ವ್ಯಕ್ತಿಯೊಬ್ಬ ಒಂದೇ ಕಾರನ್ನು ನಕಲಿ ದಾಖಲೆ ಬಳಸಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ 8 ಬಾರಿ ಮಾರಾಟ ಮಾಡಿದ್ದಾನೆ. ಕಾರು ಮಾರಾಟವಾದ 24 ಗಂಟೆಯೊಳಗೆ ಅದನ್ನು ಮತ್ತೆ ಕದಿಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ 98 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಕಳ್ಳನೋರ್ವ ಒಂದೇ ಕಾರನ್ನು ಆನ್‌ಲೈನ್‌ನಲ್ಲಿ ಬರೋಬ್ಬರಿ 8 ಬಾರಿ ಮಾರಾಟ ಮಾಡಿದ್ದಾನೆ. ಬರೀ ಅಷ್ಟೇ ಅಲ್ಲ, ಹೀಗೆ ಮಾರಾಟ ಮಾಡಿದ 24 ಗಂಟೆಯಲ್ಲಿ ಆತ ಆ ಕಾರನ್ನು ಮತ್ತೆ ಕದಿಯುತ್ತಿದ್ದ ಹೀಗೆ ಆತ ಸುಮಾರು 8 ಬಾರಿ ತನ್ನ ಒಂದೇ ಕಾರನ್ನು 8 ಜನರಿಗೆ ಮಾರಾಟ ಮಾಡಿ 24 ಗಂಟೆಯಲ್ಲಿ ಅದನ್ನು ಮತ್ತೆ ತನ್ನ ಬಳಿ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅಮೆರಿಕಾದ ಮಿಸೌರಿಯಾ ಕನಸಾ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳನ ಚಾಣಾಕ್ಷತನವೀಗ ಭಾರಿ ಚರ್ಚೆಯ ವಿಚಾರವಾಗಿದೆ. ಮಮಡೌ ಡಿಯಲ್ಲೋ ಎಂಬಾತನೇ ಹೀಗೆ ಕಾರುಗಳನ್ನು ಮಾರಾಟ ಮಾಡಿ ಕದಿಯುತ್ತಿದ್ದವ. ಈತ ಮಾರಾಟ ಒಪ್ಪಂದಗಳನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ನಕಲಿ ದಾಖಲೆಗಳನ್ನು ಬಳಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈತ ಮಾರಾಟ ಮಾಡಿದ ಕಾರುಗಳು ರಸ್ತೆಯಿಂದ ನಾಪತ್ತೆಯಾಗುವ ಮೊದಲು ಕಾರು ಖರೀದಿಸಿದವರ ಬಳಿ ಆತ ಕಾರಿಗೆ ನೀಡಬಹುದಾದ ಸಾವಿರಾರು ಡಾಲರ್ ಮೊತ್ತದ ಹಣವನ್ನು ಪಾವತಿ ಮಾಡುವಂತೆ ಹೇಳುತ್ತಿದ್ದ. ಒಂದೇ ರೀತಿ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ ಈತನ ಚಾಣಾಕ್ಷತನ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅನೇಕರು ಆತ ಒಂದೇ ಕಾರನ್ನು ಇಷ್ಟು ಸುಲಭವಾಗಿ ಮಾರಾಟ ಮಾಡಲು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಈ ವಂಚಕ ಮಾರಾಟಗಾರ ಮಮಡೌ ಡಿಯಲ್ಲೋ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾರಾಟಕ್ಕೆ ಕಾರುಗಳನ್ನು ಪಟ್ಟಿ ಮಾಡಿದ್ದ ಹಾಗೂ ನಂತರ ವಹಿವಾಟುಗಳನ್ನು ಪೂರ್ಣಗೊಳಿಸಲು ಖರೀದಿದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದ. ಈತ ಮಾನ್ಯವಾದ ದಾಖಲೆ ಮತ್ತು ಮಾರಾಟದ ಬಿಲ್‌ಗಳನ್ನು ಒಳಗೊಂಡಿರುವ ದಾಖಲೆಗಳನ್ನು ನೀಡಿದ ನಂತರ ಖರೀದಿದಾರರು ಕಾನೂನುಬದ್ಧ ಒಡೆತನ ಇರುವ ವಾಹನಗಳನ್ನು ತಾವು ಖರೀದಿಸುತ್ತಿದ್ದೇವೆ ಎಂದು ನಂಬಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಅವರಿಗೆ ಶಾಕ್ ಆಗುತ್ತಿತ್ತು. ಏಕೆಂದರೆ ಮಮಡೌ ಈ ಕಾರನ್ನು ಕೇವಲ 24 ಗಂಟೆಯೊಳಗೆ ಕೆಲವೊಮ್ಮೆ ಮಾರಾಟವಾದ 2-3 ಗಂಟೆಯೊಳಗೆ ಕಳವು ಮಾಡುತ್ತಿದ್ದ.
ಇದನ್ನೂ ಓದಿ: ಆತ ಮಾಡಿದ್ದು 5 ಕೊಲೆ, ಆಕೆಯದ್ದು 1 : ಜೀವಾವಧಿ ಶಿಕ್ಷೆಗೊಳಗಾದ ಇಬ್ಬರಿಗೂ ಜೈಲಲ್ಲಿ ಪ್ರೀತಿ: ಮದುವೆಗೆ ಕೋರ್ಟ್ ಪೆರೋಲ್
ಇದರಿಂದಾಗಿ ಹೊಸ ಮಾಲೀಕರಿಗೆ ಕಾರು ಮತ್ತು ಹಣ ಎರಡೂ ಸಿಗುತ್ತಿರಲಿಲ್ಲ. ಈ ಪ್ರಕರಣದ ತನಿಖಾಧಿಕಾರಿಗಳು ಹೇಳುವಂತೆ ಎಲ್ಲಾ ಪ್ರಕರಣಗಳು ಒಂದೇ ರೀತಿಯ ವಹಿವಾಟಿನಿಂದ ಕೂಡಿರುತ್ತಿತ್ತು. ಖರೀದಿದಾರರಿಗೆ 2013 ರ ಬೂದು ಬಣ್ಣದ ಹೋಂಡಾ ಸಿವಿಕ್ ಅಥವಾ 2013 ರ ಕಂದು ಬಣ್ಣದ ಬ್ಯೂಕ್ ವೆರಾನೊವನ್ನು ಖರೀದಿಸುತ್ತಿದ್ದರು. ಆದರೆ ಅದೇ ವಾಹನವು ಶೀಘ್ರದಲ್ಲೇ ಮತ್ತೊಂದು ಮಾರಾಟ ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ವರದಿಯಾದ ಒಂದು ಪ್ರಕರಣದಲ್ಲಿ ಈ ವಂಚಕ ಕೇವಲ ಮಾರಾಟ ಮಾಡಿದ 7 ಗಂಟೆಯ ಒಳಗೆ ಕಾರನ್ನು ವಾಪಸ್ ಕದಿದ್ದ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿತ್ತು. ಹೀಗಾಗಿ ಡಿಯಲ್ಲೋ ವಿರುದ್ಧ ಈಗ 14 ಪ್ರಕರಣಗಳು ದಾಖಲಾಗಿವೆ. ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಆತನಿಗೆ ಸುಮಾರು 98 ವರ್ಷಗಳ ಕಾಲ ಶಿಕ್ಷೆಯಾಗಬಹುದು.
ಇದನ್ನೂ ಓದಿ: ಅಯ್ಯೋ ಪಾಪಿ: ಹೊಟ್ಟೆಪಾಡಿಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ
ಈ ಎಲ್ಲಾ ಪ್ರಕರಣಗಳು 2025ರ ಮೇ ಹಾಗೂ ಜೂನ್ ತಿಂಗಳಲ್ಲಿ ನಡೆದಿದೆ. ಕಾನ್ಸಾಸ್ ಸಿಟಿ ಪೊಲೀಸರು ಫೇಸ್‌ಬುಕ್ ಮಾರುಕಟ್ಟೆ ಖರೀದಿಗಳಿಗೆ ಸಂಬಂಧಿಸಿದಂತೆ ಹಲವಾರು ಕದ್ದ ವಾಹನ ವರದಿಗಳನ್ನು ಸ್ವೀಕರಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ತನಿಖಾಧಿಕಾರಿಗಳು ಪಟ್ಟಿಗಳು, ವಾಹನಗಳು ಮತ್ತು ಕಾಗದಪತ್ರಗಳಲ್ಲಿನ ಹೋಲಿಕೆಗಳ ಆಧಾರದ ಮೇಲೆ ಇದು ಒಬ್ಬನದೇ ಕಿತಾಪತಿ ಎಂಬುದನ್ನು ಗುರುತಿಸಿದರು. ಒಟ್ಟಿನಲ್ಲಿ ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಚಾರವಾಗಿದ್ದು, ಬಹುಶಃ ಆತ ಬಹಳ ಹಣಕಾಸಿನ ಸಮಸ್ಯೆ ಎದುರಿಸುತ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೆ ಅನೇಕರು ಆತನ ಚಾಣಾಕ್ಷತನ ಹಾಗೂ ಧೈರ್ಯಕ್ಕೆ ಮೆಚ್ಚಿದ್ದಾರೆ.


