29 ವರ್ಷಗಳ ಹಿಂದೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನಾದ ಚಿಕ್ಕ ಹನುಮ ಅಲಿಯಾಸ್ ಕೃಷ್ಣಪ್ಪನನ್ನು, ಆಂಧ್ರಪ್ರದೇಶದಲ್ಲಿ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

29 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನೋರ್ವನನ್ನು ಬಂಧಿಸಿದ್ದಾರೆ. 29 ವರ್ಷಗಳ ಹಿಂದೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣದ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನೂ ಆಗಿರುವ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಅಕಾ ಕೆ ಕೃಷ್ಣಪ್ಪ ಎಂಬಾತನನ್ನು ಮಂಗಳೂರು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.

ಅಂದು ನಡೆದಿದ್ದು ಏನು?

1997ರ ಅಕ್ಟೋಬರ್ 11ರಂದು ಮಧ್ಯರಾತ್ರಿ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಗುಡಿ ಕ್ರಾಸ್ ಬಳಿಯ ಮನೆಯೊಂದಕ್ಕೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್‌ನ ಸದಸ್ಯರು ಮನೆಯಲ್ಲಿದ್ದ 80 ವರ್ಷ ಹಿರಿಯರಾದ ಲೂವಿಸ್ ಡಿಮೆಲ್ಲೋ ಹಾಗೂ ಮೊಮ್ಮಗ 19 ವರ್ಷದ ರಂಜಿತ್ ವೇಗಸ್‌ನನ್ನು ಭೀಕರವಾಗಿ ಕೊಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಇಲ್ಲಿ ದರೋಡೆ ಮಾಡಿದ ದಂಡುಪಾಳ್ಯ ಗ್ಯಾಂಗ್‌ನಲ್ಲಿ ಈ ಚಿಕ್ಕ ಹನುಮ ಕೂಡ ಭಾಗಿಯಾಗಿದ್ದ.

ಇದನ್ನೂ ಓದಿ: ನಾಟಕ ಕಲಾವಿದೆ, ಹಾಸ್ಯಮಯ ವೀಡಿಯೋ ಮೂಲಕ ಎಲ್ಲರ ನಗುತ್ತಿದ್ದ ಕರಾವಳಿಯ ಆಶಾ ಪಂಡಿತ್ ಇನ್ನಿಲ್ಲ

ಈ ಕೃತ್ಯದ ಬಳಿಕ ಪರಾರಿಯಾಗಿದ್ದ ಚಿಕ್ಕ ಹನುಮ ತನ್ನ ಹೆಸರನ್ನು ಜೆ. ಕೃಷ್ಣಪ್ಪ ಎಂದು ಬದಲಿಸಿಕೊಂಡಿದ್ದ. ರಾಜ್ಯ ಬಿಟ್ಟು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆತ ಅಲ್ಲಿನ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ವಾಸವಾಗಿದ್ದ. ಆತ ಅಲ್ಲಿ ನೆಲೆಸಿದ್ದಾನೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರಿನ ಉರ್ವ ಠಾಣೆಯ ಪೊಲೀಸರು ಅತನನ್ನು ಅಲ್ಲಿಂದ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಉರ್ವ ಠಾಣೆಯ ಪೊಲೀಸ್ ಅಧಿಕಾರಿ ಶ್ಯಾಮ್ ಸುಂದರ್ ಎಚ್‌.ಎಂ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಈಗ ಬಂಧಿತನಾಗಿರುವ ಕೃಷ್ಣಪ್ಪ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಒಂದೇ ಕಾರನ್ನು 8 ಬಾರಿ ಮಾರಿದ ಚಾಲಾಕಿ: 24 ಗಂಟೆಯೊಳಗೆ ಮಾರಿದ ಕಾರನ್ನು ಕದಿಯುತ್ತಿದ್ದ ಕಳ್ಳನ ಬಂಧನ

2010ರಲ್ಲಿ ಮಂಗಳೂರಿನ ನ್ಯಾಯಾಲಯವೂ ಈತನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಆದರೆ ಆರೋಪಿ ಮಾತ್ರ ಸಿಕ್ಕಿರಲಿಲ್ಲ. ಆದರೆ ಈಗ ಇಷ್ಟು ವರ್ಷಗಳ ನಂತರ ಆತನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡುವುದಕ್ಕೆ ರಾಜ್ಯ ಡಿಜಿಐಜಿಪಿಗೆ ಶಿಫಾರಸು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಆತ ಮಾಡಿದ್ದು 5 ಕೊಲೆ, ಆಕೆಯದ್ದು 1 : ಜೀವಾವಧಿ ಶಿಕ್ಷೆಗೊಳಗಾದ ಇಬ್ಬರಿಗೂ ಜೈಲಲ್ಲಿ ಪ್ರೀತಿ: ಮದುವೆಗೆ ಕೋರ್ಟ್ ಪೆರೋಲ್