ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಹನುಮಸಾಗರ (ಸೆ.05): ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ನಾಗಯ್ಯ ಹಿರೇಮಠ ಶಿಕ್ಷಣದ ಜೊತೆಗೆ ಸಾಹಿತ್ಯ, ಕ್ರೀಡೆ, ಪರಿಸರ ಸಂರಕ್ಷಣೆ, ತಂತ್ರಜ್ಞಾನ ಆಧಾರಿತ ಬೋಧನೆ ಹಾಗೂ ಶಾಲಾಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. 2008ರ ಜುಲೈ 16ರಂದು ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಅವರು ಹನಮಗಿರಿ ಶಾಲೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ಅಡವಿಭಾವಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದರು.

ದಾನಿಗಳು ಹಾಗೂ ಗ್ರಾಮಸ್ಥರನ್ನು ಸಂಪರ್ಕಿಸಿ ಸುಮಾರು ₹2.50 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್‌ಗಳು, ಫ್ಯಾನ್‌ಗಳು, ಅಲಮಾರಿಗಳು, ಖುರ್ಚಿ, ಟೇಬಲ್, ತಟ್ಟೆ, ಲೋಟ ಸೇರಿದಂತೆ ಅಗತ್ಯ ಪರಿಕರಗಳನ್ನು ಶಾಲೆಗೆ ಒದಗಿಸುವ ಮೂಲಕ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿದ್ದಾರೆ.

ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್‌ಗಳ ಮೂಲಕ ಪರಿಣಾಮಕಾರಿ ಬೋಧನೆ ಮಾಡುತ್ತಿದ್ದಾರೆ. ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಶೈಕ್ಷಣಿಕ ಪ್ರವಾಸ, ಹೊರಸಂಚಾರ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಕಲಿಕೆಯ ಕುತೂಹಲ ಹೆಚ್ಚಿಸಿದ್ದಾರೆ.

ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳು ಇನ್ಸ್ಫೈರ್‌ (INSPIRE Award)ಗೆ ಆಯ್ಕೆಯಾಗುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರತಿವರ್ಷ ಸುಮಾರು ಐದು ವಿದ್ಯಾರ್ಥಿಗಳು ಮೊರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗುವಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ನಲಿ-ಕಲಿ, ಇಂಗ್ಲಿಷ್ ಬೈಲಿಂಗ್ವಲ್ ಸೇರಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಂಆರ್‌ಪಿ (Master Resource Person) ಆಗಿ ಕಾರ್ಯನಿರ್ವಹಿಸಿರುವ ಅವರು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಬಿಎಲ್‌ಒ ಆಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದು, ಶಿಕ್ಷಕ ವೃತ್ತಿಯೊಂದಿಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದ್ದಾರೆ.

ಕೈಯಲ್ಲಿ ಪುಸ್ತಕ, ಮೈದಾನದಲ್ಲಿ ಕ್ರೀಡೆ

ಸಾಹಿತ್ಯದ ಮೇಲೂ ವಿಶೇಷ ಆಸಕ್ತಿ ಹೊಂದಿರುವ ಅವರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.