ಗಂಗಾವತಿಯಲ್ಲಿ ಪ್ರಧಾನಿ ಮೋದಿ ವಿಜಯ ಸಂಕಲ್ಪ ಯಾತ್ರೆ| ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ| ಕರ್ನಾಟಕದ ಜನರ ಪ್ರೀತಿ ಕಂಡು ವಿಪಕ್ಷಗಳಿಗೆ ನಿದ್ದೆ ಬರುತ್ತಿಲ್ಲ ಎಂದ ಮೋದಿ| ಸೈನಿಕರ ಕುರಿತು ಸಿಎಂ ಹೇಳಿಕೆ ಖಂಡಿಸಿದ ಪ್ರಧಾನಿ ಮೋದಿ| ರಾಜ್ಯದಲ್ಲಿ ಮಿಸ್ಟರ್ 20 ಪರ್ಸೆಂಟ್ ಸರ್ಕಾರವಿದೆ ಎಂದ ಮೋದಿ| 2019ರ ಲೋಕಸಭೆ ಚುನಾವಣೆ ರಾಷ್ಟ್ರವಾದ ಮತ್ತು ಪರಿವಾರವಾದದ ವಿರುದ್ಧದ ಹೋರಾಟ|
ಗಂಗಾವತಿ(ಏ.12): 2019ರ ಲೋಕಸಭೆ ಚುನಾವಣೆಗೆ ಕರ್ನಾಟಕವೂ ಸಜ್ಜಾಗಿದ್ದು, ಇತ್ತೀಚಿಗಷ್ಟೆ ಚಿತ್ರದುರ್ಗ, ಮೈಸೂರಿನಲ್ಲಿ ಚುನಾವಣಾ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಇಂದು ಗಂಗಾವತಿಯಲ್ಲಿ ಚುನಾವಣಾ ಭಾಷಣ ಮಾಡಿದ್ದಾರೆ. ಎಂದಿನಂತೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬಂಧು, ಭಗಿನಿಯರಿಗೆ ನಮಸ್ಕಾರಗಳು ಎಂದು ಹೇಳಿದಾಗ ಸಭಿಕರು ಕರತಾಡನ ಮೂಲಕ ಅಭಿನಂದಿಸಿದರು.
"
ವಿಜಯ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭೂಮಿಯಿಂದ ಹಿಡಿದು ಅಂತರೀಕ್ಷದಲ್ಲೂ ಭಾರತದ ಹೆಸರು ಕೇಳಿ ಬರುತ್ತಿದ್ದು, ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನ ಎತ್ತರಕ್ಕೆ ಏರಿದೆ ಎಂದು ಹೇಳಿದರು.ಕರ್ನಾಟಕದ ಜನರು ನನಗೆ ತೋರುತ್ತಿರುವ ಪ್ರೀತಿಯಿಂದಾಗಿ ದೆಹಲಿಯಲ್ಲಿರುವ ವಿಪಕ್ಷ ನಾಯಕರಿಗೆ ನಿದ್ದೆ ಬರುತ್ತಿಲ್ಲ ಎಂದು ಪ್ರಧಾನಿ ವ್ಯಂಗ್ಯವಾಡಿದರು.
"
ಇದೇ ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂಬ ಹೆಚ್.ಡಿ.ರೇವಣ್ಣ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ೨೦೧೪ರಲ್ಲಿ ನಾನು ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೆಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಅವರು ನಿವೃತ್ತಿ ಹೊಂದಲಿಲ್ಲ ಎಂದು ಮೋದಿ ಕುಟುಕಿದರು.
"
2019ರ ಲೋಕಸಭೆ ಚುನಾವಣೆಯನ್ನು ರಾಷ್ಟ್ರವಾದ ಮತ್ತು ಪರಿವಾರವಾದದ ವಿರುದ್ಧದ ಹೋರಾಟವಾಗಿದ್ದು, ಕರ್ನಾಟಕದ ಜನತೆ ಕುಟುಂಬ ರಾಜಕಾರಣವನ್ನು ತಿರಸ್ಕರಿಸಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಿಸ್ಟರ್ 10 ಪರ್ಸೆಂಟ್ ಸರ್ಕಾರವಿತ್ತು. ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಮಿಸ್ಟರ್ 20 ಪರ್ಸೆಂಟ್ ಸರ್ಕಾರವಿದೆ ಎಂದು ಮೋದಿ ವ್ಯಂಗ್ಯವಾಡಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ, ಕೇಂದ್ರದಲ್ಲಿ ಸದೃಢ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಪ್ರಧಾನಿ ಮತದಾರರಲ್ಲಿ ಮನವಿ ಮಾಡಿದರು.
ತುತ್ತು ಅನ್ನಕ್ಕಾಗಿ ಪರದಾಡುತ್ತಿರುವವರೇ ಸೇನೆಗೆ ಸೇರುತ್ತಾರೆ ಎಂಬ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಎಂ ಗೆ ಟಾಂಗ್ ನೀಡಿದರು.
