ಮಂಗಳೂರಿನಲ್ಲಿ ಪ್ರಧಾನಿ ಮೋದಿ ಚುನಾವಣೆ ಪ್ರಚಾರ| ಕೇಸರಿಮಯವಾದ ಮಂಗಳೂರು ನಗರ| ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡ ಪ್ರಧಾನಿ ಮೋದಿ| ‘ವಂಶೋದಯ ರಾಜಕಾರಣ ವರ್ಸಸ್ ಅಂತ್ಯೋದಯದ ರಾಜಕಾರಣ ನಡುವಿನ ಯುದ್ಧ’| ‘ಸೇನೆಯನ್ನು ಮತ್ತು ಸೈನ್ಯವನ್ನು ಅವಮಾನಿಸುವವರು ಅಧಿಕಾರದಲ್ಲಿರಬಾರದು’|
ಮಂಗಳೂರು(ಏ.13): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು.
ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಭಾಷಣ ಮಾಡಲಿದ್ದಾರೆ.
ಪ್ರತಿಬಾರಿಯಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಇಡೀ ಮಂಗಳೂರು ನಗರ ಕೇಸರಿಮಯವಾಗಿದ್ದು ಜನರ ಪ್ರೀತಿಗೆ ನಾನು ಆಭಾರಿ ಎಂದು ಹೇಳಿದರು.
ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಗೊಳ್ಳುತ್ತಿದ್ದು, ಇದಕ್ಕೆ ಪ್ರತಿಯೊಬ್ಬ ಮತದಾರನಿಗೂ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.
21ನೇ ಶತಮಾನದ ಬಳಿಕ ನವಭಾರತದ ಚಹರೆ ಹೇಗಿರಬೇಕು ಎಂಬುದನ್ನು ನಿರ್ಧರಿಸಲು 2019ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದು ಎಂದು ಮೋದಿ ಬಣ್ಣಿಸಿದರು.
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪರಿವಾರವಾದದ ರಾಜಕಾರಣ ಮಾಡಿದರೆ, ಬಿಜೆಪಿ ರಾಷ್ಟ್ರವಾದದ ರಾಜಕಾರಣ ಮಾಡುತ್ತದೆ ಎಂದು ಮೋದಿ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
"
ಕುಟುಂಬ ಸದಸ್ಯರನ್ನೆಲ್ಲಾ ಚುನಾವಣೆಗೆ ನಿಲ್ಲಿಸಿರುವ ಕಾಂಗ್ರೆಸ್-ಜೆಡಿಎಸ್ ಗೆ , ಓರ್ವ ಚಾಯ್ ವಾಲಾ ಪ್ರಧಾನಿಯಾಗಿರುವುದನ್ನು ನೋಡಲಾಗುತ್ತಿಲ್ಲ ಎಂದು ಪ್ರಧಾನಿ ಹರಿಹಾಯ್ದರು.
ತುಷ್ಠೀಕರಣವನ್ನೇ ರಾಜಕಾರಣದ ಅಡಿಪಾಯ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಗೆ ವಿರುದ್ಧವಾಗಿ ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಡಿಪಾಯದ ಮೇಲೆ ರಾಜಕಾರಣ ಮಾಡುತ್ತದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ನದ್ದು ವಂಶೋದಯ ರಾಜಕಾರಣ ಮಾಡಿದರೆ ಬಿಜೆಪಿ ಅಂತ್ಯೋದಯದ ರಾಜಕಾರಣ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರ ರಚಿಸಿದ ಬಳಿಕ ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ತೆರೆಯುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.
ಸೇನೆಯನ್ನು ಮತ್ತು ಸೈನ್ಯವನ್ನು ಅಪಮಾನಗೊಳಿಸುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಪಾಠ ಕಲಿಸುವ ಸಮಯ ಬಂದಿದ್ದು, ಜನತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಸದೃಢ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.
