ಟಾಟಾ ಮೋಟಾರ್ಸ್ ಸಿಯೆರಾ ಇವಿ ಮೂಲಕ ಎಲ್ಲರ ಗಮನಸೆಳೆದಿದೆ. ಇದೀಗ ಹೈಬ್ರಿಡ್ ಕಾರುಗಳ ಬಿಡುಗಡೆ ಮಾಡುತ್ತಿದೆ. ಮೂರು ಕಾರುಗಳು ಹೈಬ್ರಿಡ್ ವೇರಿಯೆಂಟ್‌ನಲ್ಲಿ ಬರುತ್ತಿದೆ. ಈ ಮೂಲಕ ಹೊಸ ಅಧ್ಯಾಯ ತೆರೆಯುತ್ತಿದೆ.
ಮುಂಬೈ (ಜು.27) ಟಾಟಾ ಮೋಟಾರ್ಸ್ ಭಾರತದ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಕಳೆದ 15 ವರ್ಷಗಳಿಂದ ಮಹತ್ತರ ಬದಲಾವಣೆ, ಹೊಸ ಫ್ಲೀಟ್ ಜೊತೆ ಕಾರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಟಾಟಾ ಮೋಟಾರ್ಸ್ ಈಗಾಗಲೇ ಎಲೆಕ್ಟ್ರಿಕ್ ವಿಭಾಗದಲ್ಲಿ ಭಾರತದ ಮುಂಚೂಣಿ ಬ್ರ್ಯಾಂಡ್ ಆಗಿದೆ. ಇದೀಗ ಹೈಬ್ರಿಡ್ ವೇರಿಯೆಂಟ್‌ಗೆ ಲಗ್ಗೆ ಇಟ್ಟಿದೆ. ಟಾಟಾ ಮೋಟಾರ್ಸ್‌ನ ಪ್ರಮುಖ ಮೂರು ಕಾರುಗಳು ಹೈಬ್ರಿಡ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಟಾಟಾ ಸುರಕ್ಷತೆ ಜೊತೆ ಗರಿಷ್ಠ ಮೈಲೇಜ್, ಕಡಿಮೆ ನಿರ್ವಹಣೆಗೂ ಪ್ರಾಮುಖ್ಯತೆ ನೀಡಿದೆ.
ಮಾರುತಿ ಸುಜುಕಿ ಸೇರಿ ಹಲವರಿಗೆ ನಡುಕ
ಪೆಟ್ರೋಲ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ. ಇದೀಗ ಹೈಬ್ರಿಡ್ ಮಾರುಕಟ್ಟೆಗೂ ಕಾಲಿಡುತ್ತಿದೆ. ಹೈಬ್ರಿಡ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ, ಟೋಯೋಟಾ, ಹ್ಯುಂಡೈ ಭಾರತದಲ್ಲಿ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಈ ಮೂರು ಬ್ರ್ಯಾಂಡ್‌ಗಳು ಹೈಬ್ರಿಡ್ ಕಾರು ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ಇದೀಗ ಟಾಟಾ ತನ್ನ ಗ್ರಾಹಕರಿಗೆ ಹೈಬ್ರಿಡ್ ಆಯ್ಕೆ ನೀಡುವ ಮೂಲಕ ಉದ್ಯಮ ವಿಸ್ತರಿಸುತ್ತಿದೆ. ಟಾಟಾದ ಈ ನಿರ್ಧಾರದಿಂದ ಮಾರುತಿ ಸುಜುಕಿ, ಟೋಯೋಟಾ ಹಾಗೂ ಹ್ಯುಂಡೈಗೆ ನಡುಕ ಶುರುವಾಗಿಗೆ, ಪೆಟ್ರೋಲ್, ಸಿಎನ್‌ಜಿ ಹಾಗೂ ಇವಿ ಕಾರುಗಳಲ್ಲಿ ಎಲ್ಲರ ಸ್ಥಾನವನ್ನು ನಿಧಾನವಾಗಿ ಟಾಟಾ ಆಕ್ರಮಿಸಿಕೊಳ್ಳುತ್ತಿದೆ. ಇದೀಗ ಹೈಬ್ರಿಡ್ ಮಾರುಕಟ್ಟೆಯಲ್ಲೂ ಟಾಟಾ ಹೊಸ ಸಂಚಲನ ಸೃಷ್ಟಿಸಲು ಮುಂದಾಗಿರುವುದು ಪ್ರತಿಸ್ಪರ್ಧಿಗಳ ಆತಂಕಕ್ಕೆ ಕಾರಣವಾಗಿದೆ.
ಮೂರು ಕಾರುಗಳು ಹೈಬ್ರಿಡ್
ಮೊದಲ ಹಂತದಲ್ಲಿ ಟಾಟಾ ಮೂರು ಕಾರುಗಳನ್ನು ಹೈಬ್ರಿಡ್ ವೇರಿಯೆಂಟ್‌ನಲ್ಲಿ ಲಾಂಚ್ ಮಾಡುತ್ತಿದೆ. ಟಾಟಾ ಸಿಯೆರಾ, ಟಾಟಾ ಹ್ಯಾರಿಯರ್ ಹಾಗೂ ಟಾಟಾ ಸಫಾರಿ ಕಾರುಗಳನ್ನು ಹೈಬ್ರಿಡ್ ಮಾಡೆಲ್‌ನಲ್ಲಿ ಬಿಡುಗಡೆ ಮಾಡುತ್ತಿದೆ. ಬಳಿಕ ಟಾಟಾ ಕರ್ವ್ ಸೇರಿದಂತೆ ಇತರ ಕಾರುಗಳು ಹೈಬ್ರಿಡ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ತಯಾರಿಗಳು ಆರಂಭಗೊಂಡಿತ್ತು. ಶೀಘ್ರದ್ಲಲೇ ಅಧಿಕೃತ ಮಾಹಿತಿಗಳು ಹೊರಬೀಳಲಿದೆ.
ಪೆಟ್ರೋಲ್ ದುಬಾರಿಯಾದರೆ, ಎಲೆಕ್ಟ್ರಿಕ್‌ಗೆ ಚಾರ್ಜಿಂಗ್ ಸಮಸ್ಯೆಗಳು, ಪ್ರಯಾಣದ ನಡುವೆ ಚಾರ್ಜ್ ಮಾಡುವ ಅನಿವಾರ್ಯತೆಗಳು ಎದುರಾಗುತ್ತದೆ. ಹೀಗಾಗಿ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಚಲಿಸುವ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ಹೆಚ್ಚಿನ ಮೈಲೇಜ್ ಜೊತೆಗೆ ಚಾರ್ಜಿಂಗ್ ತಲೆನೋವು ಹೆಚ್ಚಿಲ್ಲದ ಕಾರಣ ಹೈಬ್ರಿಡ್ ಕಾರು ಮುಂದಿನ ದಿನಗಳಲ್ಲಿ ಪ್ರಮುಖ ವೇರಿಯೆಂಟ್ ಆಗಿ ಹೊರಹೊಮ್ಮಲಿದೆ. ಇದೀಗ ಟಾಟಾ ಕೂಡ ಇದೇ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.
ಟಾಟಾ ಹೈಬ್ರಿಡ್ ತಂತ್ರಜ್ಞಾನ
ಟಾಟಾ ಮೋಟಾರ್ಸ್ ಹೈಬ್ರಿಡ್ ಕಾರಿನ ಕುತೂಹಲ ಹೆಚ್ಚಾಗುತ್ತಿದೆ. ಪ್ಲಗ್ ಇನ್ ಹೈಬ್ರಿಡ್ ಅಥವಾ ಸ್ಟ್ರಾಂಗ್ ಹೈಬ್ರಿಡ್ ಎರಡು ವೇರಿಯೆಂಟ್‌ನಲ್ಲಿ ಕಾರು ಲಭ್ಯವಾಗುತ್ತಾ, ಇಲ್ಲಾ ಹೊಸ ತಂತ್ರಜ್ಞಾನದ ಮೂಲಕ ಅಲೆ ಸೃಷ್ಟಿಸುತ್ತಾ ಅನ್ನೋ ಕುತೂಹಲ ಇದೆ. ಹೈಬ್ರಿಡ್ ಕಾರುಗಳು ಮಾಲಿನ್ಯ ತಗ್ಗಿಸಿ ಉತ್ತಮ ಮೈಲೇಜ್ ನೀಡಲಿದೆ. ನಗರ, ದೂರ ಪ್ರಯಾಣ ಸೇರಿದಂತೆ ಯಾವುದೇ ಪ್ರಯಾಣಕ್ಕೂ ಈ ಕಾರುಗಳು ಉತ್ತಮ ಎನಿಸಿಕೊಳ್ಳುತ್ತದೆ.


