ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ| ಕಾಂಗ್ರೆಸ್ ಪ್ರಣಾಳಿಕೆ ತರಾಟೆಗೆ ತೆಗದುಕೊಂಡ ಪ್ರಧಾನಿ ಮೋದಿ| ರಾಜ್ಯದ ಮೈತ್ರಿ ಸರ್ಕಾರದ ಚಳಿ ಬಿಡಿಸಿದ ಪ್ರಧಾನಿ ಮೋದಿ| ‘ದೇಶ ವಿಕಾಸ ಮತ್ತು ಆತ್ಮವಿಶ್ವಾಸದ ಹಾದಿಯಲ್ಲಿ ಮುನ್ನುಗ್ಗುತ್ತಿದೆ’| ‘ಲಿಂಗಾಯತ ಸಮಾಜ ಒಡೆಯಲು ಯತ್ನಿಸಿದವರಿಗೆ ಬುದ್ಧಿ ಕಲಿಸಿ’|
ಬಾಗಲಕೋಟೆ(ಏ.18): ಲೋಕಸಭೆ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಇಂದು ಬಾಗಲಕೋಟೆಯಲ್ಲಿ ವಿಜಯ್ ಸಂಕಲ್ಪ ಯಾತ್ರೆ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿದರು.
"
ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರು, ಬೆಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಬಾಗಲಕೋಟೆಯಲ್ಲಿ ಚುನಾವಣೆಯ ಶಂಖನಾದ ಮೊಳಗಿಸಿದರು.
ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ವಿಶ್ವಗುರು ಬಸವಣ್ಣ ಅವರನ್ನು ನೆನೆದು ಭಾಷಣ ಆರಂಭಿಸಿದರು.
ಕಳೆದ 5 ವರ್ಷದಲ್ಲಿ ಭಾರತ ವಿಕಾಸದ ಮತ್ತು ಆತ್ಮವಿಶ್ವಾಸದ ಹಾದಿಯಲ್ಲಿ ನಡೆದಿದ್ದು, ಪ್ರತಿಯೊಬ್ಬ ಭಾರತೀಯನ ಶ್ರಮ ಇದರ ಹಿಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಐದು ವರ್ಷಗಳಲ್ಲಿ ಭಾರತದ ಚಹರೆ ಬದಲಾಗಿದ್ದು, ದೇಶ ವಿಕಾಸದ ಹಾದಿಯಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಆಯುಷ್ಮಾನ್ ಭಾರತ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಮುಂತಾದ ಹತ್ತು ಹಲವು ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ದೇಶದ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು. ಕರ್ನಾಟಕದ ಮುಖ್ಯಮಂತ್ರಿ ಹೋದಲ್ಲಿ ಬಂದಲ್ಲಿ ಕಣ್ಣೀರು ಹಾಕುತ್ತಾರೆಯೇ ಹೊರತು ರೈತರಿಗಾಗಿ ಏನನ್ನೂ ಮಾಡಿಲ್ಲ ಎಂದು ಮೋದಿ ಕಿಡಿಕಾರಿದರು.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಕೀಳು ರಾಜಕಾರಣದಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಜನಸೇವೆ ಮರೆತು ಲೂಟಿಯಲ್ಲಿ ನಿರತವಾಗಿವೆ ಎಂದು ಪ್ರಧಾನಿ ಹರಿಹಾಯ್ದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಇಲ್ಲಿನ ಸಿಎಂ ಒಂದಲ್ಲ ಒಂದು ರ‌್ಯಾಲಿಯಲ್ಲಿ ಕಣ್ಣೀರು ಹಾಕುತ್ತಲೇ ಇದ್ದಾರೆ. ಕೇವಲ ಕಣ್ಣೀರು ಹಾಕುವ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಿಚಾಯಿಸಿದರು.
ಈ ಡ್ರಾಮಾದಲ್ಲಿ ಅಭಿವೃದ್ಧಿಯ ಮಾತೇ ಇಲ್ಲವಾಗಿದ್ದು, ಕೇವಲ ಸೇಡು, ದ್ವೇಷ ಇದೆ ಎಂದು ಪ್ರಧಾನಿ ಮೋದಿ ಹರಿಹಾಯ್ದರು. ಸಮರ್ಥವಾದ ಸರ್ಕಾರ ಹೇಗಿರುತ್ತದೆ ಎಂದು ದೆಹಲಿಯತ್ತ ನೋಡಿ. ಅಸಮರ್ಥ ಸರ್ಕಾರ ಹೇಗಿರುತ್ತದೆ ಎಂಬುವುದನ್ನು ಬೆಂಗಳೂರಿನತ್ತ ನೋಡಿ ಎಂದು ಮೋದಿ ಜನತೆಗೆ ಕರೆ ನೀಡಿದರು.
ನವಭಾರತದ ನೀತಿ ಇದೀಗ ಬದಲಾಗಿದ್ದು, ಭಯೋತ್ಪಾದಕರ ಅಡುಗುತಾಣಗಳಿಗೆ ನುಗ್ಗಿ ಅವರನ್ನು ಹೊಡೆದುರುಳಿಸುವ ಛಾತಿ ಭಾರತಕ್ಕಿದೆ ಎಂದು ಮೋದಿ ಬಾಲಾಕೋಟ್ ದಾಳಿಯನ್ನು ಉಲ್ಲೇಖಿಸಿದರು.
2004-19ರ ಅವಧಿಯಲ್ಲಿನ ಭಾರತದ ವಿಕಾಸ ಯಾತ್ರೆಯನ್ನು ಇಡೀ ವಿಶ್ವ ಗಮನಿಸಿದ್ದು, ಇದಕ್ಕೆ ನಾನು ದೇಶದ ಜನತೆಗೆ ಧನ್ಯವಾದ ಸಲ್ಲಿಸಲು ಬಯಸುವುದಾಗಿ ಪ್ರಧಾನಿ ಮೋದಿ ಹೇಳಿದರು.
ಚುನಾವಣೆಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ದೇಶದ ಸುರಕ್ಷತೆ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂದು ಮೋದಿ ಜನರನ್ನು ಎಚ್ಚರಿಸಿದರು.
ಬಾಲಾಕೊಟ್ ವಾಯುದಾಳಿ ಕುರಿತು ಸಾಕ್ಷಿ ಕೇಳುತ್ತಿರುವ ಪ್ರತಿಪಕ್ಷಗಳು ಒಂದೆಡೆಯಾದರೆ, ಸೈನ್ಯವನ್ನು ಸದೃಢಗೊಳಿಸಲು ಶ್ರಮಿಸುತ್ತಿರುವ ಬಿಜೆಪಿ ಮತ್ತೊಂದೆಡೆ ಇದೆ ಎಂದು ಮೋದಿ ನುಡಿದರು.
ರಾಜ್ಯದ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮಾಜವನ್ನು ಒಡೆಯುವ ವಿಫಲ ಯತ್ನ ನಡೆಸಿದ್ದು, ಇದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಮೋದಿ ಹರಿಹಾಯ್ದರು.
ಸದೃಢ ದೇಶ ನಿರ್ಮಾಣಕ್ಕಾಗಿ ಸದೃಢ ಸರ್ಕಾರದ ಅವಶ್ಯಕತೆ ಇದ್ದು, ಈ ಬಾರಿಯ ಲೋಕಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದರು.
