ವಾಹನ ಮಾಲೀಕರ ಕಿರಿ ಕಿರಿ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಾರಿಗೆ ಸಚಿವಾಲಯ ಹೊಸ ಪ್ರಸ್ತಾವನೆಯನ್ನು ಸಿದ್ದಪಡಿಸಿದೆ. ಶೀಘ್ರದಲ್ಲೇ ಹೊಸ ನೀತಿ ಜಾರಿಗೆ ಬರಲಿದ್ದು, ವಾಹನ ಮಾಲೀಕರು ನಿರಾಳರಾಗಲಿದ್ದಾರೆ.
ನವದೆಹಲಿ (ಜು.28) ಭಾರತದ ವಾಹನ ಮಾಲೀಕರು ಪ್ರಮುಖವಾಗಿ ಕಾರು ಹಾಗೂ ದ್ವಿಚಕ್ರ ವಾಹನ ಮಾಲೀಕರಿಗೆ ಗುಡ್ ನ್ಯೂಸ್. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (PUCC ) ಮಾನ್ಯತೆಯನ್ನು ವಿಸ್ತರಿಸಲು ಸಜ್ಜಾಗಿದೆ. ಸದ್ಯ ಒಂದು ವರ್ಷ ಅವಧಿಗೆ ನೀಡಲಾಗುತ್ತದೆ. ಇದನ್ನು ಇನ್ನು ಮುಂದೆ ಮೂರು ವರ್ಷ ಅವಧಿಗೆ ನೀಡಲು ಕೇಂದ್ರ ಸಚಿವಾಲಯ ಮುಂದಾಗಿದೆ. ಈ ಕುರಿತ ಪ್ರಸ್ತಾವನೆ ರೆಡಿಯಾಗಿದ್ದು ಶೀಘ್ರದಲ್ಲೇ ಅನುಮೋದನೆ ಸಿಗಲಿದೆ.
ಹೊಸ ನಿಯಮವೇನು?
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕರಡು ಪ್ರಸ್ತಾವನೆಯಲ್ಲಿ ಬಿಎಸ್6 ವಾಹನಗಳ ಎಮಿಶನ್ ಟೆಸ್ಟ್ ಮಾನ್ಯತೆ ಅವಧಿಯನ್ನು ಒಂದು ವರ್ಷದಿಂದ ಮೂರು ವರ್ಷಕ್ಕೆ ವಿಸ್ತರಣೆ ಮಾಡಲು ಮುಂದಾಗಿದೆ. ಈ ನಿಯಮ ಬಿಎಸ್6 ಎಮಿಶನ್ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಬಿಎಸ್6ಗಿಂತ ಹಿಂದಿನ ವಾಹನಗಳಿಗೆ ಅನ್ವಯವಾಗುವುದಿಲ್ಲ. ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮಾಲೀಕರು ಪ್ರತಿ ವರ್ಷ ಎಮಿಶನ್ ಟೆಸ್ಟ್ ಅಥವಾ PUCC ಸರ್ಟಿಫಿಕೇಟ್ ಮಾಡಿಸಬೇಕು. ಇದೀಗ ಮೂರು ವರ್ಷವರೆಗೆ ಮಾನ್ಯತೆ ವಿಸ್ತರಿಸಲಾಗುತ್ತಿದೆ. ಇದರಿಂದ ಹೊಸ ವಾಹನಗಳ ಮಾಲೀಕರು ವರ್ಷ ವರ್ಷ ಮಾಲಿನ್ಯ ನಿಯಂತ್ರಕ ಸರ್ಟಿಫಿಕೇಟ್ ಮಾಡಲು ಪದೇ ಪದೇ ತೆರಳುವ ಕಿರಿಕಿರಿ ತಪ್ಪಲಿದೆ.
ಯಾವ ವಾಹನಗಳಿಗೆ pucc ಎಷ್ಟು ವರ್ಷದ ಮಾನ್ಯತೆ?
- ಹೊಸ ಪ್ರಸ್ತಾವನೆ ಪ್ರಕಾರ ಬಿಎಸ್ 6 ವಾಹನಗಳಲ್ಲೂ ಅದರ ವರ್ಷದ ಆಧಾರದಲ್ಲಿ ವಿಂಗಡನೆ ಮಾಡಲಾಗಿದೆ. ವಾಹನಗಳ ವರ್ಷಗಳ ಆದಾರದಲ್ಲಿ ಮಾನ್ಯತೆಯೂ ಬೇರೆ ಬೇರೆಯಾಗಲಿದೆ.
- 6 ವರ್ಷದೊಳಗಿನ ವಾಹನಗಳು: ಪ್ರತಿ 3 ವರ್ಷಕ್ಕೊಮ್ಮೆ ಪಿಯುಸಿ ಸರ್ಟಿಫಿಕೇಟ್ ನವೀಕರಣ ಮಾಡಬೇಕು
- 6 ರಿಂದ 10 ವರ್ಷದೊಳಗಿನ ವಾಹನಗಳು: ಪ್ರತಿ ವರ್ಷ ಪಿಯುಸಿ ಸರ್ಟಿಫಿಕೇಟ್ ನವೀಕರಿಸಬೇಕು
- 10 ವರ್ಷಕ್ಕಿಂತ ಹಳೇ ವಾಹನಗಳು: ಪ್ರತಿ 6 ತಿಂಗಳಿಗೊಮ್ಮೆ ಪಿಯುಸಿ ಸರ್ಟಿಫಿಕೇಟ್ ನವೀಕರಿಸಬೇಕು
ಬಿಎಸ್6 ಗಿಂತ ಹಳೆ ವಾಹನಗಳ ನಿಯಮವೇನು?
ಖಾಸಗಿ ಬಿಎಸ್6 ವಾಹನಗಳ ವರ್ಷದ ಅವಧಿ ಮೇಲೆ ಅವಧಿ ವಿಸ್ತರಣೆ ಸಿಗಲಿದೆ. ಇನ್ನು ಬಿಎಸ್6ಗಿಂತ ಹಾಗೂ ವಾಣಿಜ್ಯ ವಾಹನಗಳ ಪಿಯುಸಿಸಿ ಸರ್ಟಿಫಿಕೇಟ್ ಮಾನ್ಯತೆ ಕುರಿತು ವಿವರಣೆ ನೀಡಲಾಗಿದೆ. ಬಿಎಸ್6 ವಾಣಿಜ್ಯ ಅಥವಾ ಸಾರಿಗೆ ವಾಹನ ಆರಂಭಿಕ 6 ವರ್ಷದವರೆಗೆ ಪ್ರತಿ 2 ವರ್ಷಕ್ಕೊಮ್ಮೆ ಪಿಯುಸಿಸಿ ನವೀಕರಿಸಬೇಕು. ಇನ್ನು ಬಿಎಸ್4 ವಾಹನಗಳಿಗೆ ಸದ್ಯ ಇರುವ ನಿಯಮ ಅನ್ವಯವಾಗಲಿದೆ. ಪ್ರತಿ 6 ತಿಂಗಳಿಗೊಮ್ಮೆ ಪಿಯುಸಿಸಿ ನವೀಕರಿಸಬೇಕು. ಬಿಎಸ್-I, ಬಿಎಸ್-II ಮತ್ತು ಬಿಎಸ್-III ವಾಹನಗಳಿಗೆ ಪ್ರತಿ 3 ತಿಂಗಳಿಗೊಮ್ಮೆ ಪಿಯುಸಿಸಿ ಸರ್ಟಿಫಿಕೇಟ್ ನವೀಕರಿಸಬೇಕು.


