Tragic End of Kannada Actress: 80 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕನ್ನಡದ ಮೇರು ನಟಿಯೊಬ್ಬರು ಕೇವಲ ಒಂದೇ ಒಂದು ತಪ್ಪು ಡೈಲಾಗ್ ಹೇಳಿದ್ದಕ್ಕೆ ಪ್ರಾಣ ಕಳೆದುಕೊಂಡರು ಎಂದರೆ ನಂಬುತ್ತೀರಾ? ಅಂದಹಾಗೆ ಆ ದುರಂತ ನಾಯಕಿಯ ಬದುಕಿನ ನೋವಿನ ಕಥೆ ಇಲ್ಲಿದೆ ನೋಡಿ..
ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಖ್ಯಾತ ನಟಿ 'ಮಿನುಗುತಾರೆ' ಕಲ್ಪನಾ ಅವರು ಬರೋಬ್ಬರಿ 80 ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ನಾಟಕವೊಂದರಲ್ಲಿ ಹೇಳಿದ ಕೇವಲ ಒಂದೇ ಒಂದು ತಪ್ಪು ಡೈಲಾಗ್ನಿಂದ ಉಂಟಾದ ಘಟನೆ ಅವರ ದುರಂತ ಅಂತ್ಯಕ್ಕೆ ಕಾರಣವಾಯಿತು ಎಂಬುದು ಇಂದಿಗೂ ಚಿತ್ರಪ್ರೇಮಿಗಳನ್ನು ಕಾಡುವ ನೋವಿನ ಸಂಗತಿಯಾಗಿದೆ.
ಜುಲೈ 18, 1943ರಂದು ಮಂಗಳೂರಿನಲ್ಲಿ ಜನಿಸಿದ ಕಲ್ಪನಾ ಅವರ ತಂದೆ ಎನ್.ಎಸ್. ಕೃಷ್ಣಮೂರ್ತಿ ಹಾಗೂ ತಾಯಿ ಎಂ. ಜಾನಕಮ್ಮ. ಇವರ ಸಹೋದರ ದಿವಾಕರ್. ತುಳು ಮಾತೃಭಾಷೆಯಾಗಿದ್ದ ಇವರಿಗೆ ಚಿಕ್ಕಪ್ಪ ಮತ್ತು ಚಿಕ್ಕಮ್ಮ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಕಾರಣದಿಂದ ಬಾಲ್ಯದಿಂದಲೇ ರಂಗಭೂಮಿಯ ನಂಟು ಬೆಳೆಯಿತು. ನಾಲ್ಕನೇ ತರಗತಿಯಲ್ಲಿದ್ದಾಗಲೇ 'ಗೀತಾ' ಎಂಬ ನಾಟಕದಲ್ಲಿ ಅಭಿನಯಿಸಿದ್ದ ಇವರು, 'ರತ್ನಗಿರಿ ರಹಸ್ಯ' ಚಿತ್ರವನ್ನು ನೋಡಿದ ಬಳಿಕ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿಂದ ಭರತನಾಟ್ಯ ನೃತ್ಯವನ್ನು ಕಲಿತರು.
ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು 'ಶರಪಂಜರ'
ಹಾಸ್ಯ ನಟ ನರಸಿಂಹರಾಜು ಅವರ ಸಹಾಯದಿಂದ ಸಿನಿಮಾ ರಂಗ ಪ್ರವೇಶಿಸಿದ ಕಲ್ಪನಾ, 1963ರಲ್ಲಿ ಬಿ.ಆರ್. ಪಂತುಲು ಅವರ 'ಸಾಕುಮಗಳು' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಆ ಬಳಿಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಬೆಳ್ಳಿಮೋಡ' ಚಿತ್ರ ಇವರಿಗೆ ಬಹಳಷ್ಟು ಖ್ಯಾತಿ ತಂದುಕೊಟ್ಟಿತು. ಅದೇ ಚಿತ್ರದ ಹಾಡಿನಿಂದಾಗಿ ಇವರಿಗೆ 'ಮಿನುಗುತಾರೆ' ಎಂಬ ಬಿರುದು ಕೂಡ ಲಭಿಸಿತು. ನಂತರ ಹಿಂತಿರುಗಿ ನೋಡದ ಕಲ್ಪನಾ ಅವರಿಗೆ 'ಶರಪಂಜರ' ಚಿತ್ರ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. 'ಬೆಳ್ಳಿಮೋಡ', 'ಹಣ್ಣೆಲೆ ಚಿಗುರಿದಾಗ' ಹಾಗೂ 'ಶರಪಂಜರ' ಚಿತ್ರಗಳಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಮತ್ತು 'ಯಾವ ಜನ್ಮದ ಮೈತ್ರಿ' ಚಿತ್ರಕ್ಕೆ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ ದೊರಕಿವೆ. 'ಎರಡು ಕನಸು', 'ಗಂಧದ ಗುಡಿ', 'ಗೆಜ್ಜೆಪೂಜೆ', 'ಬಯಲುದಾರಿ' ಇವರ ಜನಪ್ರಿಯ ಚಿತ್ರಗಳಾಗಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಇವರು ಒಟ್ಟು 80 ಚಿತ್ರಗಳಲ್ಲಿ ನಟಿಸಿದ್ದಾರೆ.
ತಪ್ಪಾದ ಡೈಲಾಗ್ ಹೇಳಿದ ಕಲ್ಪನಾ
ಕೆಲವು ವರ್ಷಗಳ ನಂತರ ಸಿನಿಮಾ ರಂಗದಲ್ಲಿ ಬೇಡಿಕೆ ಕಡಿಮೆಯಾದಾಗ ಉತ್ತರ ಕರ್ನಾಟಕದ ಗುಡಿಗೇರಿ ಬಸವರಾಜ್ ನಾಟಕ ಕಂಪನಿಯನ್ನು ಸೇರಿದ ಕಲ್ಪನಾ, 'ಅನುರಾಗ ಬಂಧನ' ಚಿತ್ರದಲ್ಲಿ ಕಡೆಯದಾಗಿ ಅಭಿನಯಿಸಿದರು. ನಂತರ ಗುಡಿಗೇರಿ ಬಸವರಾಜ್ ಅವರನ್ನು ವಿವಾಹವಾದರು. ಆದರೆ, 'ಕುಮಾರರಾಮ' ನಾಟಕದ ಪ್ರದರ್ಶನದಲ್ಲಿ "ಹುಲ್ಲು ತಿನ್ನು ರಾಮ" ಎಂಬ ತಪ್ಪಾದ ಡೈಲಾಗ್ ಹೇಳಿದ್ದರಿಂದ ಸಿಟ್ಟಾದ ಬಸವರಾಜ್, ಕಲ್ಪನಾ ಅವರ ಕಪಾಳಕ್ಕೆ ಒಂದು ಏಟು ಹೊಡೆದರೆನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಕಲ್ಪನಾ, ಗೋಟೂರು ಐಬಿಗೆ ತೆರಳಿ 56 ನಿದ್ದೆ ಮಾತ್ರೆಗಳನ್ನು ಸೇವಿಸಿ ಪ್ರಾಣ ಬಿಟ್ಟಿದ್ದಾರೆ ಎಂದು ಪೋಸ್ಟ್ ಮಾರ್ಟಮ್ ವರದಿಯಲ್ಲಿ ಉಲ್ಲೇಖವಾಗಿದೆ. ಮತ್ತೊಂದೆಡೆ, ಅವರು ತಮ್ಮ ವಜ್ರದ ಉಂಗುರದ ಹರಳನ್ನು ನುಂಗಿ ಸಾವನ್ನಪ್ಪಿದ್ದಾರೆ ಎಂದೂ ಕೆಲವರು ಹೇಳುತ್ತಾರೆ. ಇಂತಹ ಖ್ಯಾತ ನಟಿಯ ಬದುಕು ಹೀಗೆ ದುರಂತದಲ್ಲಿ ಅಂತ್ಯಗೊಂಡಿದ್ದು ಅತ್ಯಂತ ದುಃಖಕರ ಸಂಗತಿಯಾಗಿದೆ.
ಮಹಿಳಾ ಅಭಿಮಾನಿಗಳ ಮೇಲೆ ಆಳವಾದ ಪ್ರಭಾವ
ಕಲ್ಪನಾ ಅವರು ಕೇವಲ ತಮ್ಮ ನಟನಾ ಪ್ರತಿಭೆಗಷ್ಟೇ ಸೀಮಿತವಾಗಿರದೆ, 60 ಮತ್ತು 70ರ ದಶಕದಲ್ಲಿ ಕನ್ನಡ ನಾಡಿನ ಬಹುದೊಡ್ಡ ಫ್ಯಾಷನ್ ಐಕಾನ್ ಆಗಿಯೂ ಮಿಂಚಿದ್ದರು. ಸಿನಿಮಾಗಳಲ್ಲಿ ಅವರು ಉಡುತ್ತಿದ್ದ ವಿಶಿಷ್ಟ ಶೈಲಿಯ ಸೀರೆಗಳು, ವಿಭಿನ್ನ ವಿನ್ಯಾಸದ ರವಿಕೆಗಳು, ಆಕರ್ಷಕ ಕೇಶವಿನ್ಯಾಸ ಹಾಗೂ ಕಣ್ಣಿನ ಮೇಕಪ್ ಆ ಕಾಲದ ಯುವತಿಯರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದ್ದವು. ಎಷ್ಟರಮಟ್ಟಿಗೆಂದರೆ, ಮಾರುಕಟ್ಟೆಗಳಲ್ಲಿ ಮತ್ತು ಟೈಲರ್ಗಳ ಬಳಿ 'ಕಲ್ಪನಾ ಸೀರೆ', 'ಕಲ್ಪನಾ ಬ್ಲೌಸ್' ಹಾಗೂ 'ಕಲ್ಪನಾ ಹೇರ್ಸ್ಟೈಲ್' ಎಂದೇ ವಿಶೇಷ ಬೇಡಿಕೆ ಬರುವಷ್ಟು ದೊಡ್ಡ ಟ್ರೆಂಡ್ ಅನ್ನು ಅವರು ಸೃಷ್ಟಿಸಿದ್ದರು. ಸಾಂಪ್ರದಾಯಿಕ ಸೊಬಗು ಮತ್ತು ಆಧುನಿಕ ಶೈಲಿಯೆರಡನ್ನೂ ಪರದೆಯ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸುತ್ತಿದ್ದ ಅವರ ವೇಷಭೂಷಣ, ಅಂದಿನ ಮಹಿಳಾ ಅಭಿಮಾನಿಗಳ ಮೇಲೆ ಆಳವಾದ ಪ್ರಭಾವ ಬೀರಿತ್ತು.








