Meghana Raj: ನಟ ಸೃಜನ್ ಲೋಕೇಶ್ ಅವರ ‘ಸೃಜ ಇದ್ದಲ್ಲಿ ಮಜಾ’ (SIM) ಡಿಜಿಟಲ್ ಶೋನಲ್ಲಿ ಪಾಲ್ಗೊಂಡ ನಟಿ ಮೇಘನಾ ರಾಜ್, ತಮ್ಮ ಸಾಮಾನ್ಯ ಬಾಲ್ಯದ ದಿನಗಳು ಹಾಗೂ ಸೋಶಿಯಲ್ ಮೀಡಿಯಾ ಟ್ರೋಲ್ಗಳನ್ನು ನಿಭಾಯಿಸುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಂದಹಾಗೆ ನೆಗೆಟಿವ್ ಕಮೆಂಟ್ಗಳ ಬಗ್ಗೆ ಮೇಘನಾ ಏನಂದರು? ಇಲ್ಲಿದೆ ವಿವರ.
ಚಿತ್ರರಂಗದ ಖ್ಯಾತ ತಾರಾ ದಂಪತಿಗಳ ಮಗಳಾಗಿ ಬೆಳೆದರೂ ತಮಗೆ 'ಸ್ಟಾರ್ ಕಿಡ್' ಎಂಬ ಹಮ್ಮು ಇರಲಿಲ್ಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎದುರಾಗುವ ನೆಗೆಟಿವಿಟಿಯಿಂದ ತಾನು ಮಾಡುವುದೇನು? ಎಂಬುದರ ಕುರಿತು ನಟಿ ಮೇಘನಾ ರಾಜ್ ಅತ್ಯಂತ ನೇರ ಮತ್ತು ಸ್ಪಷ್ಟವಾಗಿ ಮಾತನಾಡಿದ್ದಾರೆ.
ನಟ ಸೃಜನ್ ಲೋಕೇಶ್ ಅವರ ಹೊಚ್ಚ ಹೊಸ ‘ಸುಜಾ ಇದ್ದಲ್ಲಿ ಮಜಾ’ (SIM) ಡಿಜಿಟಲ್ ಶೋನಲ್ಲಿ ಭಾಗವಹಿಸಿದ್ದ ಮೇಘನಾ, ತಮ್ಮ ವೈಯಕ್ತಿಕ ಜೀವನ ಮತ್ತು ಸೋಶಿಯಲ್ ಮೀಡಿಯಾ ಟ್ರೋಲ್ಸ್ಗಳನ್ನು ನಿಭಾಯಿಸುವ ಬಗ್ಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಅಪ್ಪ-ಅಮ್ಮನ ಸಿನಿಮಾ ಮತ್ತು ಮನೆಯ ನಡುವೆ ಸ್ಪಷ್ಟ ಗೆರೆ ಇತ್ತು
ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರ ಮಗಳಾಗಿರುವ ಮೇಘನಾ ರಾಜ್, ಬಾಲ್ಯದಲ್ಲಿ ತಮಗೆ ಯಾವುದೇ ಪ್ರಚಾರದ ಗುಂಗು ಇರಲಿಲ್ಲ ಎಂದಿದ್ದಾರೆ.
"ನಮ್ಮ ಮನೆಯಲ್ಲಿ ಅಪ್ಪ-ಅಮ್ಮನ ವೃತ್ತಿಜೀವನ (ಸಿನಿಮಾ) ಮತ್ತು ವೈಯಕ್ತಿಕ ಜೀವನದ ನಡುವೆ ಯಾವಾಗಲೂ ಒಂದು ಸ್ಪಷ್ಟ ಗೆರೆ ಇತ್ತು. ಅವೆರಡೂ ಯಾವತ್ತೂ ಒಂದಕ್ಕೊಂದು ಬೆರೆಯಲೇ ಇಲ್ಲ. ಅಪ್ಪ-ಅಮ್ಮ ಶೂಟಿಂಗ್ಗೆ ಹೋಗಿ ಬರುವುದು ನಮ್ಮ ಮನೆಯಲ್ಲಿ ಅತಿ ದೊಡ್ಡ ವಿಷಯವೇ ಆಗಿರಲಿಲ್ಲ, ಅದು ಬೇರೆ ಕೆಲಸಗಳಷ್ಟೇ ಸಹಜವಾಗಿತ್ತು. ಹೀಗಾಗಿ ನಾನು 'ಸ್ಟಾರ್ ಕಿಡ್' ಎಂಬ ಹಮ್ಮಿನಿಂದ ಬೆಳೆಯಲಿಲ್ಲ. ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಮನೆಯಂತೆಯೇ ನನ್ನ ಬಾಲ್ಯ ಕಳೆಯಿತು" ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.
ನೆಗೆಟಿವ್ ಕಮೆಂಟ್ಗಳನ್ನು ಕ್ಯಾರೇ ಮಾಡಲ್ಲ, ಇಗ್ನೋರ್ ಮಾಡ್ತೀನಿ!
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿ ಹರಡುವ ನೆಗೆಟಿವಿಟಿ ಮತ್ತು ಟ್ರೋಲ್ಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಮೇಘನಾ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.
"ನಾನು ಆ ನೆಗೆಟಿವ್ ಕಮೆಂಟ್ಗಳನ್ನು ಕ್ಯಾರೇ ಮಾಡಲ್ಲ, ಸುಮ್ಮನೆ ಇಗ್ನೋರ್ (ನಿರ್ಲಕ್ಷ್ಯ) ಮಾಡ್ತೀನಿ, ಅಷ್ಟೇ! ಹಿಂದಿನ ಕಾಲದಲ್ಲಾದರೆ ಯಾರಾದರೂ ನಮ್ಮನ್ನು ಬೈದುಕೊಂಡರೆ ಅದು ಅವರ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಉಳಿಯುತ್ತಿತ್ತು. ಆದರೆ ಇಂದು ಸೋಶಿಯಲ್ ಮೀಡಿಯಾ ಬಂದಿರುವುದರಿಂದ ನೇರವಾಗಿ ಕಮೆಂಟ್ ಬಾಕ್ಸ್ನಲ್ಲಿ ಬರೆಯುತ್ತಾರೆ. ಇಂಥ ಸಂದರ್ಭದಲ್ಲಿ ನಾವು ‘ಥಿಕ್ ಸ್ಕಿನ್’ (ದಪ್ಪ ಚರ್ಮ) ಬೆಳೆಸಿಕೊಳ್ಳುವುದು ಅನಿವಾರ್ಯ. ಯಾರ ಮಾತಿಗೂ ಕುಗ್ಗದೆ ಇರುವುದನ್ನು ಕಲಿಯಬೇಕು. ಒಂದು ವೇಳೆ ಅವರ ವರ್ತನೆ ಮಿತಿಮೀರಿ ತೀರಾ ತೊಂದರೆ ಎನಿಸಿದರೆ, ಸುಮ್ಮನೆ ಕೂರದೆ ಸೈಬರ್ ಕ್ರೈಂಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವುದೇ ಬೆಸ್ಟ್" ಎಂದು ಮೇಘನಾ ರಾಜ್ ಕಟುವಾಗಿ ಹೇಳಿದ್ದಾರೆ.
ಯಾವುದೇ ನಕಾರಾತ್ಮಕ ವಿಚಾರಗಳಿಗೆ ಕಿವಿಗೊಡದೆ, ತಮ್ಮ ಕೆಲಸ ಹಾಗೂ ಕುಟುಂಬದ ಕಡೆಗೆ ಮಾತ್ರ ಗಮನ ಹರಿಸುವ ಮೇಘನಾ ಅವರ ಈ ಸ್ಪಷ್ಟ ನಿಲುವು ಇದೀಗ ಅಭಿಮಾನಿಗಳಿಂದ ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೇಘನಾ ಮನದಾಳದ ಮಾತು ಮತ್ತು ವಿಶೇಷ ಉಡುಗೊರೆ
ಆಟ-ತುಂಟಾಟಗಳ ನಂತರ ಮೇಘನಾ ರಾಜ್ ಅತ್ಯಂತ ಭಾವುಕರಾಗಿ ಮತ್ತು ಖುಷಿಯಿಂದ ಮಾತನಾಡಿದರು.
"ನಾನು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಒಂದು ರೀತಿಯಲ್ಲಿ ಇರಬೇಕಾಗುತ್ತದೆ. ಆದರೆ ಈ ಶೋನಲ್ಲಿ ಯಾವುದೇ ಮುಖವಾಡ (Mask) ಇಲ್ಲದೆ ಕೇವಲ ‘ನಾನಾಗಿ’ ಇರಲು ಸಾಧ್ಯವಾಯಿತು. ಇತ್ತೀಚಿನ ದಿನಗಳಲ್ಲಿ ನಾನು ಇಷ್ಟೊಂದು ಮನಸ್ಸು ಬಿಚ್ಚಿ, ಹೊಟ್ಟೆ ತುಂಬಾ ನಕ್ಕಿರಲೇ ಇಲ್ಲ. ಈ ಮನೆಯಲ್ಲೊಂದು ಅದ್ಭುತವಾದ ಪಾಸಿಟಿವ್ ವೈಬ್ ಇದೆ" ಎಂದು ಸಂತಸ ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಸೃಜನ್ ಅವರು ತಮ್ಮ ಕುಟುಂಬದ ಪರವಾಗಿ (ತಾಯಿ ಗಿರಿಜಮ್ಮ ಅವರ ಪ್ರೀತಿಯ ಆಶೀರ್ವಾದದೊಂದಿಗೆ ಮತ್ತು ಸಹೋದರಿ ಬಿಡಿಸಿದ ಸುಂದರ ಪೇಂಟಿಂಗ್ ಹಾಗೂ ಒಂದು ಗಿಡವನ್ನು) ಮೇಘನಾಗೆ ಪ್ರೀತಿಯ ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದರು.












