ಹೈಸ್ಕೂಲ್ ಹಂತದಲ್ಲಿ ಪೋಷಕರ ಆತಂಕ ಹೆಚ್ಚುತ್ತದೆ. ಮಕ್ಕಳಿಗೆ ಓದಿನ ಒತ್ತಡ ಹೇರುವುದಕ್ಕಿಂತ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಶಿರಸಿಯ ತುಳಸಿ ಹೆಗಡೆ ಸಾಧಿಸಿದ್ದಾರೆ. ಯಕ್ಷಗಾನ ಕಲಾವಿದೆ ತುಳಸಿ, 96.32% ಅಂಕಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಓದಿನ ಜೊತೆಗೆ ಇತರ ಚಟುವಟಿಕೆಗಳೂ ಮುಖ್ಯ ಎಂಬುದಕ್ಕೆ ತುಳಸಿ ಉದಾಹರಣೆ.
ಮಕ್ಕಳು ಹೈಸ್ಕೂಲ್ಗೆ ಬಂದರೆ ಸಾಕು, ಅವರಿಗಿಂತಲೂ ಹೆಚ್ಚಾಗಿ ಅಪ್ಪ-ಅಮ್ಮಂದಿರಿಗೇ ಏನೋ ಆತಂಕ. ಏಕೆಂದ್ರೆ ಎರಡು ವರ್ಷ ಬಿಟ್ಟು ಮಗನೋ, ಮಗಳೋ ಎಸ್ಎಸ್ಎಲ್ಸಿ ಎನ್ನುವ ಕಾರಣದಿಂದ. ಅಲ್ಲಿಯವರೆಗೆ ಆಟವಾಡಿಕೊಂಡು ಇರುವ ಮಕ್ಕಳಿಗೆ ಪಾಲಕರಿಂದ ದಿಗ್ಬಂಧನ ಶುರು. ಇನ್ನು ಮಕ್ಕಳು 9ನೇ ಕ್ಲಾಸ್ ಮುಗಿಸುತ್ತಿದ್ದಂತೆಯೇ ಹೊರಗೆ ಹೋಗುವುದೇ ಬಂದ್. ಶಾಲೆ-ಮನೆ ಅಷ್ಟೇ. ಬಿಟ್ಟರೆ ಟ್ಯೂಷನ್. ಅಲ್ಲಿಯವರೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಆಟೋಟಗಳಲ್ಲಿ ಪಾಲ್ಗೊಳ್ಳುತ್ತಿದ್ದರೆ, ನೃತ್ಯ, ಸಂಗೀತ ಕ್ಲಾಸ್ಗಳೋ ಅಥವಾ ಇನ್ನಾವುದೋ ತರಗತಿಗಳಿಗೆ ಹೋಗುತ್ತಿದ್ದರೆ ಎಲ್ಲವೂ ಬಂದ್! ಮಕ್ಕಳು ಎಲ್ಲಿಯೂ ಹೋಗುವಂತೆ ಇಲ್ಲ. ಅವರಿಗೆ ಶಾಲೆ ಮಾತ್ರವಲ್ಲದೇ ವಿಶೇಷ ಟ್ಯೂಷನ್ ಬೇರೆ ಶುರು. ಏಕೆಂದ್ರೆ, 10ನೇ ಕ್ಲಾಸ್ ಎನ್ನುವುದು ಜೀವನದ ಮಹತ್ವದ ಘಟ್ಟ. ಅದಕ್ಕಾಗಿಯೇ ಓದು ಓದು ಓದು ಅಷ್ಟೇ...! ಆಮೇಲೆ ದ್ವಿತೀಯ ಪಿಯುಸಿ ಬೇರೆ ಬರತ್ತಲ್ಲ. ಅದಕ್ಕೂ ಈಗಿನಿಂದಲೇ ಟ್ರೇನಿಂಗ್ ಶುರು.
ಆದರೆ, ಮಕ್ಕಳಿಗೆ ಓದಿನ ಜೊತೆ ಇತರ ಉತ್ತಮ ಚಟುವಟಿಕೆಗಳು ಇದ್ದರೆ ಮನಸ್ಸು ಪ್ರಫುಲ್ಲವಾಗಿ ಅವರ ಓದು ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂದು ಇದಾಗಲೇ ಹಲವು ಮಕ್ಕಳು ಸಾಬೀತು ಮಾಡಿದ್ದಾರೆ. ಅವರಲ್ಲಿ ಒಬ್ಬಾಕೆ ಶಿರಸಿಯ ಬೆಟ್ಟಕೊಪ್ಪದ ತುಳಸಿ ಹೆಗಡೆ. ಪರೀಕ್ಷೆಯ ಸಮಯದಲ್ಲಿಯೂ ಯಕ್ಷಗಾನ ಪ್ರದರ್ಶನ ನೀಡುತ್ತಲೇ ಶೇಕಡಾ 96.32 ಅಂಕ ಗಳಿಸಿದ್ದಾಳೆ ಈ ಬಾಲಕಿ. ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಈಕೆ. ಪರೀಕ್ಷೆಯ ಸಮಯದಲ್ಲಿಯೂ ಕೂಲ್ ಆಗಿಯೇ ಇದ್ದು, ಇತರ ಚಟುವಟಿಕೆಗಳ ಜೊತೆಯೂ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ. ಅಂದಹಾಗೆ ತುಳಸಿಯ ಸಾಧನೆ ಒಂದೆರಡಲ್ಲ. ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಜಾಗತಿಕ ಮಟ್ಟದಲ್ಲೂ ಈಕೆಯ ಹೆಸರು ದಾಖಲಾಗಿದೆ.
ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ SSLCಯಲ್ಲಿ ಉತ್ತೀರ್ಣ: ಪಡೆದ ಅಂಕಗಳು ಹೀಗಿವೆ
ಲಂಡನ್ ಮೂಲದ ಪ್ರತಿಷ್ಠಿತ ವಲ್ಡ್ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ ಪ್ರಕಾರದಿಂದ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ. ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಪ್ರಥಮ ಬಾರಿಗೆ ಸೇರಿದೆ.
ಇಷ್ಟೆಲ್ಲಾ ಸಾಧನೆ ಮಾಡುತ್ತಲೇ 10ನೇ ತರಗತಿಯಲ್ಲಿಯೂ ಇಷ್ಟೊಂದು ಅಂಕ ಗಳಿಸುವ ಮೂಲಕ, ಅಂಕ ಗಳಿಸಲು ಬೇಕಿರುವುದು ಬರಿಯ ಓದಲ್ಲ, ಇತರ ಹವ್ಯಾಸಗಳ ಜೊತೆಯಲ್ಲಿಯೂ, ಮಕ್ಕಳು ಇಷ್ಟಪಟ್ಟಿರುವ ಚಟುವಟಿಕೆಗಳ ಜೊತೆಜೊತೆಯಲ್ಲಿಯೂ ಉತ್ತಮ ಅಂಕ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ ತುಳಸಿ. ಅಷ್ಟಕ್ಕೂ, ಪ್ರತಿ ಬಾರಿಯು ಎಸ್ಎಸ್ಎಲ್ಸಿ ಮತ್ತು ಪಿಯುಸಿಯ ಫಲಿತಾಂಶ ಬಂದಾಗ, ಟಾಪ್ಮೋಸ್ಟ್ ಸ್ಥಾನದಲ್ಲಿ ಇರುವವರು ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಕೂಲಿ ಮಾಡುವವರ ಮಕ್ಕಳು, ತರಕಾರಿ ಮಾರಿ ಜೀವನ ಸಾಗಿಸುವವರ ಮಕ್ಕಳು, ಶಾಲೆಗೆ ಹೋಗುತ್ತಲೇ ದುಡಿಯಲು ಹೋಗಿ ಅಂದಿನ ಖರ್ಚು ನಿಭಾಯಿಸುವ ಮಕ್ಕಳು, ಟ್ಯೂಷನ್ ಮುಖವನ್ನೂ ನೋಡದ ಮಕ್ಕಳೇ ಎನ್ನುವುದು ಕೂಡ ನಿಜ ತಾನೆ?
ತಾಯಿ ತೀರಿಕೊಂಡ ದುಃಖದಲ್ಲೇ ಪರೀಕ್ಷೆ ಬರೆದು 612 ಅಂಕ ಪಡೆದ ವಿದ್ಯಾರ್ಥಿನಿ!


