ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ| ಅರಮನೆ ಮೈದಾನದಲ್ಲಿ ಮೋದಿ ಮೇನಿಯಾ| ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ| ಅನಂತ್ ಕುಮಾರ್ ನೆನೆದು ಗದ್ಗದಿತರಾದ ಪ್ರಧಾನಿ| ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿದ ಪ್ರಧಾನಿ ಮೋದಿ| ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಅಪಾಯ ಎಂದ ಮೋದಿ| ‘ಉಗ್ರರ ಅಡಗುತಾಣಗಳಿಗೇ ನುಗ್ಗಿ ಹೊಡೆಯುವ ಛಾತಿ ನವಭಾರತಕ್ಕಿದೆ’| ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಗೆ ಮತ ಚಲಾಯಿಸುವಂತೆ ಪ್ರಧಾನಿ ಕರೆ|

ಬೆಂಗಳೂರು(ಏ.13): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು.

ಈಗಾಗಲೇ ಕರ್ನಾಟಕದಲ್ಲಿ ಚಿತ್ರದುರ್ಗ, ಮೈಸೂರು, ಗಂಗಾವತಿ, ಮಂಗಳೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಪೂರ್ಣಗೊಳಿಸಿರುವ ಪ್ರಧಾನಿ ಮೋದಿ, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾಷಣ ಮಾಡಿದರು.

ಪ್ರತಿಬಾರಿಯಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬೆಂಗಳೂರು ದಕ್ಷಿಣ, ಉತ್ತರ, ಸೆಂಟ್ರಲ್, ಗ್ರಾಮೀಣ ಮತ್ತು ಚಿಕ್ಕಬಳ್ಳಾಪೂರ ಕ್ಷೇತ್ರದ ಜನತೆಗೆ ನಮಸ್ಕಾರಗಳು ಎಂದು ಹೇಳಿ ಭಾಷಣ ಆರಂಭಿಸಿದರು.

Scroll to load tweet…

ನಾಡಪ್ರಭು ಕೆಂಪೇಗೌಡ ಅವರನ್ನು ನೆನೆದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಮಾಜಿ ಕೇಂದ್ರ ಸಚಿವ, ದಿವಂಗತ ಅನಂತ್ ಕುಮಾರ್ ಮತ್ತು ಜಯನಗರ ಮಾಜಿ ಶಾಸಕ, ದಿವಂಗತ ವಿಜಯ್ ಕುಮಾರ್ ಅವರನ್ನು ನೆನೆದು ಗದ್ಗದಿತರಾದರು.

ನಾಳೆ(ಏ.14) ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಇದ್ದು, ಅಂಬೇಡ್ಕರ್ ಕನಸನ್ನು ನನಸು ಮಾಡಲು ಬಿಜೆಪಿ ಸರ್ವಸನ್ನದ್ಧವಾಗಿದೆ ಎಂದು ಹೇಳಿದರು.

ಕಳೆದ ಐದು ವರ್ಷದಲ್ಲಿ ದೇಶದಲ್ಲಿ ಅಭೂತಪೂರ್ವ ಬದಲಾವಣೆಗಳಾಗಿದ್ದು, ಇದಕ್ಕೆ ಜನತೆ 2014ರಲ್ಲಿ ತಮಗೆ ನೀಡಿದ ಆಶೀರ್ವಾದವೇ ಕಾರಣ ಎಂದು ಮೋದಿ ಹೇಳಿದರು.

"

ಯುಪಿಎ ಅವಧಿಯಲ್ಲಿ ಬೆಂಗಳೂರು ಸೇರಿದಂತೆ ಇಡೀ ದೇಶ ಭಯೋತ್ಪಾದಕ ದಾಳಿಯ ಆತಂಕದಲ್ಲಿ ಬದುಕುತ್ತಿತ್ತು. ಆದರೆ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ಮೇಲೆ ದೇಶದ ಒಳಗಡೆ ಒಂದೂ ಭಯೋತ್ಪಾದಕ ದಾಳಿ ನಡೆದಿಲ್ಲ ಎಂದು ಪ್ರಧಾನಿ ಹೇಳಿದರು.

ಭಯೋತ್ಪಾದಕರನ್ನು ಅವರ ಅಡಗುತಾಣಗಳಿಗೇ ನುಗ್ಗಿ ಹೊಡೆಯುವ ಛಾತಿ ನವಭಾರತಕ್ಕಿದ್ದು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಭಾರತದ ಹೊಸ ನೀತಿಯಾಗಿದೆ ಎಂದು ಮೋದಿ ಹೇಳಿದರು.

ಮಿಶನ್ ಶಕ್ತಿ ಮೂಲಕ ಭಾರತ ಅಂತರಿಕ್ಷ ರಕ್ಷಣೆಯಲ್ಲೂ ಏಕಸ್ವಾಮ್ಯ ಸಾಧಿಸಿದ್ದು, ಇದು ಭಾರತದ ಪ್ರಜೆಗಳಿಗೆ ಸಂದ ಗೌರವವಾಗಿದೆ ಎಂದು ಪ್ರಧಾನಿ ಹೇಳಿದರು.

Scroll to load tweet…

ರಾಜ್ಯದ ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ನೀಡುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮೋದಿ ಕಿಡಿಕಾರಿದರು.

ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಗೊಳ್ಳುತ್ತಿದ್ದು, ವಿವಿಧ ವಿಷಯಗಳಲ್ಲಿ ಇಡೀ ವಿಶ್ವ ಭಾರತದ ಪರವಾಗಿ ನಿಂತರೆ ಚೀನಾ ಮಾತ್ರ ಪಾಕ್ ಪರವಾಗಿ ನಿಲ್ಲುತ್ತದೆ ಎಂದು ಮೋದಿ ಲೇವಡಿ ಮಾಡಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶವನ್ನು ಒಡೆಯುವ ಅಂಶಗಳಿದ್ದು, ದೇಶದ ಭದ್ರತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ನ್ನು ಕೊನೆಗಾಣಿಸುವುದು ಅನಿವಾರ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

Scroll to load tweet…

 ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನ್ಯಕ್ಕಿರುವ ವಿಶೇಷ ಅಧಿಕಾರವನ್ನು ತೆಗೆದು ಹಾಕುವ ಮಾತನಾಡುವ ಕಾಂಗ್ರೆಸ್ ಗೆ ಈ ದೇಶವನ್ನು ಆಳುವ ಹಕ್ಕಿಲ್ಲ ಎಂದು ಪ್ರಧಾನಿ ಗುಡುಗಿದರು.

ದೇಶದ ಮಧ್ಯಮ ವರ್ಗವನ್ನು ಬಹಿರಂಗವಾಗಿ ಅವಮಾನಿಸುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ, 5 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯ್ತಿ ನೀಡಿರುವ ಬಿಜೆಪಿ ಸರ್ಕಾರ ಮತ್ತೊಂದು ಕಡೆ ಇದೆ. ಜನ ಯಾವುದು ಉತ್ತಮವೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮನವಿ ಮಾಡಿದರು.

Scroll to load tweet…

ದೇಶದ ಭದ್ರತೆಗಾಗಿ, ದೇಶದ ಭವಿಷ್ಯಕ್ಕಾಗಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದ ಪ್ರಧಾನಿ, ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಗೆ ಮತ ಚಲಾಯಿಸುವಂತೆ ಕರೆ ನೀಡಿದರು.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.