಾಡಿದ್ದರೂ, ಕೊನೆಗೆ ವಿಧಿಯ ಮುಂದೆ ಕುಟುಂಬ ಸೋಲಬೇಕಾಯಿತು ಎಂದು ಮೀನಾ ಭಾವುಕರಾಗಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ದುರದೃಷ್ಟವಶಾತ್ ವಿದ್ಯಾಸಾಗರ್ ತಮ್ಮನ್ನು ಅಗಲಿದರು ಎಂದು ಅವರು ಹೇಳಿದ್ದಾರೆ. ಪತಿಯ ನಿಧನದ ಬಳಿಕ ತಾವು ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಆ ನೋವಿನಿಂದ ಸಂಪೂರ್ಣವಾಗಿ ಹೊರಬರುವುದು ಸುಲಭವಾಗಿರಲಿಲ್ಲ. ಇಂದಿಗೂ ಕೆಲವು ಸವಾಲುಗಳಿವೆ. ಆದರೆ ಸ್ನೇಹಿತರು ಹಾಗೂ ಸಿನಿಮಾಗಳ ಮೂಲಕ ನಿಧಾನವಾಗಿ ಆ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಮೀನಾ ಹೇಳಿದ್ದಾರೆ.
ಪತಿಯ ಸಾವಿನ ಬಗ್ಗೆ ಹಲವು ವದಂತಿಗಳು
ವಿದ್ಯಾಸಾಗರ್ ಅವರ ನಿಧನದ ಬಳಿಕ ಅವರ ಸಾವಿಗೆ ಸಂಬಂಧಿಸಿದಂತೆ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಮೀನಾ ನೀಡಿರುವ ಹೇಳಿಕೆ, ಪತಿಯ ಆರೋಗ್ಯ ಸ್ಥಿತಿ ಹಾಗೂ ಅವರನ್ನು ಉಳಿಸಿಕೊಳ್ಳಲು ಕುಟುಂಬ ನಡೆಸಿದ ಹೋರಾಟದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಸುಮಾರು ಮೂರು ದಶಕಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿರುವ ಮೀನಾ, ವೈಯಕ್ತಿಕ ಜೀವನದ ಈ ಕಠಿಣ ಅಧ್ಯಾಯವನ್ನು ಇಷ್ಟು ವರ್ಷಗಳ ಬಳಿಕ ಮನಬಿಚ್ಚಿ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.


