ಮೈಸೂರು(ಏ.09): 2019ರ ಲೋಕಸಭೆ ಚುನಾವಣೆಗೆ ಇಂದು ಕರ್ನಾಟಕ ಅಧಿಕೃತವಾಗಿ ಸಜ್ಜಾದಂತಾಗಿದೆ. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಇಂದು ಮಧ್ಯಾಹ್ನ ಕೋಟೆ ನಾಡು ಚಿತ್ರದುರ್ಗದಲ್ಲಿ ವಿಜಯ್ ಸಂಕಲ್ಪ ಯಾತ್ರೆ ಉದ್ದೇಶಿಸಿ ಭಾಷಣ ಮಾಡಿದ್ದ ಮೋದಿ, ಸಂಜೆ ಮೈಸೂರಿನಲ್ಲಿ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಚಿತ್ರದರ್ಗದಂತೆ ಮೈಸೂರಿನಲ್ಲೂ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಮೈಸೂರು, ಚಾಂರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಿಗೆ ವಂದನೆಗಳನ್ನು ಸಲ್ಲಿಸಿದರು.

ಮೈಸೂರಿಗೆ ನಾನು ಈ ಹಿಂದೆಯೂ ಹಲವು ಬಾರಿ ಬಂದಿದ್ದು, ಈ ಬಾರಿ ಸೇರಿದ ಜನಸಾಗರವನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಮೋದಿ ಜನರನ್ನುದ್ದೇಶಿಸಿ ಹೇಳಿದರು. ದೇಶಕ್ಕೆ ಮೈಸೂರಿನಿಂದ ಈ ಬಾರಿಯೂ ಬಿಜೆಪಿ ಸರ್ಕಾರ ಎಂಬ ಸಂದೇಶ ರವಾನೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಮೈಸೂರು ಭಾಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದು, ದೇಶದ ಅಭಿವೃದ್ಧಿ ಆಂದೋಲನದಲ್ಲಿ ಮೈಸೂರು ಸೇರಿದಂತೆ ಕರ್ನಾಟಕ ಪ್ರಮುಖ ಭಾಗಿದಾ ರಾಜ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ನಿನ್ನೆಯಷ್ಟೇ ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 2030ರ ವೇಳೆಗೆ ಭಾರತ ವಿಶ್ವದ 3ನೇ ಬಲಾಢ್ಯ ಆರ್ಥಿಕ ರಾಷ್ಟವನ್ನಾಗಿ ಮಾಡುವುದು ನಮ್ಮ ವಾಗ್ದಾನ ಎಂದು ಮೋದಿ ನುಡಿದರು.

ಒಂದು ಕಡೆ ಭಾರತವನ್ನು ಸದೃಢಗೊಳಿಸುವ ಬಿಜೆಪಿ ಪ್ರಣಾಳಿಕೆ ಇದ್ದರೆ, ದೇಶವನ್ನು ದುರ್ಬಲಗೊಳಿಸುವ ಕಾಂಗ್ರೆಸ್ ಪ್ರಣಾಳಿಕೆ ಇದೆ. ಯಾವ ಪ್ರಣಾಳಿಕೆ ಉತ್ತಮ ಎಂಬುದನ್ನು ಈ ದೇಶ ನಿರ್ಧರಿಸಬೇಕಿದೆ ಎಂದು ಪ್ರಧಾನಿ ಮನವಿ ಮಾಡಿದರು.

ದೇಶ ಕಾಂಗ್ರೆಸ್ ಮುಕ್ತವಾದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದ ಮೋದಿ, ಬಿಜೆಪಿ ಸರ್ಕಾರ ಬಂದ ಬಳಿಕ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ಹೇಳಿದರು. ಕಾಂಗ್ರೆಸ್ ದೇಶಕ್ಕೆ 2G ಹಗರಣ ನೀಡಿದ್ದರೆ , ಬಿಜೆಪಿ ದೇಶಕ್ಕೆ ಅತ್ಯಂತ ಅಗ್ಗದ ಮೊಬೈಲ್ ಮತ್ತು ಅಗ್ಗದ ಡೆಟಾ ನೀಡಿದೆ ಎಂದು ಮೋದಿ ಹೇಳಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ದೇಶದ 3 ಕೋಟಿ ರೈತರು ಮೊದಲ ಹಂತದ ಸಹಾಯಧನ ಈಗಾಗಲೇ ಸ್ವೀಕರಿಸಿದ್ದು, ಕರ್ನಾಟಕ ಸರ್ಕಾರ ಮಾತ್ರ ಫಲಾನುಭವಿಗಳ ಪಟ್ಟಿ ನೀಡುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.

ಈ ಹಿಂದೆ ಸೋನಿಯಾ ಗಾಂಧಿ ಅವರು ದೇವೇಗೌಡ ಅವರಿಗೆ ಮೋಸ ಮಾಡಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿದ್ದರು. ಅದರಂತೆ ಈ ಬಾರಿ ದೇವೇಗೌಡರು ಬೆಂಬಲದ ನೆಪ ನೀಡಿ ಸೋನಿಯಾ ಅವರ ಮಗ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡುವ ಸಾಧ್ಯತೆಯೇ ಹೆಚ್ಚು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಕರ್ನಾಟಕದಿಂದ ಕಣಕ್ಕಿಳಿಯಲಿಲ್ಲ ಎಂದು ಮೋದಿ ವ್ಯಂಗ್ಯವಾಡಿದರು.

ಇದೇ ವೇಳೆ ಶಬರಿಮಲೆ ವಿವಾದ ಕುರಿತು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ನಮ್ಮ ನಂಬಿಕೆ ಮೇಲೆ ಕಮ್ಯೂನಿಸ್ಟರು ದಾಳಿ ಮಾಡಿದಾಗ ಕಾಂಗ್ರೆಸ್ ಪರೋಕ್ಷವಾಗಿ ಅವರಿಗೆ ಬೆಂಬಲ ನೀಡಿತು ಎಂದು ಆರೋಪಿಸಿದರು. ನಂಬಿಕೆ ಮತ್ತು ಆಚಾರ ವಿಚಾರದ ರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಸಂಸ್ಕೃತಿಯನ್ನು ರಕ್ಷಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.

ಮಂಡ್ಯದಲ್ಲಿ ದಿವಂಗತ ಅಂಬರೀಶ್ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿದ್ದು, ಸುಮಲತಾ ಅವರಿಗೆ ಮಂಡ್ಯದ ಜನತೆ ಬೆಂಬಲ ನೀಡಲಿದ್ದಾರೆ ಎಂದು ಇದೇ ವೇಳೆ ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. ಅಂಬರೀಶ್ ಮತ್ತು ಅವರ ಪತ್ನಿ ಸುಮಲತಾ ಅಂಬರೀಶ್ ಕಲೆಯ ಮೂಲಕ ಈ ನಾಡಿಗೆ ಕೊಡುಗೆ ನೀಡಿದ್ದು, ಜನ ಅವರ ಸಾಧನೆಗಳನ್ನು ಗುರುತಿಸಲಿದ್ದಾರೆ ಎಂದು ಮೋದಿ ವಿಶ್ವಾಸದಿಂದ ನುಡಿದರು.