ಚಿತ್ರದುರ್ಗ(ಏ.09): 2019ರ ಲೋಕಸಭೆ ಚುನಾವಣೆಗೆ ಇಂದು ಕರ್ನಾಟಕ ಅಧಿಕೃತವಾಗಿ ಸಜ್ಜಾದಂತಾಗಿದೆ. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಚಿತ್ರದುರ್ಗದಲ್ಲಿ ಬಿಜೆಪಿಯ ವಿಜಯ್ ಸಂಕಲ್ಪ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಜನರ ಮನಗೆದ್ದರು. ಜನತೆಗೆ ಕನ್ನಡದಲ್ಲೇ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ ಮೋದಿ, ಲಿಂಗೈಕ್ಯ ಡಾ. ಶಿವಕುಮಾರ್ ಸ್ವಾಮಿಜೀ ಅವರನ್ನು ನೆನೆದು ಭಾಷಣ ಆರಂಭಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮೋದಿ, ಮೈತ್ರಿ ಸರ್ಕಾರ ಭ್ರಷ್ಟಾಚಾರ, ಕುಟುಂಬ ಹಿತಾಸಕ್ತಿಯಲ್ಲಿ ಮುಳುಗಿ ಹೋಗಿದ್ದು, ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು.

"

ಜನಾದೇಶವನ್ನು ಧಿಕ್ಕರಿಸಿ ರಚನೆಯಾದ ರಾಜ್ಯ ಮೈತ್ರಿ ಸರ್ಕಾರ ರಾಜ್ಯದ ಜನೆತೆಗೆ ಮೋಸ ಮಾಡಿದೆ ಎಂದು ಮೋದಿ ಹರಿಹಾಯ್ದರು. ರೈತರ ಸಾಲಮನ್ನಾ ನಾಟಕವಾಡುತ್ತಾ ಕುಟುಂಬದ ಖಜಾನೆ ತುಂಬಿಸಿಕೊಳ್ಳುತ್ತಿರುವ ನಾಯಕರು, ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಕೊಳ್ಳೆ ಹೊಡೆಯುವಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ಗಂಭೀರ ಆರೋಪ ಮಾಡಿದರು.

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದಾಗ ರಾಜ್ಯದ ಕಾಂಗ್ರೆಸ್-ಜೆಡಿಎಸ್ ನಾಯಕರು ಭಾರತದ ಪರ ಮಾತನಾಡುವ ಬದಲು ದಾಲಿಯನ್ನು ಅನುಮಾನಿಸಿ ಪಾಕಿಸ್ತಾನದ ಪರ ನಿಂತರು ಎಂದು ಮೋದಿ ಅಸಮಾಧಾನ ಹೊರ ಹಾಕಿದರು.

ವಾಯುಸೇನೆ ದಾಳಿಯಿಂದಾಗಿ ಪಾಕಿಸ್ತಾನಕ್ಕೆ ನೋವಾದರೆ ಕಾಂಗ್ರೆಸ್-ಜೆಡಿಎಸ್ ನಾಯಕರು ಕಣ್ಣೀರು ಸುರಿಸಿದರು ಎಂದು ಮೋದಿ ಈ ವೇಳೆ ಲೇವಡಿ ಮಾಡಿದರು. ಕಾಂಗ್ರೆಸ್-ಜೆಡಿಸ್ ನಾಯಕರ ವೋಟ್ ಬ್ಯಾಂಕ್ ಕರ್ನಾಟಕದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿಯೋ ಎಂದು ಮೋದಿ ಈ ವೇಳೆ ಪ್ರಶ್ನಿಸಿದರು.

ಇತ್ತೀಚೆಗೆ ನಡೆದ ಐಟಿ ದಾಳಿ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಸಿಎಂ ಆದಿಯಾಗಿ ಮೈತ್ರಿ ಸರ್ಕಾರದ ನಾಯಕರು ಪ್ರತಿಭಟನೆ ಮಾಡಿದ್ದು ನಾಚಿಕೆಗೇಡು ಎಂದು ಕಿಡಿಕಾರಿದರು.

ಸಿಕ್ಕ 5 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ತಾತ, ಇಬ್ಬರು ಮೊಮ್ಮಕ್ಕಳು ಸ್ಪರ್ಧಿಸುತ್ತಿದ್ದು, ಕುಟುಂಬ ರಾಜಕಾರಣದ ನಗ್ನ ಕುಣಿತವನ್ನು ಕರ್ನಾಟಕದ ಜನ ತಿರಸ್ಕರಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ದೇಶದ ಅಖಂಡತೆಗೆ ಅಪಾಯಕಾರಿಯಾಗಿದ್ದು, ಇಂತಹ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ರಾಜ್ಯ ಮತ್ತು ದೇಶದ ಜನತೆಗೆ ಮೋಸ ಮಾಡಿದೆ ಎಂದು ಮೋದಿ ಆರೋಪಿಸಿದರು.

ಶೀಘ್ರದಲ್ಲೇ ಮೈತ್ರಿ ಸರ್ಕಾರಕ್ಕೆ ಆಮ್ಲಜನಕ(ಹಣ)ದ ಪೂರೈಕೆ ಸ್ಥಗಿತಗೊಳ್ಳಲಿದ್ದು, ದೇಶದ ಅಭಿವೃದ್ಧಿ ಆಂದೋಲನದಲ್ಲಿ ಕರ್ನಾಟಕ ಮಹತ್ವದ ಪಾಲುದಾರ ರಾಜ್ಯವಾಗಿ ಹೊರ ಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಸದೃಢ ಕರ್ನಾಟಕ, ಸದೃಢ ಭಾರತಕ್ಕಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಚಿತ್ರದುರ್ಗದ ಭಾಷಣದ ಬಳಿಕ ಪ್ರಧಾನಿ ಮೋದಿ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಕರ್ನಾಟಕದಲ್ಲಿ ಏ.18ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಏ.23ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಅದರಂತೆ ಮೇ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.